ಪುತ್ತೂರು; ಮಾಣಿ-ಮೈಸೂರು ರಾ. ಹೆದ್ದಾರಿಯ ಮಾಣಿಯಿಂದ ಪುತ್ತೂರು ತನಕ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ರಾ. ಹೆದ್ದಾರಿ ವಿಭಾಗದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಅಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ದಕ್ಷಿಣ ಭಾರತ ಪ್ರಾಂತೀಯ (ನ್ಯಾಷನಲ್ ಹೈವೇ ಸೌತ್ ಇಂಡಿಯಾ ಝೋನ್) ಅಧಿಕಾರಿ ಮಹೇಂದ್ರ ಶರ್ಮ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಾಣಿಯಿಂದ ಪುತ್ತೂರು ತನಕ ಚತುಷ್ಪಥ ಕಾಮಗಾರಿ ಆರಂಭದಲ್ಲಿ ನಡೆಸುವಂತೆ ಮತ್ತು ಕಾಮಗಾರಿಯನ್ನು ಪ್ರಸಕ್ತ ಸಾಲಿನ ವಾರ್ಷಿಯ ಯೋಜನೆಯಲ್ಲಿ ಸೇರಿಸಿಕೊಳ್ಳುವಂತೆಯೂ ಮನವಿ ಮಾಡಿದ್ದಾರೆ. ಪ್ರಸಕ್ತ ಸಾಲಿನ ವಾರ್ಷಿಕ ಯೋಜನೆಯಲ್ಲಿ ಸೇರಿಸಿಕೊಂಡಲ್ಲಿ ಮಾತ್ರ ಮುಂದಿನ ಅವಧಿಗೆ ಈ ಕಾಮಗಾರಿಗೆ ಚಾಲನೆ ದೊರೆಯಬಹುದಾಗಿದ್ದು ಇಲ್ಲವಾದಲ್ಲಿ ಇನ್ನಷ್ಟು ದಿನ ಕಾಯಬೇಕಾದ ಅನಿವಾರ್ಯತೆ ಉಂಟಾಗಬಹುದು. ಈ ಕಾರಣಕ್ಕೆ ಪ್ರಸಕ್ತ ಸಾಲಿನಲ್ಲೇ ಈ ಬೇಡಿಕೆಯನ್ನು ಮಂಡಿಸುವಂತೆ ಶಾಸಕರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶಾಸಕರ ಮನವಿಯನ್ನು ಸ್ವೀಕರಿಸಿದ ಅಧಿಕಾರಿ ಮಹೇಂದ್ರ ಶರ್ಮ ಅವರು ತಮ್ಮ ಬೇಡಿಕೆಯನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡುವುದಾಗಿಯೂ , ಕಾಮಗಾರಿಯ ಬೇಡಿಕೆಯ ಬಗ್ಗೆ ವಿವರಣೆ ನೀಡುವುದಾಗಿಯೂ ಶಾಸಕರಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ಮಾಣಿಯಿಂದ ಪುತ್ತೂರು ತನಕ ಚತುಷ್ಪಥ ರಸ್ತೆ ನಿರ್ಮಾಣವಾದಲ್ಲಿ ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ರಾ. ಹೆದ್ದಾರಿಯಾಗಿ ಮಾಣಿ ಮೈಸೂರು ರಸ್ತೆ ಮೇಲ್ದರ್ಜೆಗೇರಿದ್ದರಿಂದ ಚತುಷ್ಪಥ ರಸ್ತೆ ಕಾಮಗಾರಿ ಬೇಡಿಕೆಯನ್ನು ಕೇಂದ್ರ ಸರಕಾರ ಈಡೇರಿಸಲಿದೆ ಎಂಬ ನಂಬಿಕೆ ಇದೆ. ರಸ್ತೆ ನಿರ್ಮಾಣವಾದಲ್ಲಿ ಈ ಭಾಗದ ಬಹುಕಾಲದ ಬೇಡಿಕೆಯೂ ಈಡೇರಲಿದೆ. ರಸ್ತೆ ನಿರ್ಮಾಣ ಕುರಿತು ಅಧಿಕಾರಿಗಳ ಜೊತೆ ಮಾತನಾಡಿ ಮನವಿಯನ್ನು ನೀಡಿದ್ದೇನೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.