ತೆಕ್ಕಾರು ಗ್ರಾ.ಪಂ ಪಿಡಿಒ,ಸಿಬ್ಬಂದಿ ಮೇಲೆ ಹಲ್ಲೆ- ಮೂವರ ವಿರುದ್ದ ಕೇಸು ದಾಖಲು

0

ಪತ್ತೂರು: ತೆಕ್ಕಾರು ಗ್ರಾ.ಪಂ ಪಿಡಿಒ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ, ಸರಕಾರಿ ಸೊತ್ತು ನಾಶ, ನಗದು ದರೋಡೆ ಹಾಗೂ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಒ‌ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಮೂರು ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಗ್ರಾ.ಪಂ ಸದಸ್ಯೆ ಯಮುನಾ, ಅವರ ಪುತ್ರ ನವೀನ್ ನಾಯ್ಕ್ ಮತ್ತು ಸ್ಥಳೀಯ ನಿವಾಸಿ ಮಂಜುನಾಥ ಸಾಲಿಯಾನ್ ಎಂಬವರೇ ಕೃತ್ಯವೆಸಗಿದವರೆಂದು ಎಫ್ ಐ ಆರ್ ನಲ್ಲಿ ಉಲ್ಲೇಖವಾಗಿದೆ.

ತೆಕ್ಕಾರು ಗ್ರಾ.ಪಂ ಸ್ವಚ್ಚತಾ ಸಿಬ್ಬಂದಿ ಪ್ರಮೀಳಾ ಮತ್ತು ಪಿಡಿಒ ಸುಮಯ್ಯಾ ಅವರು ಈ ಸಂಬಂಧ ಠಾಣೆಗೆ ದೂರು ನೀಡಿದ್ದಾರೆ.

ಗ್ರಾ.ಪಂ ಕಟ್ಟಡವನ್ನು ಯಮುನಾ ಅವರು ಅತಿಕ್ರಮಿಸಿಸಿಕೊಂಡು‌ ನೆಲೆಸಿರುವ ಬಗ್ಗೆ ಈಗಾಗಲೇ ವ್ಯಾಜ್ಯ ಇದೆ. ಅದೇ ಕಟ್ಟಡದಲ್ಲಿ ಶಾಸಕ ಹರೀಶ್ ಪೂಂಜ ಅವರು ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾಗಿರುವ ಬಗ್ಗೆ ಅಭಿನಂದನೆ ಸಲ್ಲಿಸಿ ಬ್ಯಾನರ್ ಅಳವಡಿಸಲಾಗಿತ್ತು. ಅದನ್ನು ತೆರವುಗೊಳಿಸುವಂತೆ ಗ್ರಾ.ಪಂ ವತಿಯಿಂದ ಸಿಬ್ಬಂದಿ ಪ್ರಮೀಳಾ ಅವರು ಯಮುನಾ ಅವರಿಗೆ ನೋಟೀಸು ನೀಡಿ ಸ್ವೀಕೃತಿ ಪಡೆದು ಪಂಚಾಯತ್ ಗೆ ಮರಳಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಯಮುನಾ ಮತ್ತು ಅವರ ಪುತ್ರ ನವೀನ್ ನಾಯ್ಕ , ಮಂಜುನಾಥ ಸಾಲಿಯಾನ್ ಎಂಬವರ ಕುಮ್ಮಕ್ಕಿನಿಂದ ಪಂಚಾಯತ್ ಕಛೇರಿಗೆ ಬಂದು ಸ್ವೀಕೃತಿ ಪತ್ರ ಮರಳಿ ನೀಡುವಂತೆ ಒತ್ತಾಯಿಸಿ ಜಗಳ ಮಾಡಿದ್ದಾರೆ. ಸಿಬ್ಬಂದಿ ಮತ್ತು ಪಿಡಿಒ‌ ಮೇಲೆ ಹಲ್ಲೆ ನಡೆಸಿ ಅವರ ದೇಹದ ಭಾಗಗಳ‌ ಮೇಲೆ‌ ಕೈ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಾರೆ. ಅಲ್ಲದೇ ಗ್ರಾ.ಪಂ ಸೊತ್ತಾಗಿರುವ ಮೊಬೈಲ್‌ ಫೋನ್‌ ನ್ನು ಕಿತ್ತುಕೊಂಡು ನೆಲಕ್ಕೆ ಅಪ್ಪಳಿಸಿ ಹಾನಿ ಮಾಡಿರುತ್ತಾರೆ. ಪಂಚಾಯತ್ ನಲ್ಲಿದ್ದ ಸರಕಾರಿ ಹಣ 3000 ರೂ. ದೋಚಿ ಓಮ್ನಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖವಾಗಿದೆ. ಪಂಚಾಯತ್ ಎಡೆಂಡರ್ ಅವರ ಹುದ್ದೆ ಖಾಲಿ ಇರುವುದರಿಂದ ಪಿಡಿಒ ನಿರ್ದೇಶನದ ಮೇರೆಗೆ ಸ್ವಚ್ಚತಾ ಸಿಬ್ಬಂದಿ ಪ್ರಮೀಳಾ ನೋಟೀಸು ನೀಡುವ ಕರ್ತವ್ಯ ಮಾಡಿ ಬಂದಿದ್ದರು. ತನ್ನ ಮೇಲೆ ಆಗಿರುವ ಹಲ್ಲೆ, ಜೀವ ಬೆದರಿಕೆ ಸಂಬಂಧ ಪಟ್ಟಂತೆ ಪ್ರಮೀಳಾ ಪಿಡಿಒ‌ ಅವರಿಗೆ ದೂರು ಸಲ್ಲಿಸಿದ್ದು,ದೂರಿನ ಹಿನ್ನೆಲೆಯಲ್ಲಿ ಪಿಡಿಒ ಸುಮಯ್ಯಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಸುಮಯ್ಯಾ ಅವರು ನೀಡಿರುವ ದೂರಿನಂತೆ ಕ್ರಮ ಕೈಗೊಂಡಿರುವ ಪೊಲೀಸರು ಐಪಿಸಿ ಸೆಕ್ಷನ್ 109, 504, 323, 506, 354, 353, 392, 34, 2(A) ದಂಡ ಸಂಹಿತೆಯಂತೆ ಕ್ರಿಮಿನಲ್ ಕೃತ್ಯ, ನಿಂದನೆ, ಮಾನಭಂಗ ಯತ್ನ, ಸರಕಾರಿ ಕರ್ತವ್ಯಕ್ಕೆ ಅಡ್ಡಿ, ದರೋಡೆ, ಸರಕಾರಿ ಸೊತ್ತು ನಾಶ, ಇತ್ಯಾದಿಯಡಿ ಕೇಸು ದಾಖಲಿಸಿಕೊಂಡಿದ್ದಾರೆ.‌

LEAVE A REPLY

Please enter your comment!
Please enter your name here