ಪುತ್ತೂರಿನಲ್ಲಿ ಉಪಯೋಗಕ್ಕಿಲ್ಲದ ಇ-ಶೌಚಾಲಯ ! ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿದೆ

0

ಪುತ್ತೂರು: ದೇಶದಲ್ಲಿ ಎರಡನೇ ಹಾಗೂ ರಾಜ್ಯದಲ್ಲೇ ಮೊದಲ ಪ್ರಯೋಗ ಎಂಬ ಹೆಗ್ಗಳಿಕೆಯ ಇ-ಶೌಚಾಲಯ (ಎಲೆಕ್ಟ್ರಾನಿಕ್ ಶೌಚಾಲಯ)ಗಳ ಉಪಯೋಗ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಯಾರಿಗೂ ದಕ್ಕಿಲ್ಲ. ಸ್ವಚ್ಚ ಪುತ್ತೂರು ಘೋಷಣೆಗೆ ಇದು ಭಂಗ ತಂದಿದೆ. ತಂತ್ರಜ್ಞಾನ ಆಧಾರಿತವಾಗಿ ಸ್ವಯಂ ಪ್ರೇರಿತವಾಗಿ ಸ್ವಚ್ಛ ಸಾಮರ್ಥ್ಯವಿರುವ ಇ ಶೌಚಾಲಯವನ್ನು ಉಳಿಸಿಕೊಳ್ಳುವುದೇ ನಗರಸಭೆಗೆ ದೊಡ್ಡ ತಲೆನೋವಾಗಿದೆ.

ಪುತ್ತೂರಿನಲ್ಲಿ ಸುಮಾರು 5 ವರ್ಷಗಳ ಹಿಂದೆ ಸಾರ್ವಜನಿಕರ ಶೌಚ ಬಾಧೆ ತಪ್ಪಿಸುವ ಉದ್ದೇಶದಿಂದ ಮತ್ತು ಪರಿಸರ ಸ್ನೇಹಿ ಮತ್ತು ಸಾರ್ವಜನಿಕರ ತುರ್ತು ಅಗತ್ಯಕ್ಕೆ ಪೂರಕವಾಗಿ ಇವುಗಳನ್ನು ನಿರ್ಮಿಸಲಾಗಿತ್ತು. ಆಗಿನ ನಗರಸಭೆ ಅಧ್ಯಕ್ಷೆ ಜಯಂತಿ ನಾಯ್ಕ್ ಅವರ ಆಡಳಿತ ಅವಧಿಯಲ್ಲಿ ಪುತ್ತೂರು ನೆಲ್ಲಿಕಟ್ಟೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ 2 ಮತ್ತು ಬೊಳುವಾರು ಜಂಕ್ಷನ್‌ನಲ್ಲಿ ಒಂದು ಇ ಶೌಚಾಲಯ ಉದ್ಘಾಟನೆಗೊಂಡಿತ್ತು. ಬಳಿಕದ ಬೆಳವಣಿಗೆಯಲ್ಲಿ ಅದು ನಿರ್ವಹಣೆಯ ಕೊರತೆಯೋ, ನಿರ್ವಹಣೆಗೆ ಪಡೆದ ಗುತ್ತಿಗೆದಾರರ ಸಮಸ್ಯೆಯೋ ಗೊತ್ತಿಲ್ಲ. ನಗರಸಭೆ ವ್ಯಾಪ್ತಿಯಲ್ಲಿರುವ ಮೂರೂ ಇ-ಶೌಚಾಲಯಗಳು ಕೆಟ್ಟು ನಿರುಪಯುಕ್ತವಾಗಿವೆ.

ನಗರಸಭೆ ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪ: ಇ ಶೌಚಾಲಯದ ನಿರ್ವಹಣೆಗೆ ಟೆಂಡರ್ ಆಹ್ವಾನಿಸಲಾಗಿದ್ದರೂ ಏಕ ಬಿಡ್ ಸ್ವೀಕೃತಿಗೊಂಡಿತ್ತು. ಈ ಕುರಿತು ಫೆ.28ರಂದು ನಗರಸಭೆಯ ಆಗಿನ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ದುರಸ್ತಿಗಾಗಿ ಬಿಡ್ ಅನ್ನು ಮಂಜೂರು ಮಾಡುವಂತೆ ಸಭೆಗೆ ಓದಿ ಹೇಳಲಾಗಿತ್ತು. ಆ ಸಂದರ್ಭ ಸದಸ್ಯ ಶಕ್ತಿ ಸಿನ್ಹ ಅವರು ದುರಸ್ತಿ ಮಾಡದಿದ್ದರೆ ಮುಂದೆ ಗುಜುರಿಗೆ ಕೊಡುವುದು ಉತ್ತಮ ಎಂದಿದ್ದರು. ಇದೀಗ ಟೆಂಡರ್ ಪ್ರಕ್ರಿಯೆ ನಡೆದು, ತಿಂಗಳೊಳಗೆ ದುರಸ್ತಿ ಕಾರ್ಯ ನಡೆಯಲಿದೆ ಎಂದು ನಗರಸಭೆ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

ಸುಧಾರಿತ ತಂತ್ರಜ್ಞಾನದ ಶೌಚಾಲಯದಿಂದ ನೀರಿನ ಉಳಿಕೆಯೂ ಆಗುತ್ತಿದೆ. ಸಾಮಾನ್ಯ ಶೌಚಾಲಯದಲ್ಲಿ 5ರಿಂದ 6 ಲೀಟರ್ ನೀರು ಫ್ಲಶ್‌ನಲ್ಲಿ ಹೋಗುತ್ತದೆ.ಇ-ಶೌಚಾಲಯದಲ್ಲಿ ಫ್ಲಶ್‌ಗೆ 1.5 ಲೀಟರ್ ನೀರು ಸಾಕು. ಹಾಗೆಯೇ ಇದನ್ನು 3.4 ಗ್ರೇಡ್ ಸ್ಟೀಲ್ ಯೂನಿಟ್‌ನಿಂದ ತಯಾರಿಸಲಾಗಿದೆ. ಹೀಗಾಗಿ, ಇದು ತುಕ್ಕು ಸಹ ಹಿಡಿಯುವುದಿಲ್ಲ ಹಾಗೂ ಇದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬದಲಾಯಿಸಬಹುದು. ಇಷ್ಟೆಲ್ಲ ತಂತ್ರಜ್ಞಾನವಿರುವ ಶೌಚಾಲಯಗಳು ಕೆಟ್ಟು ನಿಲ್ಲುತ್ತಿರುವುದು ಇದರ ಗುಣಮಟ್ಟದ ಬಗ್ಗೆಯೇ ಪ್ರಶ್ನೆ ಮಾಡುವಂತಾಗಿದೆ. ಆದರೆ, ಇ-ಶೌಚಾಲಯ ನಿರ್ವಹಣೆಯ ಕೊರತೆಯಿಂದಾಗಿ ಇಲ್ಲಿ ಕೆಟ್ಟು ನಿಂತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here