ಮಕ್ಕಳ ಮೇಲೆ ಶಿಕ್ಷಕರಿಗೆ, ಹೆತ್ತವರಿಗೆ ಸಮಾನ ಜವಾಬ್ದಾರಿ ಇದೆ: ಅಶೋಕ್ ಕುಮಾರ್ ರೈ
ಗ್ರಾಮೀಣ ಭಾಗದ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶ ಸಂಸ್ಥೆಯದ್ದಾಗಿದೆ: ಡಾ.ವಿ.ಕೆ ಅಬ್ದುಲ್ ಬಶೀರ್
ವಿಟ್ಲ: ಗ್ರಾಮೀಣ ಭಾಗದಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುವ ಕೆಲಸ ಜನಪ್ರಿಯ ಸಂಸ್ಥೆಯಿಂದ ನಡೆಯುತ್ತಿದೆ. ಮಕ್ಕಳ ಮೇಲೆ ಶಿಕ್ಷಕರಿಗೆ ಮತ್ತು ಹೆತ್ತವರಿಗೆ ಸಮಾನ ಜವಾಬ್ದಾರಿ ಇದೆ. ಅವರನ್ನು ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈರವರು ಹೇಳಿದರು.
ಅವರು ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿದಾಗ ಮಕ್ಕಳು ಕೂಡಾ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ಸರಕಾರಿ ಶಾಲೆ ಮತ್ತು ಖಾಸಗಿ ಶಾಲೆ ಎರಡರಲ್ಲೂ ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣ ನೀಡುವ ಕೆಲಸ ಆಗಬೇಕು ಎಂದರು.
ಜನಪ್ರಿಯ ಫೌಂಡೇಶನ್‌ನ ಚೇಯರ್‌ಮ್ಯಾನ್ ಡಾ.ವಿ.ಕೆ ಅಬ್ದುಲ್ ಬಶೀರ್ ರವರು ಮಾತನಾಡಿ ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ಸಮಾನವಾಗಿ ದೊರೆತಾಗ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ಇಲ್ಲಿ ಸಂಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಎಲ್ಲರ ಸಹಕಾರದಿಂದ ಜನಪ್ರಿಯ ಸಂಸ್ಥೆ ಬೆಳೆಯುತ್ತಿದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಡಾ. ರಾಜಾರಾಮ್ ಕೆ.ವಿ, ಡಾ. ಬದ್ರುದ್ದೀನ್, ತಾಲೂಕು ವೈದ್ಯಾಧಿಕಾರಿ ಅಶೋಕ್ ಕುಮಾರ್ ರೈ, ಕಾವು ಹೇಮನಾಥ ಶೆಟ್ಟಿ, ಖಾದರ್ ಹಾಜಿ ಬದ್ರಿಯಾ, ಶಾಕೀರ್ ಅಳಕೆಮಜಲು, ಪ್ರಾಂಶುಪಾಲ ಲಿಬಿನ್ ಕ್ಸೇವಿಯರ್, ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಉಪಸ್ಥಿತರಿದ್ದರು.