ಬಾಲವನದಲ್ಲಿ ವಿಶ್ವ ಪರಿಸರ ದಿನಾಚರಣೆ

0

ಪರಿಸರ ಚೆನ್ನಾಗಿದ್ದರೆ ಮಾತ್ರ ನಮ್ಮ ಬದುಕು ಚೆನ್ನಾಗಿರಲು ಸಾಧ್ಯ: ಶಾಸಕ ಅಶೋಕ್ ರೈ

ಪುತ್ತೂರು: ಪರಿಸರ ಸಮತೋಲನದಲ್ಲಿ ಮರಗಿಡಗಳ ಪಾತ್ರ ಮಹತ್ತರವಾಗಿದೆ. ನಗರ ಬೆಳವಣಿಗೆಯ ಹಿನ್ನಲೆಯಲ್ಲಿ ಕಾಡುಗಳ ನಾಶವಾಗುತ್ತಿದ್ದು, ಪರಿಸರಕ್ಕೆ ಹಾನಿಯಾಗುತ್ತಿದೆ. ಪರಿಸರ ಉಳಿದಲ್ಲಿ ಮಾತ್ರ ಮಾನವ ಬದುಕು ಉಳಿಯಲು ಸಾಧ್ಯವಿದೆ, ಪರಿಸರ ಚೆನ್ನಾಗಿದ್ದರೆ ಮಾತ್ರ ನಾವು ಚೆನ್ನಾಗಿರಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಸೋಮವಾರ ಪುತ್ತೂರು ನಗರಸಭೆಯ ಸಹಯೋಗದಲ್ಲಿ ಪರ್ಲಡ್ಕದ ಡಾ| ಶಿವರಾಮ ಕಾರಂತರ ಬಾಲವನದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಗರೀಕರಣದ ಬಿರುಸಿನಲ್ಲಿ ಕಾಡುಗಳು ಕಡಿಮೆಯಾಗುತ್ತಿದೆ. ಆದರೆ ಸರ್ಕಾರದ ಕಾನೂನು ಭದ್ರತೆಯ ಕಾರಣದಿಂದಾಗಿ ವೃಕ್ಷಗಳು ಉಳಿದಿದ್ದು, ಅಲ್ಲಿ ಪ್ರಾಣಿಗಳಿಗೆ ಬದುಕುವ ಹಕ್ಕು ಸಿಕ್ಕಿದೆ. ಕಾಡು ಕಡಿಮೆಯಾದಾಗ ಪ್ರಾಣಿಗಳು ಕಾಡು ತೊರೆದು ನಾಡಿಗೆ ಬರುತ್ತದೆ. ಕೆಲವೊಂದು ಅಭಿವೃದ್ಧಿ ದೃಷ್ಟಿಯಿಂದ ಮರಗಳನ್ನು ಕಡಿಯುವುದು ಅನಿವಾರ್ಯವಾದಾಗ ಅಷ್ಟೇ ಪ್ರಮಾಣದಲ್ಲಿ ಮರಗಳನ್ನು ನೆಟ್ಟು ಬೆಳೆಸುವ ಕಾರ್ಯ ನಡೆಯಬೇಕು. ಮನೆ ಮನೆಗಳಲ್ಲಿ ಗಿಡ ನೆಡುವ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

ಪುತ್ತೂರು ಉಪವಿಭಾಗದ ಸಹಾಯಕ ಕಮಿಷನರ್ ಗಿರೀಶ್ ನಂದನ್ ಮಾತನಾಡಿ ಮನುಷ್ಯ ಪರಿಸರದ ಅವಿಭಾಜ್ಯ ಅಂಗವಾಗಿದ್ದು, ಪರಿಸರವನ್ನು ಮೀರಿ ಮಾನವ ಬದುಕು ಸಾಧ್ಯವಿಲ್ಲ ಎಂಬುದನ್ನು ಕೋವಿಡ್ ಸಂದರ್ಭದಲ್ಲಿ ನಾವೆಲ್ಲರೂ ಅರಿತುಕೊಂಡಿದ್ದೇವೆ. ಸುಸ್ಥಿರ ಪರಿಸರ ಸಂಪನ್ಮೂಲವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸುವುದರ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡಬೇಕು ಎಂದರು.
ಪೊರಕೆ ಹಿಡಿದು ಸ್ವಚ್ಚ ಮಾಡಿದ ಶಾಸಕರು ಕಾರ್ಯಕ್ರಮದ ಬಳಿಕ ಶಾಸಕರಾದ ಅಶೋಕ್ ಕುಮಾರ್ ರೈ ಹಾಗೂ ಸಹಾಯಕ ಕಮಿಷನರ್‌ರವರು ಬಾಲವನದಲ್ಲಿ ಪೊರಕೆ ಹಿಡಿದು ಸಾಂಕೇತಿಕವಾಗಿ ಸ್ವಚ್ಚತಾ ಕಾರ್ಯವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸ್ವಚ್ಚತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಯೂಸುಫ್ ಡ್ರೀಮ್, ನಗರಸಭಾ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾಕಿರಣ್, ವರಲಕ್ಷ್ಮೀ ಮತ್ತಿತರ ಸಿಬ್ಬಂದಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.‌

ನಗರಸಭಾ ಪ್ರಭಾರ ಕಮಿಷನರ್ ದುರ್ಗಾಪ್ರಸಾದ್ ಸ್ವಾಗತಿಸಿದರು. ಮೆನೇಜರ್ ಪಿಯೂಸ್ ಡಿಸೋಜ ವಂದಿಸಿದರು. ಸಿಬ್ಬಂದಿ ರವಿ ನಿರೂಪಿಸಿದರು.

LEAVE A REPLY

Please enter your comment!
Please enter your name here