






ಪುತ್ತೂರು : ರಾಜ್ಯದ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೊಳಿಸಲು ರಾಜ್ಯ ಸರಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ.


ಈ ಯೋಜನೆಯಡಿ 4 ಸಾರಿಗೆ ಸಂಸ್ಥೆಗಳಿಗೆ ತಗಲುವ ವೆಚ್ಚವನ್ನು ಸರಕಾರದಿಂದ ಶೂನ್ಯ ಟಿಕೆಟ್ ಶಕ್ತಿ ಸ್ಮಾರ್ಟ್ ಕಾರ್ಡ್ ದತ್ತಾಂಶವನ್ನು ಆಧರಿಸಿ ಭರಿಸಲಾಗುವುದು. ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸತಕ್ಕದ್ದು.
ಶಕ್ತಿ ಸ್ಮಾರ್ಟ್ ಕಾರ್ಡನ್ನು ವಿತರಿಸುವವರೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಇಲಾಖೆ ಸರಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿದ ಭಾವಚಿತ್ರ ಹಾಗು ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಶೂನ್ಯ ಟಿಕೆಟ್ ವಿತರಿಸುವ ಸಂದರ್ಭದಲ್ಲಿ ಪರಿಗಣಿಸತಕ್ಕದ್ದು ಎಂದು ಸಾರಿಗೆ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ ಎಸ್ ಆದೇಶ ಹೊರಡಿಸಿದ್ದಾರೆ.














