ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸುತ್ತಿಲ್ಲ- ಮಹಿಳೆಯರಿಂದ ಶಾಸಕರಿಗೆ ದೂರು

0

ಪುತ್ತೂರು: ಬೆಳಗ್ಗಿನ ವೇಳೆ ಶಾಲಾ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ಸು ನಿಲ್ಲಿಸದ ಕಾರಣ ವಿದ್ಯಾರ್ಥಿಗಳು ತಡವಾಗಿ ಶಾಲೆಗೆ ತೆರಳಬೇಕಾಗಿದೆ, ಯಾವ ಕಾರಣಕ್ಕೆ ಬಸ್ಸು ನಿಲ್ಲಿಸುವುದಿಲ್ಲ ಎಂದು ನಮಗೆ ಗೊತ್ತಿಲ್ಲ, ಬಸ್ಸು ನಿಲ್ಲಿಸುವಂತೆ ಮಾಡಿ ಎಂದು ಒಳಮೊಗ್ರು ಗ್ರಾಮದ ಹಲವು ಮಹಿಳೆಯರು ಶಾಸಕ ಅಶೋಕ್ ಕುಮಾರ್ ರೈಯವರಲ್ಲಿ ದೂರು ನೀಡಿದ್ದಾರೆ.

ಕುಂಬ್ರದ ಕರ್ನಾಟಕ ಇಸ್ಲಾಮಿಕ್ ಸೆಂಟರ್‌ಗೆ ಕಾರ್ಯಕ್ರಮಕ್ಕೆ ಬಂದ ಶಾಸಕರಲ್ಲಿ ತಮ್ಮ ಅಳಲು ತೋಡಿಕೊಂಡ ಮಹಿಳೆಯರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ಸು ನಿಲ್ಲಿಸುವ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು. ಈ ವೇಳೆ ಸ್ಥಳದಿಂದಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಕರೆ ಮಾಡಿದ ಶಾಸಕರು ವಿದ್ಯಾರ್ಥಿಗಳಿಗೆ ತೊಂದರೆ ಮಾಡಬಾರದು. ಸರಕಾರಿ ಬಸ್ಸಿನಲ್ಲಿ ಬರುವ ವಿದ್ಯಾರ್ಥಿಗಳು ಸರಕಾರಿ ಬಸ್ಸನ್ನೇ ಅವಲಂಬಿಸಿರುತ್ತಾರೆ. ಬಸ್ಸುಗಳ ಕೊರತೆ ಇದ್ದರೆ ಹೇಳಿ ಅದನ್ನು ತರಿಸುವ ವ್ಯವಸ್ಥೆ ಮಾಡುವ. ನಾಳೆಯಿಂದ ಯಾವುದೇ ವಿದ್ಯಾರ್ಥಿ ಬಸ್ಸಿಲ್ಲದ ಕಾರಣ ತಡವಾಗಿ ಕ್ಲಾಸಿಗೆ ಹೋಗುವಂತಾಗಬಾರದು. ಮಾಣಿ- ಮೈಸೂರು ಹೆದ್ದಾರಿಯಲ್ಲಿ ತೆರಳುವ ಬಸ್ಸುಗಳನ್ನು ವಿದ್ಯಾರ್ಥಿಗಳಿದ್ದಲ್ಲಿ ನಿಲ್ಲಿಸುವಂತೆ ಸೂಚನೆ ನೀಡಿ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿದ್ದು ಆ ವೇಳೆಯೂ ಈ ಸಮಸ್ಯೆ ಮರುಕಳಿಸಬಾರದು. ನನ್ನ ಕಡೆಯಿಂದ ಏನು ವ್ಯವಸ್ಥೆಯಾಗಬೇಕು ಅದನ್ನು ಹೇಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾ.ಪಂ ಉಪಾಧ್ಯಕ್ಷೆ ಸುಂದರಿ, ಸದಸ್ಯರಾದ ಅಶ್ರಫ್ ಉಜಿರೋಡಿ, ಬದ್ರು ಪರ್ಪುಂಜ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ಗ್ ಪೂಜಾರಿ ಬೊಳ್ಳಾಡಿ, ಮಹಮ್ಮದ್ ಬೊಳ್ಳಾಡಿ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here