ಈ ಸಲದ ಚುನಾವಣೆಯಲ್ಲಿ ಜಾತಿ, ಧರ್ಮ, ಪಕ್ಷ, ಹಣ, ಅಭಿವೃದ್ದಿ, ಸಾಧನೆ, ಅಭ್ಯರ್ಥಿಯ ಆಯ್ಕೆ ಮತ್ತಿತರ ವಿಚಾರಗಳು ಪರಿಣಾಮ ಬೀರಿದ್ದರೂ ಲಂಚ, ಭ್ರಷ್ಟಾಚಾರದ ವಿಚಾರ ಅತ್ಯಂತ ಹೆಚ್ಚು ಪರಿಣಾಮ ಬೀರಿದೆ ಎಂಬುವುದಂತು ಸತ್ಯ. ಪ್ರಧಾನಿ ಮೋದೀಜಿಯವರ, ಅಮಿತ್ ಷಾ, ಯೋಗೀಜಿ, ನಡ್ಡಾ, ರಾಹುಲ್ ಗಾಂಧಿ, ದೇವೇಗೌಡ, ಸಿನಿಮಾ ನಟರ ಪ್ರಭಾವಗಳಿಗಿಂತಲೂ ಸ್ಥಳೀಯ ಸಮಸ್ಯೆ, ಅಭ್ಯರ್ಥಿಯ ಆಯ್ಕೆಯೊಂದಿಗೆ ಲಂಚ, ಭ್ರಷ್ಟಾಚಾರದ ವಿಷಯವನ್ನು ಮತದಾರರು ಮಾತನಾಡಲು ಪ್ರಾರಂಭಿಸಿದ್ದಾರೆ. ಈ ರೀತಿಯ ಸ್ಥಳೀಯ ಜಾಗೃತಿ, ಮತದಾರರು ಜಾಗೃತರಾಗುತ್ತಿರುವುದು ಎಲ್ಲಾ ಪಕ್ಷಗಳ ನಿದ್ದೆ ಕೆಡಿಸಿದೆ. ಅದರ ಪರಿಣಾಮವಾಗಿ ಮುಂದಿನ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಗೆ ಸ್ಥಳೀಯ ಸಮಸ್ಯೆಗಳೊಂದಿಗೆ ಲಂಚ, ಭ್ರಷ್ಟಾಚಾರ ನಿಲ್ಲಿಸುವ ಅಭ್ಯರ್ಥಿಯ ಆಯ್ಕೆಯನ್ನು ಮಾಡುವ ಅನಿವಾರ್ಯತೆ ಎದುರಾಗಲಿದೆ.
ಈ ಹಿನ್ನೆಲೆಯಲ್ಲಿ ಸುದ್ದಿ ಜನಾಂದೋಲನ ವೇದಿಕೆ ಮತದಾರರ ಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳಲಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ನಂತರ ದ.ಕ. ಜಿಲ್ಲೆಯ ಇತರ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸಿ ಅಲ್ಲಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವರುಣಾ ಕ್ಷೇತ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಶಿಗ್ಗಾಂವಿಯಲ್ಲಿ ಜಾಗೃತಿ ಮುಂದುವರಿಸಲಿದೆ. ಅಲ್ಲಿಂದ ನಂತರ ಇಡೀ ರಾಜ್ಯಕ್ಕೆ ವಿಸ್ತರಿಸಬೇಕೆಂದಿದ್ದೇವೆ. ಈ ಯೋಜನೆ ಯಶಸ್ವಿಯಾಗಲು ನಮ್ಮ ತಾಲೂಕಿನ ಜನತೆ, ಸಂಘ ಸಂಸ್ಥೆಗಳು, ಪಕ್ಷಗಳು, ಜನಪ್ರತಿನಿಧಿಗಳು ಮುಂದೆ ಬಂದು ಪ್ರತೀ ಊರಿನಲ್ಲಿ ಮನೆಮನೆಯಲ್ಲಿ ಮತದಾರರ ಜಾಗೃತಿಯನ್ನು ಮಾಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. ‘ನಮ್ಮ ಊರನ್ನು ಲಂಚ, ಭ್ರಷ್ಟಾಚಾರ ಮುಕ್ತ, ಉತ್ತಮ ಸೇವೆಯನ್ನು ನೀಡುವ ಊರನ್ನಾಗಿ ಮಾಡುವುದಲ್ಲದೆ ಹಳ್ಳಿಯಿಂದ ಡೆಲ್ಲಿಗೆ ಆಡಳಿತ ಎಂಬ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ, ರಾಮರಾಜ್ಯದ ಆಶಯ’ವನ್ನು ಈಡೇರಿಸಲು ಎಲ್ಲರೂ ಮುಂದೆ ಬರಬೇಕಾಗಿ ವಿನಂತಿಸುತ್ತಿದ್ದೇನೆ.
