ವಿಧಾನಸಭೆ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ-ತಾ.ಪಂ.ಮಾಜಿ ಸದಸ್ಯೆಯರಾದ ಉಷಾ ಅಂಚನ್, ಆಶಾಲಕ್ಷ್ಮಣ್ ಸಹಿತ 17 ಮಂದಿ ಕಾಂಗ್ರೆಸ್‌ನಿಂದ ಉಚ್ಚಾಟನೆ

0

ನೆಲ್ಯಾಡಿ: 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಕಾರಣಕ್ಕೆ ತಾ.ಪಂ.ಮಾಜಿ ಸದಸ್ಯೆಯರಿಬ್ಬರ ಸಹಿತ ಪಕ್ಷದಲ್ಲಿ ವಿವಿಧ ಜವಾಬ್ದಾರಿ ಹೊಂದಿದ್ದ ಕಡಬ ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್‌ನ 17 ಮಂದಿಯನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.

ತಾ.ಪಂ.ಮಾಜಿ ಸದಸ್ಯರಾಗಿರುವ ಉಷಾ ಅಂಚನ್, ಆಶಾಲಕ್ಷ್ಮಣ್ ಗುಂಡ್ಯ, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಪ್ರವೀಣ್‌ಕುಮಾರ್ ಕೆಡೆಂಜಿ ಸವಣೂರು, ಕುಟ್ರುಪ್ಪಾಡಿ ಗ್ರಾ.ಪಂ.ಮಾಜಿ ಸದಸ್ಯ ಸೇವಿಯರ್ ಬೇಬಿ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುಧೀರ್ ದೇವಾಡಿಗ, ಎಪಿಎಂಸಿ ಮಾಜಿ ಸದಸ್ಯ ರಾಮಕೃಷ್ಣ ಕೆಂಜಾಳ, ಕಡಬ ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಶಶಿಧರ ಮಾಸ್ಟರ್ ಬೊಟ್ಟಡ್ಕ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಮುಖಂಡ ಪೈಜಲ್ ಕಡಬ, ಜೈನ್ ಆತೂರು, ರವಿ ರುದ್ರಪಾದ, ಶೋಬಿತ್ ಸುಬ್ರಮಣ್ಯ, ಮಹೇಶ್ ಭಟ್ ಕರಿಕ್ಕಳ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಭವಾನಿ ಶಂಕರ್, ಗೋಕುಲ್‌ದಾಸ್, ಚೇತನ್ ಕಜೆಗದ್ದೆ, ಆನಂದ ಬೆಳ್ಳಾರೆ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಪಕ್ಷದ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ.ರಹಮಾನ್ ಖಾನ್‌ರವರು ಜೂ.10 ರಂದು ಆದೇಶಿಸಿದ್ದಾರೆ. ಇವರೆಲ್ಲರೂ ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸುಳ್ಯ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಬಹಿರಂಗ ಪ್ರಚಾರ ಮಾಡದೆ ಪಕ್ಷದ ವಿರುದ್ಧವೇ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿಯು ಸೋಲಲು ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕಡಬ ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್‌ನ ಇನ್ನಷ್ಟೂ ಮುಖಂಡರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದ್ದು ಅವರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳಿಂದ ವರದಿಯಾಗಿದೆ.

ವಿವರಣೆ ಕೇಳಿ ಬಳ್ಳೇರಿಗೆ ನೋಟಿಸ್:
ಟಿಕೆಟ್ ಘೋಷಣೆ ಸಂದರ್ಭದಲ್ಲಿ ನಂದಕುಮಾರ್ ಪರವಾಗಿದ್ದ ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿಯವರಿಗೆ ವಿವರಣೆ ಕೇಳಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಅವರು ನೋಟಿಸ್ ಜಾರಿಗೊಳಿಸಿದ್ದಾರೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಬಹಿರಂಗ ಪ್ರಚಾರ ಮಾಡದೆ ಪಕ್ಷದ ವಿರುದ್ಧವೇ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿಯು ಸೋಲಲು ಕಾರಣರಾಗಿದ್ದೀರೆಂದು ಕೆಪಿಸಿಸಿಗೆ ಲಿಖಿತ ದೂರು ಬಂದಿದೆ. ಈ ಬಗ್ಗೆ 7 ದಿನದೊಳಗೆ ತಮ್ಮ ವಿವರಣೆಯನ್ನು ಕೆಪಿಸಿಸಿ ಕಚೇರಿ ಕಳುಹಿಸಿಕೊಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಕೋ ಆರ್ಡಿನೇಟರ್ ನಂದಕುಮಾರ್, ಕೆಪಿಸಿಸಿ ಮಾಜಿ ಪದಾಧಿಕಾರಿ, ಸುಳ್ಯ ಪಟ್ಟಣ ಪಂಚಾಯತ್ ಸದಸ್ಯರೂ ಆಗಿರುವ ವೆಂಕಪ್ಪ ಗೌಡ ಅವರಿಗೂ ವಿವರಣೆ ಕೇಳಿ ಕೆಪಿಸಿಸಿಯಿಂದ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯದಲ್ಲಿ ಕಾಂಗ್ರೆಸ್‌ಗೆ 30 ಸಾವಿರ ಮತಗಳ ಸೋಲು:
ಮೇ.10 ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸುಳ್ಯ ಎಸ್‌ಸಿ ಮೀಸಲು ಕ್ಷೇತ್ರದಿಂದ ಟಿಕೆಟ್‌ಗಾಗಿ ಕೆಪಿಸಿಸಿ ಸದಸ್ಯರಾಗಿದ್ದ ಜಿ.ಕೃಷ್ಣಪ್ಪ ರಾಮಕುಂಜ ಹಾಗೂ ನಂದಕುಮಾರ್ ಅವರ ಮಧ್ಯೆ ಪೈಪೋಟಿ ನಡೆದಿತ್ತು. ಆದರೆ ಕೆಪಿಸಿಸಿಯಿಂದ ಜಿ.ಕೃಷ್ಣಪ್ಪ ರಾಮಕುಂಜ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರ ವಿರುದ್ಧ ನಂದಕುಮಾರ್ ಪರವಾಗಿದ್ದವರೂ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿ ಡಿಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ನಂದಕುಮಾರ್‌ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕ್ಷೇತ್ರದ ಮುಖಂಡರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ಸೂಚನೆ ನೀಡಿದ್ದರು. ರಮಾನಾಥ ರೈಯವರು ಸುಳ್ಯ ಹಾಗೂ ಕಡಬ ಬ್ಲಾಕ್ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಕೆಪಿಸಿಸಿಗೆ ವರದಿ ನೀಡಿದ್ದರು. ಬಳಿಕ ಜಿ.ಕೃಷ್ಣಪ್ಪ ಅವರಿಗೆ ಬಿ.ಫಾರಂ ನೀಡಲಾಗಿತ್ತು. ಜಿ.ಕೃಷ್ಣಪ್ಪ ಅವರು ಕ್ಷೇತ್ರದೆಲ್ಲೆಡೆ ಸಂಚರಿಸಿ ಪ್ರಚಾರ ನಡೆಸಿದ್ದರೂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಜಿತರಾಗಿದ್ದರು.

LEAVE A REPLY

Please enter your comment!
Please enter your name here