ವಾಹನ ಸೈಡು ಕೊಡುವುದಕ್ಕೆ ಮಾತ್ರವಲ್ಲ. ನಡೆದುಕೊಂಡು ಹೋಗುವುದಕ್ಕೂ ಕಷ್ಟ
ಅಪಾಯಕಾರಿ ಮರ ತೆರವುಗೊಳಿಸಿ ವರ್ಷ ಸಮೀಪಿಸುತ್ತಿದ್ದರೂ ಇನ್ನೂ ತೆರವುಗೊಳಿಸಲಿಲ್ಲ
ಕಾಣಿಯೂರು: ರಾಜ್ಯ ಹೆದ್ದಾರಿ ರಸ್ತೆ ಬದಿಯಲ್ಲಿಯೇ ವಾಲಿಕೊಂಡಿದ್ದ ಹಲವು ಮರಗಳಲ್ಲಿ ಕೆಲವು ಮರಗಳ ತೆರವುಗೊಳಿಸುವ ಕಾರ್ಯ ನಡೆದಿದೆ. ಆದರೆ ಕಟಾವು ಆಗಿರುವ ಮರದ ತುಂಡುಗಳು ಬೆಳಂದೂರಿನಿಂದ ಅಂಕಜಾಲುವರೆಗೆ ರಸ್ತೆ ಬದಿಯಲ್ಲಿ ರಾಶಿಯಾಗಿ ಬಿದ್ದಿದೆ. ಇದರಿಂದ ವಾಹನ ಸೈಡು ಕೊಡುವುದಕ್ಕೆ ಬಿಡಿ.. ಇತ್ತ ನಡೆದುಕೊಂಡು ಹೋಗುವುದಕ್ಕೂ ಕಷ್ಟ ಸಾಧ್ಯವಾಗಿದೆ.
ಕೆಲ ಮರಗಳು ಇನ್ನೂ ರಸ್ತೆಗೆ ವಾಲಿಕೊಂಡಿದೆ: ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಬೆಳಂದೂರು ಅಂಕಜಾಲು ಸಮೀಪ ಅಪಾಯಕಾರಿಯಾಗಿ ರಸ್ತೆಗೆ ವಾಲಿ ನಿಂತಿರುವ ಕೆಲವೊಂದು ಮರಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಆದರೆ ಇನ್ನೂ ಹಲವು ಮರಗಳು ರಸ್ತೆಗೆ ವಾಲಿಕೊಂಡಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಇದರಿಂದ ವಾಹನ ಸವಾರರು ಭಯ ಭೀತಿಯಿಂದಲೇ ಸಂಚರಿಸುವ ಪರಿಸ್ಥಿತಿ ಇಲ್ಲಿಯದ್ದಾಗಿದೆ. ಅಪಾಯ ಸಂಭವಿಸುವ ಮೊದಲು ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ಒಂದು ವೇಳೆ ಮರ ಬಿದ್ದದ್ದೇ ಆದಲ್ಲಿ ವಿದ್ಯುತ್ ತಂತಿ ಸಹಿತ ಕಂಬಗಳಿಗೂ ಹಾನಿಯಾಗುವುದರ ಜೊತೆಗೆ ಪ್ರಯಾಣಿಕರಿಗಾಗಲೀ, ಪಾದಚಾರಿಗಳಿಗಾಗಲೀ ಅಪಾಯ ಸಂಭವಿಸುವುದರಲ್ಲಿ ಸಂಶಯವಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸುವುದೇ ಕಾದು ನೋಡಬೇಕಾಗಿದೆ.
ರಸ್ತೆ ಬದಿಯಲ್ಲಿ ಕಟಾವು ಆಗಿರುವ ಮರದ ತುಂಡುಗಳು ರಾಶಿ ಬಿದ್ದಿರುವುದರಿಂದ ವಾಹನ ಸೈಡು ಕೊಡಲು ಹಾಗೂ ನಡೆದುಕೊಂಡು ಹೋಗಲು ಆಗದ ಸನ್ನಿವೇಶ ಇಲ್ಲಿ ಎದುರಾಗಿದೆ. ಈ ಬಗ್ಗೆ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ. ಅಲ್ಲದೆ ವಿದ್ಯುತ್ ತಂತಿಗಳು ಹಾದು ಹೋಗುವುದರಿಂದ ಉಳಿದ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಬಾಕಿಯಾಗಿದೆ. ಈ ಬಗ್ಗೆಯೂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಪಾಯಕಾರಿ ಮರಗಳನ್ನು ಶೀಘ್ರದಲ್ಲಿ ತೆರವುಗೊಳಿಸುವಂತೆ ಸಂಬಂಧ ಪಟ್ಟ ಅಽಕಾರಿಗಳಿಗೆ ಮನವಿ ಮಾಡುವುದಾಗಿ ತೀರ್ಮಾನಿಸಲಾಗಿದೆ.
-ಮೋಹನ್ ಅಗಳಿ, ಸದಸ್ಯರು, ಗ್ರಾ. ಪಂ.ಬೆಳಂದೂರು