ʼಬಾಲಕಾರ್ಮಿಕರು ಕಂಡು ಬಂದರೆ ಧೈರ್ಯದಿಂದ ಮಾಹಿತಿ ನೀಡಿʼ – ವಿದ್ಯಾರ್ಥಿಗಳಿಗೆ ನ್ಯಾಯಾಧೀಶ ಶಿವಣ್ಣ ಕರೆ

0

ಪುತ್ತೂರು: ಮಕ್ಕಳನ್ನು ಬಾಲಕಾರ್ಮಿಕರ ಪದ್ಧತಿಯಿಂದ ನಿರ್ಮೂಲನೆಗೊಳಿಸಬೇಕು. ಅವರಿಗೆ ಉತ್ತಮ ಶಿಕ್ಷಣ ಸಿಗಬೇಕು. ಈ ನಿಟ್ಟನಲ್ಲಿ ಬಾಲಕಾರ್ಮಿಕರು ಕಂಡು ಬಂದರೆ ಧೈರ್ಯದಿಂದ ಮಾಹಿತಿ ನೀಡಿ ಎಂದು ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಶಿವಣ್ಣ ಎಚ್.ಆರ್ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಸೇವೆಗಳ ಸಮಿತಿ ಪುತ್ತೂರು ಮತ್ತು ವಕೀಲರ ಸಂಘ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಡಾ. ಕೆ.ಎಂ.ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ ಮತ್ತು ಅಸಹಾಯಕರ ಸೇವಾ ಟ್ರಸ್ಟ್‌ನ ಸಹಯೋಗದೊಂದಿಗೆ ಇಲ್ಲಿನ ಡಾ. ಕೆ. ಎಂ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ ಜೂ.14ರಂದು ನಡೆದ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಬಾಲ ಕಾರ್ಮಿಕರಾದರೆ ಅವರ ವಿದ್ಯಾಭ್ಯಾಸಕ್ಕೆ ಕುಂದುಕೊರತೆ ಉಂಟಾಗುತ್ತದೆ. ಶಿಕ್ಷಣ ಪ್ರತಿಯೊಬ್ಬ ಮಕ್ಕಳ ಹಕ್ಕು. ಸರಕಾರವೂ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತದೆ. ಕುರಿತು ಬಾಲಕಾರ್ಮಿಕರಿಗೆ ಉಪದೇಶ ನೀಡಬೇಕು. ಬಾಲಕಾರ್ಮಿಕರನ್ನಾಗಿ ಇರಿಸಿಕೊಂಡವರ ಮೇಲೆ 6 ತಿಂಗಳಿಂದ 2 ವರ್ಷ ಶಿಕ್ಷೆ ಮತ್ತು ರೂ. 20 ಸಾವಿರದಿಂದ ರೂ.50 ಸಾವಿರ ದಂಡ ವಿಧಿಸಲಾಗುತ್ತದೆ. ಈ ನಿಟ್ಟಿನಲ್ಲಿ ಬಾಲಕಾರ್ಮಿಕರಿದ್ದರೆ ಮಾಹಿತಿ ನೀಡಿ ಇದರ ಜೊತೆಗೆ ಭವಿಷ್ಯದ ದೃಷ್ಟಿಯಿಂದ ಮೊಬೈಲ್ ಬಳಕೆ ಕಡಿಮೆ ಮಾಡಿ ಎಂದರು.
ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ಯಾನಲ್ ವಕೀಲೆ ಹೀರಾ ಉದಯ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಬಾಲಕಾರ್ಮಿಕರ ಪದ್ಧತಿಯ ಕಾನೂನಿನಲ್ಲೂ ಬದಲಾವಣೆ ಆಗುತ್ತಿವೆ. ಆದರೆ ಕೆಲವು ಕಾನೂನನ್ನು ದೊಡ್ಡವರಿಗೆ ಹೇಳಿಕೊಡಬೇಕಾಗಿದೆ. ಬಡತನ ಬಾಲಕಾರ್ಮಿಕ ಪದ್ಧತಿಗೆ ದೂಡಿದರೆ ಶಾಲೆಯಲ್ಲಿನ ಮಾನಸಿಕ ಒತ್ತಡ, ಕುಂದು ಕೊರತೆಯೂ ಮಕ್ಕಳ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಬಾಲಕಾರ್ಮಿಕರು ಎಲ್ಲಿಯಾದರೂ ಕಂಡರೆ ತಕ್ಷಣ ಶಾಲಾ ಶಿಕ್ಷಕರಿಗಾದರೂ ಮಾಹಿತಿ ನೀಡಿ, ಯಾವುದೇ ಸಮಸ್ಯೆ ಬಂದಾಗಲೂ ಶಿಕ್ಷಣವನ್ನು ಬಿಡಬೇಡಿ ಎಂದರು. ವಕೀಲರ ಸಂಘದ ಅಧ್ಯಕ್ಷ ಚಿನ್ಮಯ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಮುಖ್ಯಗುರು ಜಲಜಾಕ್ಷಿ ಕೆ.ಎಮ್, ಪ್ಯಾನಲ್ ವಕೀಲೆ ಪ್ರಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಅಬ್ರಾಹಂ, ವೀಣಾ ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮ ಸಂಯೋಜಕಿ ಪ್ಯಾರ ಲೀಗಲ್ ವಾಲೆಂಟಿಯರ್ ಆಗಿರುವ ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ ಸ್ವಾಗತಿಸಿದರು. ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಪ್ಯಾರಲೀಗಲ್ ವಾಲೆಂಟೆಯರ್ ಶಾಂತಿ ಹೆಗ್ಡೆ ವಂದಿಸಿದರು.

LEAVE A REPLY

Please enter your comment!
Please enter your name here