ಕಡಬ: ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಯನ್ನು ಸರಿಪಡಿಸಲು ವಿದ್ಯುತ್ ಕಂಬವೇರಿದ್ದ ಕಡಬ ಮೆಸ್ಕಾಂನ ಪವರ್ ಮ್ಯಾನ್ ದ್ಯಾಮಣ್ಣ ದೊಡ್ಮನಿ (26) ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರ್ಲಕ್ಷ ತೋರಿದ ಆರೋಪದಲ್ಲಿ ಕಡಬ ಮೆಸ್ಕಾಂ ಉಪವಿಭಾಗದ ಇಬ್ಬರು ಇಂಜಿನಿಯರ್‌ಗಳ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪವರ್ ಮ್ಯಾನ್ ದ್ಯಾಮಣ್ಣ ದೊಡ್ಮನಿ ಅವರ ತಂದೆ ರೇವಣ್ಣಪ್ಪ ನೀಡಿದ ದೂರಿನಂತೆ ಕಡಬ ಉಪವಿಭಾಗದ ಸಹಾಯಕ ಇಂಜಿನಿಯರ್ ಸತ್ಯನಾರಾಯಣ್ ಕೆ.ಸಿ, ಕಿರಿಯ ಇಂಜಿನಿಯರ್ ವಸಂತ್ ವಿರುದ್ದ ಐ.ಪಿ.ಸಿ. ಕಲಂ 304(0) ರಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಮಗನಾದ ದ್ಯಾಮಣ್ಣ ದೊಡ್ಮನಿ (26) ಮೆಸ್ಕಾಂ ಮಂಗಳೂರು ವೃತ್ತ ಪುತ್ತೂರು ವಿಭಾಗ ಕಡಬ ಉಪವಿಭಾಗದ ಕಡಬ ಶಾಖೆಯಲ್ಲಿ ಹಿರಿಯ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ:31.05.2023 ರಂದು ರಾತ್ರಿ ವಿಪರೀತ ಮಳೆ ಸುರಿದ ಕಾರಣ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ವಿದ್ಯುತ್ ವ್ಯತ್ಯಯ ಉಂಟಾದ ಕಾರಣ ದುರಸ್ಥಿಗೆ ನನ್ನ ಮಗನು ಹೋಗಿ ವಿದ್ಯುತ್ ಕಂಬ ಏರಿ ವಿದ್ಯುತ್ ದುರಸ್ತಿ ಮಾಡುವಾಗ ಹಠಾತ್ ವಿದ್ಯುತ್ ಪ್ರವಹಿಸಿ ದಿನಾಂಕ: 01.06.2023 ರಂದು ಮೃತಪಟ್ಟಿರುತ್ತಾನೆ. ನನ್ನ ಮಗ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಇದ್ದು ಆ ಸಮಯ ಸ್ಥಳೀಯರು ಕೋಲಿನಿಂದ ಕೆಳಗಿಳಿಸಿ ಬಳಿಕ ಚಿಕಿತ್ಸೆಗಾಗಿ ಕಡಬ ಸಮುದಾಯ ಕೇಂದ್ರಕ್ಕೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿರುತ್ತದೆ. ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ವಿದ್ಯುತ್ ದುರಸ್ಥಿ ಮಾಡುವ ಸ್ಥಳದಲ್ಲಿ ಎರಡು ಟ್ರಾನ್ಸ್ ಫಾರ್ಮ್‌ಗಳ ಎರಡು ಲೈನ್‌ಗಳು ಹಾದು ಹೋಗಿದ್ದು ಒಂದು ಲೈನ್ ಮಾತ್ರ ಆಫ್ ಮಾಡಲಾಗಿತ್ತು. ಮತ್ತೊಂದು ಲೈನ್ ನಲ್ಲಿ ವಿದ್ಯುತ್ ಪ್ರವಹಿಸಿರುವುದರಿಂದ ಮೃತಪಟ್ಟಿರುವುದಾಗಿರುತ್ತದೆ. ಮಗನ ಜೊತೆಗೆ ಹಿರಿಯ ಅಧಿಕಾರಿಗಳಾಗಲಿ ಅಥವಾ ಸಹಾಯಕರನ್ನು ಜೊತೆಗೆ ಕಳುಹಿಸಿರಲಿಲ್ಲ. ಹೆಲ್ಮೆಟ್ ಹ್ಯಾಂಡ್‌ಗ್ಲೋಸ್ ಶೂ, ಯಾವುದೇ ಸೇಫ್ಟಿ ಸಾಮಾಗ್ರಿಗಳನ್ನು ನೀಡದೆ ವಿದ್ಯುತ್ ದುರಸ್ಥಿ ಕೆಲಸಕ್ಕೆ ನಿಯೋಜಿಸಿ ನಿರ್ಲಕ್ಷತನದಿಂದ ವಿದ್ಯುತ್ ಕಂಬ ಹತ್ತಲು ಹೇಳಿ ಮಗನ ಸಾವಿಗೆ ಕಾರಣರಾದ ಮೆಸ್ಕಾಂ ಕಡಬದ ಸಹಾಯಕ ಇಂಜಿನಿಯರ್ ಸತ್ಯನಾರಾಯಣ ಸಿ ಕೆ ಮತ್ತು ಕಿರಿಯ ಇಂಜಿನಿಯರ್ ವಸಂತ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತ ಪವರ್ ಮ್ಯಾನ್ ದ್ಯಾಮಣ್ಣ ದೊಡ್ಮನಿ ತಂದೆ ರೇವಣ್ಣಪ್ಪ ದೊಡ್ಮನಿ ಅವರು ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.