ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮೊದಲು ಜಾರಿ; ‘ಹೃದಯ ವೈಶಾಲ್ಯ’ ಯೋಜನೆಗೆ ಜಿ.ಪಂ. ಸಿಇಒ ಚಾಲನೆ

0

ಮಂಗಳೂರು: ಹೃದಯ ಸಂಬಂಧಿತ ಕಾಯಿಲೆಗಳ ಉಚಿತ ತಪಾಸಣಾ ಶಿಬಿರ ‘ಹೃದಯ ವೈಶಾಲ್ಯ’ ಯೋಜನೆಯನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ದ.ಕ. ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.

ಅವರು ಜೂ.7ರಂದು ಮೂಡುಬಿದಿರೆ ಆರೋಗ್ಯ ಕೇಂದ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕಾರ್ಡಿಯಾಲಜಿ ಡೋರ‍್ಸ್ಟೆಪ್ ಫೌಂಡೇಶನ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಹಾಗೂ ತಂಡದವರಿಂದ ‘ಹೃದಯ ವೈಶಾಲ್ಯ ಯೋಜನೆ ಹೃದಯ ತಜ್ಞ ಮನೆ ಬಾಗಿಲಿಗೆ’ ಹೃದಯ ಸಂಬಂಧಿತ ಕಾಯಿಲೆಗಳ ಉಚಿತ ತಪಾಸಣಾ ಶಿಬಿರ ಹೃದಯ ವೈಶಾಲ್ಯ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೊಳಿಸಿರುವ ಬಗ್ಗೆ ರಾಜ್ಯದ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತರಲಾಗಿದೆ, ಹೃದಯ ವೈಶಾಲ್ಯ ಯೋಜನೆಯ ಸೂತ್ರಧಾರಿ ಹೃದಯ ತಜ್ಞ ಡಾ| ಪದ್ಮನಾಭ ಕಾಮತ್, ಅವರ ಚಿಂತನೆಯಲ್ಲಿ ಮೂಡಿ ಬಂದ ಹೃದಯ ವೈಶಾಲ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಗ್ರಾಮೀಣ ಜನರ ಆರೋಗ್ಯದ ದೃಷ್ಠಿಯಿಂದ ವೈದ್ಯಕೀಯ ಸೌಲಭ್ಯಗಳು ಗ್ರಾಮೀಣ ಪ್ರದೇಶದಲ್ಲಿ, ಅವರ ಮನೆ ಬಾಗಿಲಲ್ಲೇ ಸಿಗಬೇಕೆನ್ನುವ ನಿಟ್ಟಿನಲ್ಲಿ ಹೃದಯ ವೈಶಾಲ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಪ್ರತೀ ಬುಧವಾರ ತಜ್ಞ ವೈದ್ಯರು ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಸಾರ್ವಜನಿಕರನ್ನು ಉಚಿತವಾಗಿ ತಪಾಸಣೆ ಮಾಡಲಾಗುವುದು. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ವೈದ್ಯಕೀಯ ಸೌಲಭ್ಯಗಳು ಗ್ರಾಮೀಣ ಪ್ರದೇಶಗಳ ಜನರ ಮನೆ ಬಾಗಿಲಲ್ಲೇ ಸಿಗಬೇಕೆಂಬ ದೂರದೃಷ್ಠಿಯನ್ನಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ, ಗ್ರಾಮೀಣ ಜನರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಡಾ. ಕುಮಾರ್ ಹೇಳಿದರು.

ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೃದಯ ವೈಶಾಲ್ಯ ಯೋಜನೆ ಜಿಲ್ಲೆಗೆ ಮಾತ್ರ ಸೀಮಿತವಾಗದೇ, ರಾಜ್ಯ ಮಟ್ಟದಲ್ಲಿ ಬೆಳೆಯಲಿ ಎನ್ನುವ ಆಶಯವಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸುವ ಜಾವಬ್ದಾರಿ ಊರಿನ ಜನರು ಹಾಗೂ ಆರೋಗ್ಯಾಧಿಕಾರಿಗಳ ಮೇಲಿದೆ. ಪ್ರತಿಯೊಂದು ಊರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಎಚ್‌ಓ ಹಾಗೂ ಇಲ್ಲಿನ ಆರೋಗ್ಯಾಧಿಕಾರಿಗಳು ಈ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ. ಈ ಯೋಜನೆಯನ್ನು ಮುಂದೆಯೂ ಎಲ್ಲಾ ಕಡೆಗಳಲ್ಲಿ ಅನುಷ್ಟಾನಕ್ಕೆ ತರಲಾಗುವುದು ಎಂದರು. ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಪುರಸಭಾ ಸದಸ್ಯೆ ಶ್ವೇತಾ ಪ್ರವೀಣ್ ಜೈನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಡಾ| ಜಗದೀಶ್, ಪುರಸಭಾ ಮುಖ್ಯಾಧಿಕಾರಿ ಶಿವ ನಾಯ್ಕ್ ಮಂಗಳೂರು ತಾಲೂಕು ಆರೋಗ್ಯಧಿಕಾರಿ ಸುಜಯ್, ವಕೀಲ ಬಾಹುಬಲಿ ಪ್ರಸಾದ್, ಮತ್ತಿತರ ವೈದ್ಯಾಧಿಕಾರಿಗಳು, ಸಿಬ್ಬಂದಿವರ್ಗ, ಫಲಾನುಭವಿಗಳು ಉಪಸ್ಥಿತರಿದ್ದರು. ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಚಿತ್ರ ಸ್ವಾಗತಿಸಿ, ಕ್ಷೇತ್ರ ಆರೋಗ್ಯಧಿಕಾರಿ ಸುಶೀಲ ನಿರೂಪಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here