ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪುಳಿಮರಡ್ಕ ಎಂಬಲ್ಲಿ ಕಳೆದ 40 ವರ್ಷಗಳಿಂದ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿರುವ ರಸ್ತೆಯ ಸಂಪರ್ಕವಿಲ್ಲದೆ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ದಕ್ಷಿಣಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಸಾರಥ್ಯದಲ್ಲಿ ನೂತನ ರಸ್ತೆ ನಿರ್ಮಾಣಗೊಂಡು ಅದರ ಉದ್ಘಾಟನೆ ನೆರವೇರಿಸುವ ಮೂಲಕ ಬಡ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಳಿಮರಡ್ಕದ ಬಾಬು ನಾಯ್ಕ ಹಾಗೂ ಸರಸ್ವತಿ ಕುಟುಂಬ ತಮ್ಮ ಮನೆಗೆ ರಸ್ತೆ ಸಂಪರ್ಕವಿಲ್ಲದೆ ತೊಂದರೆ ಅನುಭವಿಸುತ್ತಿದ್ದರು. ಅಲ್ಲದೇ ಅಂಗವಿಕಲತೆಯ ಹೊಂದಿರುವಾಗ ಮಗನನ್ನು ಆಸ್ಪತ್ರೆಗೆ ಸಾಗಿಸಲು ತೋಟದಲ್ಲಿ ಹೊತ್ತುಕೊಂಡು ಹೋಗುವ ಪರಿಸ್ಥಿತಿ ಇತ್ತು. ಮಳೆ ಗಾಳಿ ಸಮಯದಲ್ಲಿ ಯಾವಾಗ ತೆಂಗು ಕಂಗು ತಲೆಯ ಮೇಲೆ ಬೀಳುತ್ತದೆ ಎಂಬ ಭಯದ ವಾತಾವರಣದಲ್ಲಿ ಜೀವನವನ್ನು ನಡೆಸುತ್ತಿದರು. ರಸ್ತೆ ನಿರ್ಮಿಸಿಕೊಡುವಂತೆ ಈ ಕುಟುಂಬವು ಇಲಾಖೆಗೆ ಅಲೆದಾಡಿದರೂ ನ್ಯಾಯ ಸಿಗದೆ ಇದ್ದಾಗ ಅವರು ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗಮನಕ್ಕೆ ತಂದಿದ್ದರು. ಬಡ ಕುಟುಂಬದ ಮನವಿಯಂತೆ ಮರಾಟಿ ಸಂರಕ್ಷಣಾ ಸಮಿತಿ ಹಾಗೂ ರೈತ ಸಂಘದ ಪದಾಽಕಾರಿಗಳು ರಸ್ತೆ ನಿರ್ಮಾಣಕ್ಕೆ ಇದ್ದ ಸವಾಲುಗಳನ್ನು ಎದುರಿಸಿ ರಸ್ತೆ ನಿರ್ಮಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ರಸ್ತೆಯು ಮೇ 28ರಂದು ಉದ್ಘಾಟನೆಗೊಂಡಿದ್ದು ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ್ ನಾಯ್ಕ ಕೆದಿಲರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ ನಾಯ್ಕ ಮುಂಡೋವು ಮೂಲೆ, ಸಮಿತಿಯ ಪದಾಧಿಕಾರಿ ಅಶೋಕ್ ನಾಯ್ಕ ಬೊಲ್ಲಾಡಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಅಮರನಾಥಆಳ್ವ ಕರ್ನೂರುಗುತ್ತು, ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕೊಪ್ಪಳ, ಸ್ಥಳೀಯರಾದ ಭಾಸ್ಕರ ರಾವ್ ಪುಳಿಮರಡ್ಕ ಹಾಗೂ ನೆ.ಮುಡ್ನೂರು ಗ್ರಾ.ಪಂ ಸದಸ್ಯ ಚಂದ್ರಹಾಸ ಈಶ್ವರಮಂಗಲ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಮೀನಾಕ್ಷಿ ಭಾಸ್ಕರ ರಾವ್ ಸ್ವಾಗತಿಸಿ, ವಂದಿಸಿದರು.