ಪುತ್ತೂರು: ಮಾಯ್ ದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯಲ್ಲಿ 2022- 23 ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮವು ಮಾಯ್ ದೆ ದೇವುಸ್ ಸಭಾಂಗಣದಲ್ಲಿ ಜೂನ್ 3 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರಾದ ಅ|ವ| ಲಾರೆನ್ಸ್ ಮಸ್ಕರೇನ್ಹಸ್ ರವರು 44 ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಅಭಿನಂದಿಸಿ ವಿದ್ಯಾರ್ಥಿಗಳು ಪ್ರತಿಭೆಗಳ ಕಣಜ. ಈ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಸವಲತ್ತು ದೊರೆತಾಗ ಆ ಪ್ರತಿಭೆಗಳು ಪ್ರಜ್ವಲವಾಗಲು ಸಾಧ್ಯ. ನಾವು ಕೇವಲ ಪುರಸ್ಕಾರಗಳನ್ನು ಪಡೆಯುವವರು ಮಾತ್ರ ಆಗದೆ, ಸಮಾಜಕ್ಕೆ ಪ್ರತಿಫಲ ನೀಡುವ ಹಾಗೂ ಪ್ರೀತಿಯನ್ನು ಹಂಚುವ ಸಹೃದಯಿಗಳಾಗಬೇಕೆಂದು ಸಂದೇಶ ನೀಡಿ ಆಶೀರ್ವಾದಿಸಿದರು.
ಕಳೆದ ಸಾಲಿನ ರಕ್ಷಕ ಶಿಕ್ಷಕ ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಅಪರ್ಣಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ವಿದ್ಯೆ ಕೇವಲ ಪುರಸ್ಕಾರಗಳಿಗೆ ಸೀಮಿತವಾಗದೆ ಸಮಾಜದಲ್ಲಿ, ಮೌಲ್ಯಧಾರಿತ ಜೀವನ ನಡೆಸಲು ಪೂರಕವಾಗಿರಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ ಜೀವನದಲ್ಲಿ ಗುರಿ ಇರಬೇಕು, ಆ ಗುರಿ ತಲುಪಲು ಸತತ ಪ್ರಯತ್ನ ಅಗತ್ಯ ಹಾಗೂ ನಿಮ್ಮ ಯಶಸ್ವಿಗೆ ಕಾರಣಕರ್ತರಾದ ನಿಮ್ಮ ಹೆತ್ತವರು, ವಿದ್ಯೆ ನೀಡಿದ ಗುರುಗಳು, ಹಾಗೂ ಶಾಲೆಯನ್ನು ಎಂದಿಗೂ ಮರೆಯದಿರಿ ಎಂದು ಶುಭ ಹಾರೈಸಿದರು.
ಪೂಜ್ಯ ಸಂಚಾಲಕರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 44 ವಿದ್ಯಾರ್ಥಿನಿಯರಿಗೆ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಹಾಗೂ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿಧ್ಯಾರ್ಥಿನಿಯರಾದ ಕು. ಎಸ್ ಅನಿಕ ಹಾಗೂ ಕು. ವಿನುತ ಬಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಶಾಲಾ ವಾದ್ಯವೃಂದದೊಂದಿಗೆ ಬರಮಾಡಿಕೊಳ್ಳಲಾಯಿತು. ಸಮಾರಂಭವು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೋಸಲಿನ್ ಲೋಬೊ ಪ್ರಾಸ್ತವಿಕವಾಗಿ ಮಾತನಾಡಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿನಿಯರನ್ನು ಅಭಿನಂದಿಸಿ, ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿ, ನೆರೆದ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಫೆಲ್ಸಿ ಡಿಸೋಜ ವಂದಿಸಿದರು. ಶಿಕ್ಷಕಿ ಶ್ರೀಮತಿ ಲೆನಿಟಾ ಮೋರಸ್ ಶಾಲಾ ಪರವಾಗಿ ಪುರಸ್ಕೃತ ವಿದ್ಯಾರ್ಥಿನಿಯರಿಗೆ ಅಭಿನಂದಿಸಿದರು. ಶಿಕ್ಷಕಿ ಶ್ರೀಮತಿ ರೂಪ ಡಿಕೋಸ್ಟ ಕಾರ್ಯಕ್ರಮ ನಿರೂಪಿಸಿದರು