ಇಡ್ಕಿದು ವಲಯ ಕಾಂಗ್ರೆಸ್‌ನಿಂದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅಭಿನಂದನಾ ಸಮಾರಂಭ

0

ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಕಾಂಗ್ರೆಸ್ ಮಾತ್ರ ಎಂಬುದು ಜನತೆಗೆ ಅರಿವಾಗಿದೆ; ಅಶೋಕ್ ರೈ

ಪುತ್ತೂರು: ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಐದು ಗ್ಯಾರಂಟಿಗಳ ಬಗ್ಗೆ ಬಿಜೆಪಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿತ್ತು, ಗ್ಯಾರಂಟಿ ಯೋಜನೆ ಬಗ್ಗೆ ವ್ಯಂಗ್ಯವಾಡಿತ್ತು. ಈಗ ಸರಕಾರ ಕೊಟ್ಟ ಐದು ಗ್ಯಾರಂಟಿಗಳನ್ನು ನೀಡಲು ಮುಂದಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಕಾಂಗ್ರೆಸ್ ಮಾತ್ರ ಎಂಬುದು ಜನತೆಗೆ ಅರಿವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಇಡ್ಕಿದು ವಲಯ ಕಾಂಗ್ರೆಸ್ ಸಮಿತಿಯಿಂದ ಇಡ್ಕಿದುವಿನಲ್ಲಿ ನಡೆದ ಅಭಿನಂದನೆ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದರು.

ಸರಕಾರದ ಗ್ಯಾರಂಟಿ ಬಗ್ಗೆ ಪ್ರತೀ ಮನೆ ಮನೆಗೂ ಮಾಹಿತಿ ನೀಡುವ ಕೆಲಸವಾಗಬೇಕು. ದೇಶದಲ್ಲಿ ಯಾವ ಸರಕಾರವೂ ಮಾಡದ ಐದು ಯೋಜನೆಗಳನ್ನು ರಾಜ್ಯದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಬಡ ಜನತೆ ನೆಮ್ಮದಿಯ ಬದುಕು ಕಾಣಬೇಕು. ಬಡವರ ಪರ ಕೆಲಸ ಮಾಡಲು ಮತ್ತು ಅವರಿಗೆ ನೆರವು ನೀಡಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಈಗ ಪ್ರತೀಯೊಬ್ಬರ ಬಾಯಲ್ಲೂ ಕೇಳಿಬರುತ್ತಿದೆ. ಬಿಜೆಪಿಯವರು ಕೂಡಾ ಐದು ಗ್ಯಾರಂಟಿ ಬಗ್ಗೆ ಉತ್ತಮ ಅಭಿಪ್ರಾಯವನ್ನೇ ಹೇಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು, ಕೇಂದ್ರದ ಮೋದಿ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, ಜನತೆಯ ಅಕೌಂಟಿಗೆ 15 ಲಕ್ಷ ರೂ. ಇನ್ನೂ ಬಂದಿಲ್ಲ, ಅಚ್ಚೇದಿನ್ ಬಂದಿಲ್ಲ, ಬೆಲೆ ಏರಿಕೆ ಕಡಿಮೆಯಾಗಿಲ್ಲ, ಗ್ಯಾಸ್ ಬೆಲೆ ಕಡಿಮೆಯಾಗಿಲ್ಲ, ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಚುನಾವಣೆಯ ಸಂದರ್ಭದಲ್ಲಿ ಎಲ್ಲವನ್ನೂ ಕಡಿಮೆ ಮಾಡುವುದಾಗಿ ಹೇಳಿದ್ದ ಕೇಂದ್ರದ ಮೋದಿ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆಯೇ ಎಂಬುದನ್ನು ನಾವು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಮಾತನಾಡಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಪತನವಾಗಿರುವುದು ಪೀಡೆ ತೊಲಗಿದಂತಾಗಿದೆ. ಜನತೆಗೆ ಉಸಿರುಕಟ್ಟಿದ ವಾತಾವರಣ ಇತ್ತು. ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಮುಂದಿನ ಐದು ವರ್ಷ ಕರ್ನಾಟಕ ಶಾಂತಿಯ ತೋಟವಾಗಲಿದೆ. ಬಡವರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬಹುದು. ಉತ್ತಮ ಜೀವನಕ್ಕಾಗಿ, ಉತ್ತಮ ನಾಳೆಗಾಗಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಎಂ ಎಸ್ ಮಹಮ್ಮದ್‌ರವರು ಮಾತನಾಡಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರು ಶಾಸಕರಾದ ಬಳಿಕ ಅವರ ಕಾರ್ಯವೈಖರಿಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ದಿನವೂ ಬಿಡುವಿಲ್ಲದೆ ಜನರ ಸೇವೆಯನ್ನು ಮಾಡುತ್ತಿದ್ದಾರೆ. ಅಧಿಕಾರಿಗಳ ಸಭೆ ಕರೆದು ಜನರ ಕೆಲಸವನ್ನು ಮಾಡಿ ಎಂದು ಹೇಳಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸ ಮಾಡುತ್ತಿದ್ದಾರೆ. ಮುಂದಿನ 25 ವರ್ಷಗಳ ಕಾಲ ಪುತ್ತೂರು ಕಾಂಗ್ರೆಸ್ ಭದ್ರಕೋಟೆಯಾಗಿಯೇ ಉಳಿಯಲಿದೆ ಎಂದು ಹೇಳಿದರು.

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕು ಎಂಬುದು ಜನರ ಬೇಡಿಕೆಯಾಗಿತ್ತು. ಜನರ ಆಶೀರ್ವಾದದಿಂದ ಬಹುಮತದ ಸರಕಾರ ಬಂದಿದೆ. ಪುತ್ತೂರಿನಲ್ಲಿಯೂ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಮುಂದಿನ ದಿನಗಳಲ್ಲಿ ಪಕ್ಷ ಕಟ್ಟುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡಬೇಕಿದೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಕಾರ್ಯಕರ್ತರಿಂದ ಆಗಬೇಕಿದೆ ಎಂದು ಹೇಳಿದರು.

ಧನಸಹಾಯ ವಿತರಣೆ: ಕಾರ್ಯಕ್ರಮದಲ್ಲಿ ಇಡ್ಕಿದು ಪರಿಸರದ ವಿದ್ಯಾರ್ಥಿಗಳು ಮತ್ತು ಅನಾರೋಗ್ಯ ಪೀಡಿತರಿಗೆ ಧನಸಹಾಯವನ್ನು ಶಾಸಕರು ವಿತರಿಸಿದರು. ವಲಯ ಕಾಂಗ್ರೆಸ್ ವತಿಯಿಂದ ಒಟ್ಟು 10 ಮಂದಿಗೆ ಧನಸಹಾಯ ವಿತರಣೆ ಮಾಡಲಾಯಿತು. ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಬದಲು ಬಡವರಿಗೆ ಸಹಾಯ ಮಾಡಿದರೆ ಅದರಿಂದ ನಮಗೆ ತೃಪ್ತಿ ಸಿಗುತ್ತದೆ ಎಂದು ಶಾಸಕರು ಹೇಳಿ ವಲಯ ಕಾಂಗ್ರೆಸ್ ಸಮಿತಿಯ ಕಾರ್ಯವನ್ನು ಶ್ಲಾಸಿದರು. ವಲಯ ಕಾಂಗ್ರೆಸ್ ವತಿಯಿಂದ ಶಾಸಕರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಅಬ್ದುಲ್ ರಹಿಮಾನ್ ಯೂನಿಕ್, ಫಾರೂಕ್ ಪೆರ್ನೆ, ಶರೀಫ್ ಕಂದಕ್, ಕೇಶವ ಭಟ್, ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್, ಸುರೇಶ್ ಸೂರ್ಯ, ಆದಂ ಎಂಎಂಎಸ್, ಪ್ರವೀಣ್ ಚಂದ್ರ ಆಳ್ವ, ಅಝೀಝ್ ಮಿತ್ತೂರು, ಹಂಝ ಕಂದಕ್, ಹಂಝ ಮುಳ್ಳುಗುಡ್ಡೆ, ಯೂಸುಫ್ ಮಾಸ್ಟರ್, ಬೇಬಿಗೌಡ, ಪ್ರಹ್ಲಾದ್, ಯಾದವ್, ಅರುಣ್ ಡಿಸೋಜಾ, ಲಕ್ಷ್ಮಣ್, ಸೆಲಿಮ ಕೆ ಬಿ, ಸಿರಾಜ್ ಮನಿಲ ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾ ಡಾ. ರಾಜಾರಾಂ ಕೆ ಬಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here