ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ  ಶಾಲಾ ಪ್ರಾರಂಭೋತ್ಸವ

0

ಗುರುಕುಲ ಮಾದರಿಯ ಶಿಕ್ಷಣ ಕೊಡಿಸುವಲ್ಲಿ ಮಾತೆಯರು‌ ಸಿದ್ದರಾಗಿದ್ದಾರೆ: ಒಡಿಯೂರು ಶ್ರೀ
ವಿದ್ಯಾರ್ಥಿಗಳ ಆಗಮನ ಶಾಲೆಗೆ ಹೊಸ ಚೈತನ್ಯವನ್ನು ತಂದಿದೆ: ಸಾಧ್ವಿ ಶ್ರೀ ಮಾತಾನಂದಮಯೀ
ವಿದ್ಯಾರ್ಥಿಗಳಲ್ಲಿ ನೈತಿಕತೆ ಹುಟ್ಟಿಸುವ ಕೆಲಸವಾಗಬೇಕಿದೆ: ಸೇರಾಜೆ ಗಣಪತಿ ಭಟ್

ವಿಟ್ಲ: ನಾವು ಏನೇ ಮಾಡಿದರು ಅದರ ಆರಂಭ ಮತ್ತೆ ಅಂತ್ಯದ ಅರಿವಿರಲಿ. ನಮ್ಮ ಮನದಲ್ಲಿ ಹಾಕಿಕೊಳ್ಳಬೇಕಾದ ವಿಚಾರವಿದು. ಹುಟ್ಟು ಸಾವಿನ ನಡುವಿನ ದಿನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಆಧ್ಯಾತ್ಮಿಕತೆ ಬದುಕಿನಲ್ಲಿ ಬೆಳಸಿಕೊಳ್ಳಬೇಕು. ನಾವು ಸ್ನೇಹ ಜೀವಿಗಳಾಗಿರಬೇಕು. ಗುರುಕುಲ ಮಾದರಿಯ ಶಿಕ್ಷಣ ಕೊಡಿಸುವಲ್ಲಿ ಮಾತೆಯರು‌ ಸಿದ್ದರಾಗಿದ್ದಾರೆ. ರಾಷ್ಟ ನಿರ್ಮಾಣದಲ್ಲಿ ಯುವಪೀಳಿಗೆಯ ಪಾತ್ರ ಮಹತ್ವದ್ದು  ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಹೇಳಿದರು. 

ಅವರು ಮೇ.31ರಂದು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರವುವನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ನೈತಿಕ‌ ಮೌಲ್ಯ‌ ಸೇರಿಕೊಂಡಲ್ಲಿ ಆದರ್ಶ ಬದುಕಾಗುತ್ತದೆ‌. ಆದರ್ಶ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು. ಪರಿವರ್ತನೆ ಜಗತ್ತಿನ ನಿಯಮ. ಧರ್ಮ ಪ್ರಜ್ಞೆ ಯೊಂದಿಗೆ ರಾಷ್ಟ್ರ ಕಟ್ಟೋಣ. ಬದುಕು ಉಜ್ವಲತೆಯಿಂದ ಕೂಡಿರಲು ಧರ್ಮ ಪ್ರಜ್ಞೆ ಅಗತ್ಯ. ಇತಿಮಿತಿಯ ಬದುಕು ನಿಜವಾದ ಬದುಕು. ಶಾಲೆಯ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ.  ಯಾವುದೇ ವಿಚಾರವನ್ನು ಧನಾತ್ಮಕವಾಗಿ ತೆಗೆದುಕೊಂಡು ಬದುಕೋಣ ಎಂದರು. ಎಲ್ಲರ ಸಹಕಾರದೊಂದಿಗೆ ಈ ಒಂದು ವಿದ್ಯಾಪೀಠವನ್ನು  ಆದರ್ಶ ಶಿಕ್ಷಣಸಂಸ್ಥೆಯಾಗಿ  ಮಾಡೋಣ ಎಂದರು.

ಸಾಧ್ವಿ ಶ್ರೀ ಮಾತಾನಂದಮಯೀರವರು ಆಶೀರ್ವಚನ ನೀಡಿ ವಿದ್ಯಾರ್ಥಿಗಳ ಆಗಮನ ಶಾಲೆಗೆ ಹೊಸ ಚೈತನ್ಯವನ್ನು ತಂದಿದೆ. ಹಳ್ಳಿಯ ಬಡ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆನ್ನುವುದು ಗುರುಗಳ ಮನದ ಇಚ್ಚೆಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ನಮಗೆ ಇಲ್ಲಿ ಸಮಾನರೆ. ಎಲ್ಲರನ್ನು‌ ಉತ್ತಮ ಪ್ರಜೆಗಳನ್ನಾಗಿ ರೋಪಿಸುವ ಪ್ರಯತ್ನ ನಮ್ಮ ವಿದ್ಯಾಪೀಠದ್ದಾಗಿದೆ.  ವಿದ್ಯಾಪೀಠದ ಹುಟ್ಟು ಬದುಕು ಶಿಕ್ಷಣ ನೀಡುವ ಉದ್ದೇಶ. ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದರು.

ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಶ್ರೀಗಳ ಸದಾಶಯದಂತೆ ಈ ಶಾಲೆಯ ಹುಟ್ಟು ಆಗಿದೆ. ಗುರುಗಳ ಆಶಯವನ್ನು ಸಾಕಾರ ಮಾಡುವ ಕೆಲಸ ಇಲ್ಲಿ ನಡೆಯುತ್ತಿದೆ. ಉತ್ತಮ ಗುಣಮಟ್ಟದೊಂದಿಗೆ ಸಂಸ್ಕಾರ ಭರಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಗುರುಕುಲ ಮಾದರಿಯ ಶಿಕ್ಷಣ ಕೊಡುವ ಉದ್ದೇಶದಿಂದ ಈ ವಿದ್ಯಾಸಂಸ್ಥೆಯ ಸ್ಥಾಪನೆಯಾಗಿದೆ‌. ಭಾರತೀಯತೆ ಮೈಗೂಡಿಸುವ ಉದ್ದೇಶ ಸಂಸ್ಥೆಯದ್ದಾಗಿದೆ. ಮಕ್ಕಳಿಗೆ ಸಂಸ್ಕಾರ ಶಿಸ್ತು ಕಲಿಸುವ ಕೆಲಸ ನಮ್ಮ  ವಿದ್ಯಾಸಂಸ್ಥೆಗಳಿಂದ ಆಗುತ್ತಿದೆ ಎನ್ಜುವುದು ಸಂತಸದ ವಿಚಾರ. ವಿದ್ಯಾರ್ಥಿಗಳಲ್ಲಿ ನೈತಿಕತೆ ಕಡಿಮೆಯಾದಲ್ಲಿ ಅಡ್ಡದಾರಿ ಹಿಡಿಯುತ್ತಾರೆ. ನಾವೆಲ್ಲರೂ ಜೊತೆಯಾಗಿ ಸಾಗಿದಾಗ ವಿದ್ಯಾರ್ಥಿಗಳ ಭವಿಷ್ಯವನ್ನು ಸ್ವಚ್ಚಂದ ಮಾಡಲು‌ ಸಾಧ್ಯ ಎಂದರು.

ಸಂಸ್ಥಾನದ ಕಾರ್ಯನಿರ್ವಾಹಕರಾದ ಪದ್ಮನಾಭ ಒಡಿಯೂರು,  ಶಾಲಾ ಸಹ ಶಿಕ್ಷಕರಾದ ಶೇಖರ ಶೆಟ್ಟಿ ಬಾಯಾರು, ಮಾತೃ ಮಂಡಳಿಯ ಸಂಚಾಲಕರಾದ ವಿದ್ಯಾಲಕ್ಷ್ಮೀ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹೊಸದಾಗಿ ಗುರುಕುಲಕ್ಕೆ  ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಹೂ ನೀಡಿ‌ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಸಮವಸ್ತ್ರ ವಿತರಣೆ ಮಾಡಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು‌ ಸ್ವಾಮೀಜಿಯವರು ಗೌರವಿಸಿದರು.

ಶಾಲಾ ವಿದ್ಯಾರ್ಥಿಗಳು  ಪ್ರಾರ್ಥನೆ ಹಾಡಿದರು. ಮುಖ್ಯ ಶಿಕ್ಷಕಿ ರೇಣುಕಾ‌ ಎಸ್.ರೈ ಸ್ವಾಗತಿಸಿದರು.  ಶಿಕ್ಷಕಿ ಅರುಣ‌ ವಂದಿಸಿದರು.  ಶಿಕ್ಷಕಿ ಪೂರ್ಣಿಮಾ, ಶಿಕ್ಷಕಿ ದಿವ್ಯ ಕಾರ್ಯಕ್ರಮ ನಿರೂಪಿಸಿದರು.  ಭಾರತಿ, ಕವಿತಾ ಮಾತಾಜಿ ವಿವಿಧ ಜವಾಬ್ದಾರಿಯನ್ನು ನಿಭಾಯಿಸಿದರು. 

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಆರ್ಥಿಕವಾಗಿ ಹಿಂದುಳಿದು ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು. ವಿದ್ಯಾರ್ಥಿಗಳ ಆಯ್ಕೆಗೆ ಕೆಲವೊಂದು ನಿಬಂಧನೆಗಳನ್ನು ವಿಧಿಸಲಾಗಿದ್ದು,‌ ಇದಕ್ಕೆ ಬದ್ಧರಾಗಿರುವ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆಯೊಂದಿಗೆ ಶಿಕ್ಷಣವನ್ನು ನೀಡಲಾಗುವುದು. ಈ ಭಾರಿ ಸುಮಾರು 25 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಬಡವಿದ್ಯಾರ್ಥಿಗಳು‌ ಅರ್ಜಿ‌ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥಾನದ ಕಚೇರಿಯನ್ನು ಸಂಪರ್ಕಿಸಹುದು
–ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀಗುರುದೇವದತ್ತ ಸಂಸ್ಥಾ‌ನ ಒಡಿಯೂರು

LEAVE A REPLY

Please enter your comment!
Please enter your name here