ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ವಿದ್ಯಾರ್ಥಿ ಸಂಘದ ಪ್ರಮಾಣವಚನ

0

ಸರ್ಕಾರದ ಬಗ್ಗೆ ತಿಳಿಯುವುದಕ್ಕೆ ವಿದ್ಯಾರ್ಥಿ ಸಂಘ ಪೂರಕ : ಸುನೀಲ್ ಕುಮಾರ್
ಪುತ್ತೂರು : ಶಾಲೆಗಳಲ್ಲಿ ವಿದ್ಯಾರ್ಥಿ ಸಂಘಗಳು ಕಾರ್ಯನಿರ್ವಹಿಸುವುದರಿಂದ ಸರ್ಕಾರವು ಹೇಗೆ ಆಡಳಿತ ನಡೆಸುತ್ತದೆ ಎನ್ನುವುದನ್ನು ಮಾತ್ರವಲ್ಲದೆ ರಾಜಕೀಯವು ಹೇಗೆ ಸಮಾಜಕ್ಕೆ, ದೇಶಕ್ಕೆ ಮಾದರಿಯಾಗಿರಬೇಕೆಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವುದಕ್ಕೆ ಸಾಧ್ಯ ಎಂದು ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಅಧೀಕ್ಷಕರಾದ ಸುನೀಲ್ ಕುಮಾರ್ ಎಸ್. ಎಲ್ ಹೇಳಿದರು.


ಅವರು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿಎಸ್.ಇ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ನೂತನ ವಿದ್ಯಾರ್ಥಿ ಸಂಘದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶನಿವಾರ ಮಾತನಾಡಿದರು.


ಹೊರಗಿನ ಶತ್ರುಗಳಿಂದ ದೇಶವನ್ನು ರಕ್ಷಿಸಲು ಹೇಗೆ ಸೈನ್ಯದ ವ್ಯವಸ್ಥೆ ಇದೆಯೋ ಹಾಗೆಯೇ ಪೊಲೀಸ್ ವ್ಯವಸ್ಧೆಯು ದೇಶದ ಆಂತರಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಕೆಲಸ ಮಾಡುತ್ತದೆ. ಸಮಾಜದಲ್ಲಿ ಶಾಂತಿ ಕಾಪಾಡುವುದು, ಅಪರಾಧವನ್ನು ತಡೆಗಟ್ಟುವುದು ಮತ್ತು ನಡೆದ ಅಪರಾಧವನ್ನು ಕಂಡುಹಿಡಿಯುವುದರ ಮೂಲಕ ಕಾನೂನು ನಿಯಮಗಳನ್ನು ವ್ಯವಸ್ಥಿತ ರೀತಿಯಲ್ಲಿ ಕಾಪಾಡುವುದೇ ಪೊಲೀಸರ ಕರ್ತವ್ಯವಾಗಿದೆ ಎಂದು ತಿಳಿಸಿದರು.


ದೇಶ, ಸಮಾಜ ಅಭಿವೃದ್ಧಿಯಾಗಬೇಕಾದರೆ ವಿದ್ಯೆ ಮತ್ತು ಜ್ಞಾನದಿಂದ ಮಾತ್ರ ಸಾಧ್ಯ. ಇದರಿಂದ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಸಂಸ್ಕೃತಿ, ಸಂಪ್ರದಾಯಗಳು ಜನರ ಗುಣಮಟ್ಟದ ಸೂಚಕಗಳಾಗಿವೆ. ಮುಂದಿನ ಪ್ರಜೆಗಳಾಗುವ ವಿದ್ಯಾರ್ಥಿಗಳು ವಿದ್ಯೆಯನ್ನು ಪಡೆದುಕೊಂಡು ಸಮಾಜ ಹಾಗೂ ಕುಟುಂಬಕ್ಕೆ ಮಾದರಿಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಅಧ್ಯಕ್ಷತೆ ವಹಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಶಿಕ್ಷಣವು ವಿದ್ಯಾರ್ಥಿಗಳನ್ನು ದೇಶದ ಸೇವಕ ಹಾಗು ದೇಶದ ಪ್ರಬುದ್ಧ ನಾಗರಿಕರನ್ನಾಗಿ ಮಾಡಬೇಕಾಗಿದೆ. ನಮಗೆ ರಕ್ಷಣೆ ನೀಡುವ ಯೋಧರು ಮತ್ತು ಆರಕ್ಷಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಇವರ ಕೆಲಸದ ತೀವ್ರತೆ, ಸೂಕ್ಷ್ಮತೆ ಮಕ್ಕಳಿಗೆ ಗೊತ್ತಾಗಬೇಕು ಎಂದರಲ್ಲದೆ ನೇತಾರರಾಗಿರುವ ವಿದ್ಯಾರ್ಥಿಗಳು ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ, ಮುಂದೆ ಈ ದೇಶದ ಬಡವರ ಕಣ್ಣೊರೆಸುವ ರಾಜಕಾರಣಿಗಳಾಗಿ ಮೂಡಿಬರಬೇಕು ಎಂದು ಹಾರೈಸಿದರು.


ಕಾರ್ಯಕ್ರಮದಲ್ಲಿ ಕಲ್ಪವೃಕ್ಷ, ಕಾಮಧೇನು, ಐರಾವತ, ಅಮೃತ ಎಂಬ ನಾಲ್ಕು ವಿದ್ಯಾರ್ಥಿ ತಂಡದ ಪ್ರತಿನಿಧಿಗಳಿಗೆ ಬಾವುಟ ಮತ್ತು ನಾಮ ಫಲಕಗಳನ್ನು ನೀಡಲಾಯಿತು. ಐರಾವತ ತಂಡದ ಪ್ರತಿನಿಧಿಗಳಾದ 10ನೇ ತರಗತಿಯ ಅಭಿನವ ವಶಿಷ್ಠ ಹಾಗೂ ಶ್ರೀ ಲಕ್ಷ್ಮಿ, ಅಮೃತ ತಂಡದ ಪ್ರತಿನಿಧಿಗಳಾದ 10ನೇ ತರಗತಿ ಅಂಶಕ್ ಹಾಗೂ ಅಂಸಿಕಾ, ಕಾಮಧೇನು ತಂಡದ ಪ್ರತಿನಿಧಿಗಳಾದ 10ನೇ ತರಗತಿಯ ಭವಿಷ್ಯ ಹಾಗೂ 9ನೇ ತರಗತಿಯ ಆಧ್ಯಾ ಎಸ್. ರೈ, ಕಲ್ಪವೃಕ್ಷ ತಂಡದ ಪ್ರತಿನಿಧಿಗಳಾದ ಹತ್ತನೇ ತರಗತಿಯ ಶೌರಿ ಹಾಗೂ ತನ್ವಿ ಇವರು ನಾಮಫಲಕ ಹಾಗೂ ತಂಡದ ಬಾವುಟಗಳನ್ನು ಗಣ್ಯರಿಂದ ಸ್ವೀಕರಿಸಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಶಾಲಾ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. 9ನೇ ತರಗತಿ ವಿದ್ಯಾರ್ಥಿನಿ ಸಾರಿಕಾ ಸ್ವಾಗತಿಸಿ, ಚರಿಷ್ಮಾ ವಂದಿಸಿದರು. 9ನೇ ತರಗತಿ ವಿದ್ಯಾರ್ಥಿ ಜ್ವಲನ್ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿಗಳಾದ ನಿಹಾರಿಕ, ಮಂದಿರ ಕಜೆ ನಿರ್ವಹಿಸಿದರು.

LEAVE A REPLY

Please enter your comment!
Please enter your name here