ಕಿಂಡಿ ಅಣೆಕಟ್ಟಿನ ಬುಡದಲ್ಲಿಯೇ ಕಲ್ಲು ಗಣಿಗಾರಿಕೆ; ಉದ್ಘಾಟನೆಗೆ ಮೊದಲೇ ಅಪಾಯ ಭೀತಿಯಲ್ಲಿ ಬಿಳಿಯೂರು ಕಿಂಡಿ ಅಣೆಕಟ್ಟು

0

ಉಪ್ಪಿನಂಗಡಿ: ನೀರಿಲ್ಲದೆ ಬರಡಾದ ನೇತ್ರಾವತಿ ನದಿಯ ಒಡಲಲ್ಲಿರುವ ಕಲ್ಲಿಗೆ ಈಗ ಅಕ್ರಮ ದಂಧೆಕೋರರ ಕಣ್ಣು ಬಿದ್ದಿದ್ದು, ಪೆರ್ನೆ ಸಮೀಪದ ಬಿಳಿಯೂರು ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಕಿಂಡಿ ಅಣೆಕಟ್ಟಿನ ಬುಡದಲ್ಲಿಯೇ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ.

ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ಬಿಳಿಯೂರು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಯೋಜನೆಗೆ 2020-21ನೇ ಸಾಲಿನಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ 4670.೦೦ ಲಕ್ಷ ರೂ. ಅಂದಾಜು ಮೊತ್ತದಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಬಳಿಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಭಾಗಶಃ ಕಾಮಗಾರಿ ಈಗ ಪೂರ್ಣಗೊಂಡಿದೆ. ಆದರೆ ಇದರ ಕಾಮಗಾರಿ ಸಂಪೂರ್ಣಗೊಂಡು ಇದರ ಉದ್ಘಾಟನೆಯಾಗುವ ಮೊದಲೇ ಇದರ ಬುಡದಲ್ಲಿಯೇ ಕಲ್ಲುಗಣಿಗಾರಿಕೆ ಆರಂಭಗೊಂಡಿದೆ. ಮೂರ‍್ನಾಲ್ಕು ಕಂಪ್ರೇಸರ್ ಮೆಷಿನ್‌ಗಳನ್ನು ಬಳಸಿಕೊಂಡು ಇಲ್ಲಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ. ಬೃಹತ್ ಯಂತ್ರವನ್ನು ಬಳಸಿಕೊಂಡು ನೇತ್ರಾವತಿ ನದಿಯ ಒಡಲಲ್ಲಿದ್ದ ಬೃಹತ್ ಕಲ್ಲುಗಳನ್ನು ಸಿಗಿದು ಹಾಕಲಾಗುತ್ತಿದೆ. ಕಲ್ಲು ಗಣಿಗಾರಿಕೆ ಪ್ರಕ್ರಿಯೆ ನಡೆಯುವಾಗ ಭೂಮಿ ಅದುರುತ್ತಿದ್ದು, ಕಿಂಡಿ ಅಣೆಕಟ್ಟಿಗೂ ಧಕ್ಕೆಯಾಗುವ ಸಂಭವವಿದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ.

ಮೂಲರಪಟ್ಣ ಸೇತುವೆಯ ಗತಿ ಬಾರದಿರಲಿ: ಕೆಲವು ವರ್ಷಗಳ ಹಿಂದೆ ದ.ಕ. ಜಿಲ್ಲೆಯ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಮೂಲರಪಟ್ಣ ಸೇತುವೆಯು ಕುಸಿದು ಬಿದ್ದಿತ್ತು. ಇದಕ್ಕೆ ಕಾರಣವಾಗಿದ್ದು, ಸೇತುವೆಯ ಬುಡದಲ್ಲಿಯೇ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ. ಇಲ್ಲಿಯೂ ಕೂಡಾ ಅದಕ್ಕಿಂತಲೂ ಅಪಾಯದ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಯೋಜನೆ ಪೂರ್ಣಗೊಂಡು ರೈತರಿಗೆ ವರದಾನವಾಗಬೇಕಿದ್ದ ಕಿಂಡಿ ಅಣೆಕಟ್ಟೆಯೊಂದು ಅದಕ್ಕಿಂತ ಮೊದಲೇ ಈ ಕಲ್ಲು ಗಣಿಗಾರಿಕೆಯಿಂದ ಬಿರುಕು ಬಿಟ್ಟರೆ ಈ ಯೋಜನೆಯಿಂದ ಪ್ರಯೋಜನವಾದರೂ ಏನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಮರಳುಗಾರಿಕೆಗೂ ಅವಕಾಶವಿಲ್ಲ

ಇಲ್ಲಿ ಕಿಂಡಿ ಅಣೆಕಟ್ಟಿನೊಂದಿಗೆ 5.20 ಮೀ.ನ ಸೇತುವೆಯೂ ಬರುತ್ತಿದ್ದು, ಇದು ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಗ್ರಾಮಗಳಿಗೆ ಸಂಪರ್ಕ ಸೇತುವಾಗಿಯೂ ಕೆಲಸ ಮಾಡಲಿದೆ. ಸೇತುವೆಯ 500 ಮೀ. ತನಕ ಮರಳುಗಾರಿಕೆಗೂ ನಿಯಮ ಪ್ರಕಾರ ಅವಕಾಶವಿಲ್ಲ. ಆದರೆ ಇಡೀ ಪರಿಸರವನ್ನೇ ಕಂಪನ ಮಾಡುವ ಇಂತಹ ಕಲ್ಲುಗಣಿಗಾರಿಕೆ ಈ ಕಿಂಡಿ ಅಣೆಕಟ್ಟಿನ ಬುಡದಲ್ಲೇ ನಡೆದರೆ ಈ ಕಿಂಡಿ ಅಣೆಕಟ್ಟಿಗೆ ಅನಾಹುತವಾಗುವ ಸಂಭವವಿದೆ. ಆದರೂ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಮೌನವಾಗಿದ್ದು ಯಾಕೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಅಣೆಕಟ್ಟು ರೈತರ ಉಪಯೋಗಕ್ಕೆ ಲಭಿಸುವ ಮುನ್ನವೇ ಬಿರುಕು ಬಿಡಲಾರಂಭಿಸಿದರೆ ಇಂತದೊಂದು ಬೃಹತ್ ಯೋಜನೆ ರೈತರ ಪಾಲಿಗೆ ವರದಾನವಾಗುವುದಾದರೂ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಇಲ್ಲಿನ ಕಲ್ಲು ಗಣಿಗಾರಿಕೆ ಅಕ್ರಮವೇ? ಸಕ್ರಮವೇ ತಿಳಿದಿಲ್ಲ. ಸಕ್ರಮವಾದರೆ ನಿಯಮಗಳನ್ನು ಗಾಳಿಗೆ ತೂರಿ ಕಿಂಡಿ ಅಣೆಕಟ್ಟಿನ ಬುಡದಲ್ಲಿಯೇ ಇದಕ್ಕೆ ಅವಕಾಶ ಕೊಟ್ಟವರು ಯಾರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

LEAVE A REPLY

Please enter your comment!
Please enter your name here