ಮುಂಡೂರು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ 9ನೇ ವರ್ಷದ ಸಾರ್ವಜನಿಕ ಶನಿಪೂಜೆ

0

ಪುತ್ತೂರು: ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಸಮಿತಿ ಮುಂಡೂರು ಇದರ ಆಶ್ರಯದಲ್ಲಿ 9ನೇ ವರ್ಷದ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ಹಾಗೂ ಧಾರ್ಮಿಕ ಸಭೆಯು ಜೂ.10ರಂದು ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವಠಾರದಲ್ಲಿ ನಡೆಯಿತು.


ಪೂಜಾ ಸಮಿತಿ ಗೌರವಾಧ್ಯಕ್ಷರು, ಹಿಂದು ಸಂಘಟನೆಗಳ ಮುಖಂಡರಾಗಿರುವ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಊರಿನ ಭಕ್ತರು ದೇವಸ್ಥಾನದ ಜೊತೆಗೆ ನಿರಂತರ ಸಂಪರ್ಕದೊಂದಿಗೆ ಜೊತೆಯಾಗಿ ಮುನ್ನಡೆಯುವ ಯೋಚನೆಯೊಂದಿಗೆ ಶನೀಶ್ವರ ಪೂಜೆ ಪ್ರಾರಂಭಿಸಲಾಗಿದೆ. ಇದರ ಮೂಲಕ ಹಿಂದು ಸಮಾಜವನ್ನು ಒಗ್ಗೂಡಿಸುವ ಕೆಲಸವಾಗಿದೆ. ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಕೈ ಜೋಡಿಸುವ ಜೊತೆಗೆ ಧಾರ್ಮಿಕ ನಾಯಕರನ್ನು ಸಮಾಜಕ್ಕೆ ನೀಡುತ್ತಿದೆ ಎಂದರು. ಹಿಂದು ಸಮಾಜವು ಹಲವು ಸವಾಲುಗಳನ್ನು ಎದುರಿಸಬೇಕಾಗಿದ್ದು ಸಮಾಜದ ಪ್ರತಿಯೊಬ್ಬರೂ ಸಂಘಟನೆಯೊಂದಿಗೆ ಕೈ ಜೋಡಿಸಬೇಕು. ಸೂಕ್ಷ್ಮತೆಯನ್ನು ಅರಿತುಕೊಂಡು ಸಮಾಜಕ್ಕಾದ ನೋವು ನಮಗಾದಂತೆ ಎಂಬ ಭಾವನೆ ಮೂಡಿಬರಬೇಕು. ಸಮಾಜದ ಉಳಿವಿಗಾಗಿ ಯುವಕರ ಯೋಚನೆಗಳಿಗೆ ಶಕ್ತಿ ನೀಡಬೇಕು. ಸಂಘಟಿತರಾಗುವ ಭಾವನೆಗಳನ್ನು ಜೋಡಿಸಿಕೊಳ್ಳಬೇಕು. ಸ್ವ-ಪ್ರತಿಷ್ಟೆಗೆ ಸಮಾಜವನ್ನು ವಿಂಗಡಿಸಬಾರದು. ಶೋಷಿತರ ನೋವು ನಮ್ಮ ನೋವು ಅರಿತು ನೆರವಾಗಬೇಕು ಎಂದು ಹೇಳಿದರು.
ಧಾರ್ಮಿಕ ಪ್ರವಚನ ನೀಡಿದ ಅರ್ಚಕ ನಾಗೇಶ್ ಕುದ್ರೆತ್ತಾಯ ಮಾತನಾಡಿ, ಹಿಂದು ಧರ್ಮದ ತತ್ವಗಳನ್ನು ಪರಿಪಾಲನೆ ಮಾಡುವುದು, ಶ್ರೇಷ್ಠವಾಗಿರುವ ಧಾರ್ಮಿಕ ಪ್ರವಚನ ಶ್ರೇಷ್ಠ. ಅದನ್ನು ಕೇಳಿ ಪಾಲನೆ ಮಾಡಿದಾಗ ಪ್ರತಿಫಲ ದೊರೆಯಲಿದೆ. ಆವರವರ ಕರ್ಮದ ಫಲದಂತೆ ಜೀವನದಲ್ಲಿ ಕಷ್ಟ ಸುಖಗಳನ್ನು ಅನುಭವಿಸುತ್ತಾರೆ. ಶನಿಯನ್ನು ದೂಷಿಸಿ ಪ್ರಯೋಜನವಿಲ್ಲ ಎಂದ ಅವರು ಶ್ರದ್ಧಾ ಕೇಂದ್ರಗಳಿಂದಾಗಿ ಧರ್ಮ ಉಳಿಯಲಿದೆ. ನಮ್ಮ ಪುರಾತನ ಸಂಪ್ರದಾಯ ಉಳಿಸಬೇಕು. ಶ್ರದ್ಧಾಕೇಂದ್ರಗಳಿಗೆ ಭಕ್ತಿಯಿಂದ ಬರಬೇಕು ಎಂದರು.


ಅಧ್ಯಕ್ಷತೆ ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಕತ್ತಾರ್‌ನ ಉದ್ಯಮಿ ಡಾ.ರವಿ ಶೆಟ್ಟಿ ನೇಸರ ಕಂಪ ಮಾತನಾಡಿ, ಈ ಭಾಗದ ಹಲವು ಮಂದಿ ಯುವಕರ ಶ್ರಮದ ಫಲವಾಗಿ ಕ್ಷೇತ್ರದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ನಿರಂತರವಾಗಿ ಶನಿಪೂಜೆ ನಡೆಯುತ್ತಾ ಬರುತ್ತಿದೆ. ಈ ವರ್ಷದ ಪೂಜಾ ದಿನವೇ ವರುಣನ ಆಗಮನ ಶುಭ ಸೂಚನೆ ನೀಡಿದೆ. ಪೂಜೆಯ ಪ್ರತಿಫಲ ಎಲ್ಲಾ ಭಕ್ತಾದಿಗಳಿಗೆ ದೊರೆಯಲಿ ಎಂದರು. ದೇಶಕ್ಕೆ ಮೋದಿ, ಉತ್ತರ ಪ್ರದೇಶಕ್ಕೆ ಯೋಗಿ ಕರಾವಳಿ ಪುತ್ತಿಲ ಎಂದು ಖ್ಯಾತಿ ಪಡೆದಿದೆ. ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ನಂತರದ ಅಭಿವೃದ್ಧಿ ಹಾಗೂ ಪ್ರತಿ ಕಾರ್ಯಕ್ರಮಗಳಲ್ಲಿ ಪ್ರಮುಖರಾಗಿರುವ ಅರುಣ್ ಕುಮಾರ್ ಪುತ್ತಿಲರವರು ಇಂದು ರಾಷ್ಟ್ರ ಮಟ್ಟದಲ್ಲಿ ಮಿಂಚಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ಯ ಹಿಂದಾರು ಮಾತನಾಡಿ, ಹಿಂದುತ್ವ ಎನ್ನುವುದು ಬಾಯಿ ಮಾತಾಗಿ, ವೇದಿಕೆಯಲ್ಲಿ ಭಾಷಣಕ್ಕೆ ಸೀಮಿತವಾಗಿರದೆ ನಮ್ಮ ಕಾರ್ಯಗಳ ಮೂಲಕ ಹಿಂದುತ್ವ ಉಳಿಸಬೇಕು. ಜೀವನ ಸಾರ್ಥಕತೆಗಳನ್ನು ಸಾಧಿಸಿ ಹಿಂದುತ್ವ ಬೆಳೆಸಬೇಕು. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿ ಅವರಲ್ಲಿ ಏಕಾಗ್ರತೆ ತರುವ ಕೆಲಸವಾಗಬೇಕು. ಸಾತ್ವಿಕ ಜೀವನವೇ ಹಿಂದುತ್ವದ ಮೂಲವಾಗಿದ್ದು ಜೀವನದಲ್ಲಿ ಸ್ವಾರ್ಥ ಬಿಟ್ಟು, ದುರಾಸೆಗಳಿಗೆ ಬಲಿಯಾಗದೆ ತಪ್ಪಿದಾಗ ತಿದ್ದಿಕೊಂಡು ಜನ ಜಾಗೃತಿ ಮೂಡಿಸಿ ಹಿಂದುತ್ವ ಉಳಿಸಬೇಕು. ವಿಕೃತಿಯಿಂದ ಸಮಾಜ ಹಾಳಾಗಿದೆ. ಇದಕ್ಕಾಗಿ ಸಂಸ್ಕೃತಿಯ ಬಗ್ಗೆ ತಿಳಿಸಬೇಕು ಎಂದರು.
ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಬಾಲಕೃಷ್ಣ ಕಣ್ಣಾರಾಯ ಮಾತನಾಡಿ, ದೇವಸ್ಥಾನಕ್ಕೆ ಬರುವಾಗ ನಾವು ಧರಿಸುವ ವಸ್ತ್ರಗಳು ಇನ್ನೊಬ್ಬರ ಏಕಾಗ್ರತೆ ಅಡ್ಡಿಪಡಿಸುವಂತಿರಬಾರದು. ಇದು ನಮ್ಮ ಹಿಂದು ಸಂಸ್ಕೃತಿ ಬಿಂಬಿಸುವುದಿಲ್ಲ. ಸಂಸ್ಕೃತಿ ಉಳಿಸಲು ವಸ್ತ್ರ ಸಂಹಿತೆ ಅಳವಡಿಸುವುದು ಸೂಕ್ತ. ಮಠಾಧೀಶರುಗಳು ರಾಜಕೀಯ ನಾಯಕರನ್ನು ಓಲೈಸುವುದು, ತಮ್ಮ ಸಮಾಜದವರಿಗೆ ಮೀಸಲಾತಿಗಾಗಿ ಹೋರಾಡುವುದನ್ನು ಬಿಟ್ಟು ಹಿಂದು ಸಮಾಜದ ಒಳಿತಿಗಾಗಿ ಶ್ರಮಿಸಬೇಕು. ಧರ್ಮವನ್ನು ರಾಜಕೀಯ ಲಾಭ ಪಡೆಯುವುದಕ್ಕೆ ಮಾತ್ರವಲ್ಲ ಎಂಬುದನ್ನು ಸ್ವಾಮಿಜಿಯರು ನಾಯಕರಿಗೆ ಮನವರಿಕೆ ಮಾಡಬೇಕು ಎಂದರು.
ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತ ಮಾಜಿ ಸದಸ್ಯ ಸದಾಶಿವ ಗೌಡ ಕೊಡಂಕಿರಿ, ಪ್ರಗತಿಪರ ಕೃಷಿಕ ಹೆಗ್ಗಪ್ಪ ರೈ ಪೊನೋಣಿ, ಕುಕ್ಕಿನಡ್ಕ ಶ್ರೀ ಸುಬ್ರಾಯ ಭಜನಾ ಮಂಡಳಿ ಅಧ್ಯಕ್ಷೆ ಲಲಿತಾ ಪಜಿಮಣ್ಣು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಹಿಂದು ಧಾರ್ಮಿಕ ಮುಖಂಡ, ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿರುವ ಅರುಣ್ ಕುಮಾರ್ ಪುತ್ತಿಲರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಶನಿಪೂಜೆ:
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ವೇ.ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯ ತಂತ್ರಿಯರವರ ನೇತೃತ್ವದಲ್ಲಿ ಶನಿಪೂಜೆ ನೆರವೇರಿತು.

ಶ್ರದ್ಧಾಂಜಲಿ ಅರ್ಪಣೆ:
ಇತ್ತೀಚೆಗೆ ನಿಧನರಾದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮೋನಪ್ಪ ಕರ್ಕೇರ ಹಡೀಲುರವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಭಜನಾ ಮಂಡಳಿ ಸದಸ್ಯೆ ಆರಾಧ್ಯ ಪ್ರಾರ್ಥಿಸಿದರು. ಪೂಜಾ ಸಮಿತಿ ಅಧ್ಯಕ್ಷ ಮನೋಹರ್ ಆಳ್ವ ಪಟ್ಟೆ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಸಚಿನ್ ಶೆಟ್ಟಿ ಪಟ್ಟೆ, ಸದಸ್ಯರಾದ ಜಯಪ್ರಸಾದ್ ಅಂಬಟ, ಹಿತೇಶ್ ಪುತ್ತಿಲ, ಪ್ರಶಾಂತ್ ಪಂಜಳ, ದೀಕ್ಷಿತ್ ಕಂಪ, ಪ್ರಶಾಂತ್ ಆಚಾರ್ಯ, ರಜನಿ ಕಡ್ಯ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಧನಂಜಯ ಕುಲಾಲ್ ವಂದಿಸಿ, ದೀಪಕ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸುಶಾಂತ್ ಆಚಾರ್ಯ ಮುಂಡೂರು ಇವರ ಸಾರಥ್ಯದಲ್ಲಿ ಗಾಯತ್ರಿ ಮ್ಯೂಸಿಕಲ್ಸ್ ದರ್ಬೆ ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನೆರವೇರಿತು. ನೂರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here