‘ಸುದ್ದಿಯ ಜನಾಂದೋಲನ’- ಭ್ರಷ್ಟಾಚಾರದ ವಿರುದ್ಧ ರಾಜ್ಯದಲ್ಲಿ ಜನಜಾಗೃತಿಯ ಕಿಡಿ ಹಚ್ಚಿದೆ

0

ಭ್ರಷ್ಟಾಚಾರ ನಿರ್ಮೂಲನೆ ಭರವಸೆ ಕಾಂಗ್ರೆಸ್ ಗೆಲುವಿಗೆ ಕಾರಣವಾದರೆ ಬಿಜೆಪಿಯ ‘ಯೆ ಚಲ್ತಾ ಹೆ, ಚಲ್ನೆ ದೋ‘ ಧೋರಣೆ ಸೋಲಿಗೆ ಕಾರಣವಾಗಿದೆ

ಸುದ್ದಿ ಜನಾಂದೋಲನ ವೇದಿಕೆ ಕಳೆದ 3 ವರ್ಷಗಳಿಂದ ಲಂಚ, ಭ್ರಷ್ಟಾಚಾರ ವಿರುದ್ಧದ ಆಂದೋಲನವನ್ನು ಜನಾಂದೋಲನವಾಗಿ ಮಾಡಲು ಪ್ರಯತ್ನಿಸಿದೆ. ಲಂಚ, ಭ್ರಷ್ಟಾಚಾರ ನಿಲ್ಲಲು ಸಾಧ್ಯವಿಲ್ಲ ಅದರ ವಿರುದ್ಧ ಹೋರಾಟ ವ್ಯರ್ಥ ಎಂದು ಹೇಳಿದವರಿಗೆ ಜನರು ಬಯಸಿದರೆ ಅದು ಸಾಧ್ಯವಿದೆ ಎಂಬ ಉತ್ತರವನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಭ್ರಷ್ಟಾಚಾರ ನಿಲ್ಲಿಸಲೇ ಬೇಕು ಎಂದು ಜನಜಾಗೃತಿ ಉಂಟಾದಾಗ ಓಟಿಗೆ ನಿಲ್ಲುವ ವ್ಯಕ್ತಿ ಬದಲಾಗುತ್ತಾನೆ. ಲಂಚ, ಭ್ರಷ್ಟಾಚಾರ ನಿರ್ಮೂಲನೆಯೇ ಅವನ ಚುನಾವಣೆಯ ಪ್ರಣಾಳಿಕೆಯಾಗುತ್ತದೆ. ಆರಿಸಿ ಬರುವ ಸರಕಾರವು ಅದನ್ನೇ ತಮ್ಮ ಘೋಷಣೆಯನ್ನಾಗಿ ಮಾಡಿಕೊಳ್ಳುತ್ತಾರೆ ಇಲ್ಲದಿದ್ದರೆ ಸೋಲನ್ನು ಅನುಭವಿಸುತ್ತಾರೆ, ಎಂಬುವುದನ್ನು ಹಲವಾರು ಬಾರಿ ಜನರ ಮುಂದಿಟ್ಟಿದ್ದೇನೆ. ಆ ರೀತಿಯ ಜನಜಾಗೃತಿ ಉಂಟಾಗಲು ಪ್ರಧಾನಿ ಮೋದಿಜಿಯವರ, ರಾಹುಲ್ ಗಾಂಧೀಜಿಯವರ ಕ್ಷೇತ್ರದಲ್ಲಿ ಲೋಕಸಭೆಗೆ ಸ್ಪರ್ಧಿಸಲು ಬಯಸಿದ್ದೆ. ಅಲ್ಲಿ ಪ್ರಚಾರವನ್ನೂ ಮಾಡಿದ್ದೆ. ಈ ಸಲ ರಾಜ್ಯದಲ್ಲಿ ಸಿದ್ದರಾಮಯ್ಯರ ಕ್ಷೇತ್ರ ವರುಣಾದಲ್ಲಿ, ಬಸವರಾಜ್ ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾಂವಿಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಮತದಾರರ ಜಾಗೃತಿಯನ್ನು ಉಂಟು ಮಾಡಲು ಸ್ಪರ್ಧೆ ಕೂಡ ಮಾಡಿದ್ದೆ. ಆ ಎರಡು ಕಡೆಗಳಲ್ಲಿಯೂ ಕೂಡ ನಮ್ಮ ಆಂದೋಲನಕ್ಕೆ ವ್ಯಾಪಕ ಬೆಂಬಲ ದೊರಕಿದೆ.

ಈ ಆಂದೋಲನದ ಪರಿಣಾಮವಾಗಿ ಸುಳ್ಯ ಕ್ಷೇತ್ರದಲ್ಲಿ ಆರಿಸಿ ಬಂದಿರುವ ಭಾಗೀರಥಿಯವರು ತಾಲೂಕಿನ ಯಾವುದೇ ಇಲಾಖೆಯಲ್ಲಿ ಲಂಚ, ಭ್ರಷ್ಟಾಚಾರ ನಡೆಸಲು ಬಿಡುವುದಿಲ್ಲ ಎಂದು ಸಾರ್ವಜನಿಕವಾಗಿ ತಿಳಿಸಿದ್ದಾರೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರಂತು ಲಂಚ, ಭ್ರಷ್ಟಾಚಾರ ನಿರ್ಮೂಲನೆಯನ್ನು ತಮ್ಮ ಮುಖ್ಯ ಅಜೆಂಡಾವಾಗಿ ಘೋಷಿಸಿದ್ದಾರೆ. ಪ್ರತಿಯೊಂದು ಸಭೆಯಲ್ಲಿಯೂ ಅದನ್ನು ಉಲ್ಲೇಖಿಸಿ ಲಂಚ, ಭ್ರಷ್ಟಾಚಾರಕ್ಕೆ ಒಳಗಾದವರು ತಮ್ಮನ್ನು ಸಂಪರ್ಕಿಸುವಂತೆ ಕರೆ ಕೊಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜರವರು ಚುನಾವಣೆಗೆ ಮೊದಲು ಲಂಚ, ಭ್ರಷ್ಟಾಚಾರ ವಿರುದ್ಧದ ಫಲಕವನ್ನು ಹಿಡಿದಿದ್ದಾರೆ. ಗೆಲುವಿನ ನಂತರ ಆ ಬಗ್ಗೆ ಅವರ ನಿಲುವನ್ನು ಕಾಯುತ್ತಿದ್ದೇವೆ. ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಲಂಚ, ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಮಾಡುತ್ತಲೇ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಲಂಚ, ಭ್ರಷ್ಟಾಚಾರ ಮುಕ್ತ ಸರಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ‘ಲಂಚ ಕೇಳಿದರೆ ತನಗೆ ಪತ್ರ ಬರೆಯಿರಿ ಅವರನ್ನು ಒದ್ದು ಒಳಗೆ ಹಾಕಿಸುತ್ತೇನೆ ’ ಎಂದು ಹೇಳಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಜನರು ನೀಡಿದ ಬೆಂಬಲದಿಂದಲೇ ಆರೋಗ್ಯ ಮಂತ್ರಿಯಾಗಿದ್ದ ಸುಧಾಕರರನ್ನು ಸೋಲಿಸಲು ಸಾಧ್ಯವಾಗಿದೆ ಎಂದು ಅಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಲಂಚ, ಭ್ರಷ್ಟಾಚಾರದ ವಿರುದ್ಧದ ಜನಾಂದೋಲನ ಶಾಶ್ವತವಾಗಿ ಉಳಿಯಬೇಕು, ನಿರಂತರವಾಗಿ ನಡೆಯಬೇಕು ಎಂಬುವುದಕ್ಕಾಗಿ ಜನತೆ – ಪ್ರಧಾನಿ ಮೋದೀಜಿಯವರಿಗೆ, ಮುಖ್ಯ ಮಂತ್ರಿ ಸಿದ್ದರಾಮಯ್ಯರವರಿಗೆ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ, ಇಲ್ಲಿಯ ಸಂಸದ ನಳಿನ್ ಕುಮಾರ್ ಕಟೀಲ್‌ರಿಗೆ, ನಮ್ಮ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ರವಿ ಕುಮಾರ್ ಎಂ.ಆರ್‌ರವರಿಗೆ ಹಕ್ಕೊತ್ತಾಯದ ಪತ್ರವನ್ನು ಕಳುಹಿಸಬೇಕು.
ಆ ಪತ್ರದಲ್ಲಿ ‘ನಮ್ಮ ಊರಿನಲ್ಲಿ ಲಂಚ, ಭ್ರಷ್ಟಾಚಾರ ನಿಲ್ಲಲೇ ಬೇಕು. ಅಧಿಕಾರಿಗಳು ಜನರಿಂದ ಲಂಚವಾಗಿ ಪಡೆದ ಹಣವನ್ನು ಹಿಂತಿರುಗಿಸುವಂತೆ ಮಾಡಬೇಕು. ಜನರಿಗೆ ಉತ್ತಮ ಸೇವೆಗೆ ಅನುಕೂಲವಾಗುವಂತೆ ಕಾನೂನುಗಳನ್ನು ಸರಳವಾಗಿ, ಸುಲಭವಾಗಿ ಮಾಡಬೇಕು. ನಾವು ಪ್ರಜೆಗಳು, ರಾಜರುಗಳು. ಜನಪ್ರತಿನಿಧಿಗಳು ಜನಸೇವೆಗಾಗಿ ಆಯ್ಕೆಯಾದವರು, ಅಧಿಕಾರಿಗಳು ಜನಸೇವೆಗಾಗಿ ನೇಮಕಗೊಂಡವರು ಎಂಬುವುದನ್ನು ಸಾರ್ವಜನಿಕವಾಗಿ ಪ್ರಚಾರಗೊಳಿಸಬೇಕು. ಪ್ರತಿಯೊಂದು ಕಛೇರಿಯಲ್ಲಿ ಅದು ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು. ಸರಕಾರಿ ಕಛೇರಿಗಳಲ್ಲಿಯ ಕೆಲಸಗಳಿಂದ ಹಿಡಿದು ಎಲ್ಲಾ ಕಾಮಗಾರಿಗಳು ಪಾರದರ್ಶಕವಾಗಿದ್ದು ಸಾರ್ವಜನಿಕರಿಗೆ ಅದರ ಮಾಹಿತಿ ದೊರಕುವಂತೆ ಮಾಡಬೇಕು. ಈ ಬೇಡಿಕೆ ಈಡೇರಿಸಿದರೆ ನಾವುಗಳು ನಿಜವಾಗಿಯೂ ರಾಜರುಗಳಾಗುತ್ತೇವೆ. ಇಲ್ಲದಿದ್ದರೆ ಗುಲಾಮರಾಗುತ್ತೇವೆ. ಜನಪ್ರತಿನಿಧಿಗಳು, ಅಧಿಕಾರಿಗಳು ರಾಜರುಗಳಾಗುತ್ತಾರೆ’ ಎಂಬ ಹಕ್ಕೊತ್ತಾಯವನ್ನು ಮಂಡಿಸಬೇಕು.

ಈ ವಿಷಯದ ಕುರಿತು ಪುತ್ತೂರು ತಾಲೂಕಿನಲ್ಲಿ ನಂತರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಸಂಚರಿಸಿ ದ.ಕ. ಜಿಲ್ಲೆಯ ಮನೆ ಮನೆಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ದ ಜನ ಜಾಗೃತಿ ಉಂಟು ಮಾಡುವ ಯೋಚನೆ ಇದೆ. ಅದರ ಅನುಷ್ಠಾನಕ್ಕೆ ತಮ್ಮೆಲ್ಲರ ಸಲಹೆ ಸೂಚನೆಗಳನ್ನು ಆಹ್ವಾನಿಸುತ್ತಿದ್ದೇವೆ. ಈ ಜನಜಾಗೃತಿಯ ಆಂದೋಲನಕ್ಕೆ ತಮ್ಮೆಲ್ಲರ ಬೆಂಬಲವನ್ನು ಕೋರುತ್ತಿದ್ದೇವೆ.

ಜನಸಾಮಾನ್ಯರು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರೆ ಶಾಸಕರು, ಸರಕಾರ ಅದನ್ನು ಅನುಷ್ಠಾನ ಗೊಳಿಸಲೇ ಬೇಕಾಗುತ್ತದೆ. ಇಲ್ಲದಿದ್ದರೆ ಸೋಲನ್ನು ಅನುಭವಿಸುತ್ತಾರೆ.

LEAVE A REPLY

Please enter your comment!
Please enter your name here