ಪುತ್ತೂರು: ಕಡಬ ಸಮೀಪದ ತಲೆಕ್ಕಿಯಲ್ಲಿ ವಿದ್ಯುತ್ ತಂತಿ ದುರಸ್ಥಿ ವೇಳೆ ಶಾಕ್ ಹೊಡೆದು ಪುತ್ತೂರು ಮೆಸ್ಕಾಂ ವ್ಯಾಪ್ತಿಯ ಪವರ್ ಮ್ಯಾನ್ ಮೃತಪಟ್ಟಿದ್ದಾರೆ, ಸುದ್ದಿ ತಿಳಿದು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು ಮೃತದೇಹವನ್ನು ವಿಕ್ಷಣೆ ಮಾಡಿ ಸಹೋದ್ಯೋಗಿಗಳ ರೋಧನವನ್ನು ಕಂಡು ಕಣ್ಣೀರಾದ ಘಟನೆ ನಡೆದಿದೆ.
ಮೃತ ಪವರ್‌ಮ್ಯಾನ್ ದ್ಯಾಮಣ್ಣ ದೊಡನಿ ಬಗ್ಗೆ ಸಹೋದ್ಯೋಗಿಗಳಿಂದ ಮಾಹಿತಿ ಪಡೆದ ಶಾಸಕರು ಮೃತದೇಹವನ್ನು ಹುಟ್ಟೂರಿಗೆ ಕೊಂಡೊಯ್ಯಲು ಬೇಕಾದ ವ್ಯವಸ್ಥೆ ಮಾಡುವಂತೆ ಸೂಚಿಸಿದರಲ್ಲದೆ ಮೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಶಾಸಕರು ದುರಸ್ತಿ ವೇಳೆ ಜೀವಕ್ಕೆ ಹಾನಿಯಾಗಿದೆ, ಯಾಕೆ ಹೀಗಾಗಿದೆ ಎಂದು ಪ್ರಶ್ನಿಸಿದ್ದಾರೆ. ಕರೆಂಟ್ ಇರುವ ವೇಳೆ ಕಂಬಕ್ಕೆ ಹತ್ತಿದ್ದರೇ? ದುರಸ್ತಿ ವೇಳೆ ಕರೆಂಟ್ ಚಾರ್ಜ್ ಮಾಡಲಾಯಿತೇ? ಇದೆಲ್ಲದರ ಬಗ್ಗೆ ವರದಿ ನಿಡುವಂತೆ ಸೂಚಿಸಿದರು.
ಬಾಗಲಕೋಟೆ ಮೂಲದ ದ್ಯಾಮಣ್ಣ ದೊಡ್ಮನಿ ಕಳೆದ 8 ವರ್ಷಗಳಿಂದ ಪುತ್ತೂರು ಉಪವಿಭಾಗದಲ್ಲಿ ಪವರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು ಇಂದು ಬೆಳಿಗ್ಗೆ ಕಂಬ ಏರಿ ವಿದ್ಯುತ್ ತಂತಿ ದುರಸ್ತಿ ವೇಳೆ ವಿದ್ಯುತ್ ಶಾಕ್ ನಿಂದ ಕಂಬದಲ್ಲಿಯೇ ಮೃತ ಪಟ್ಟಿದ್ದರು. ವಿವಾಹಿತರಾಗಿರುವ ದೊಡ್ಮನಿ 6ತಿಂಗಳ ಮಗು ಮತ್ತು ಪತ್ನಿಯೊಂದಿಗೆ ಕಡಬದಲ್ಲಿ ವಾಸವಿದ್ದರು.