ಪುತ್ತೂರು: ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ನಡೆಯುತ್ತಿರುವ ಧಾರ್ಮಿಕ ಶಿಕ್ಷಣ ಕೇಂದ್ರದ ನೂತನ ಶಾಖೆಯು ಬಂಟ್ವಾಳ ತಾಲೂಕಿನ ಪುಣಚ ಶ್ರೀದೇವಿ ನಗರ ಶ್ರೀದೇವಿ ಪ್ರೌಢಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಧಾರ್ಮಿಕ ಶಿಕ್ಷಣ ಕೇಂದ್ರದ ಸಂಯೋಜಕ ಎಂ. ಸತೀಶ ಭಟ್ ರಾಮಕುಂಜ ಮಾತನಾಡಿ, ಎಳವೆಯಲ್ಲಿಯೇ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಬೇಕೆಂಬ ಸದುದ್ದೇಶದಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಪ್ರಸಾದ ಮುಳಿಯ ಅವರು ರೂಪಿಸಿದ ಧಾರ್ಮಿಕ ಶಿಕ್ಷಣ ಯೋಜನೆಯ ಉದ್ದೇಶ ಹಾಗೂ ಅನುಷ್ಠಾನ ವಿಧಾನವನ್ನು ವಿವರಿಸಿ ನೂತನ ಕೇಂದ್ರದ ಮುಂದಿನ ಚಟುವಟಿಕೆಗಳಿಗೆ ಶುಭ ಹಾರೈಸಿದರು.
ಪ್ರೌಢಶಾಲಾ ಆಡಳಿತ ಮಂಡಳಿಯ ಸಹ ಸಂಚಾಲಕರೂ, ನಿವೃತ್ತ ಮುಖ್ಯೋಪಾಧ್ಯಾಯಿನಿಯೂ ಆಗಿರುವ ಗಂಗಮ್ಮ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ರಜನಿ ವಂದಿಸಿದರು. ವೇದಿಕೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಲೋಕೇಶ್ ಎಸ್. ಉಪಸ್ಥಿತರಿದ್ದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.