ಮಂಗಳೂರು ವಿ.ವಿ ಅಂತರ್-ವಲಯ ಕಬಡ್ಡಿ ಟೂರ್ನಮೆಂಟ್ ಮಂಗಳೂರು ವಲಯದಲ್ಲಿ ಫಿಲೋಮಿನಾ ಕಾಲೇಜು ಫೈನಲಿಗೆ ಎಂಟ್ರಿ

0

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಮಂಗಳೂರಿನ ವಿಶ್ವವಿದ್ಯಾನಿಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಮ್ಯಾಟ್ ಅಂಕಣದಲ್ಲಿ ನಡೆಯುತ್ತಿರುವ 2022-23ನೇ ವರ್ಷದ ಪುರುಷರ ಮಂಗಳೂರು ಹಾಗೂ ಉಡುಪಿ ವಲಯವನ್ನೊಳಗೊಂಡ ಅಂತರ್-ವಲಯ ಕಬಡ್ಡಿ ಟೂರ್ನಮೆಂಟಿನ ಮಂಗಳೂರು ವಲಯದ ಟೂರ್ನಮೆಂಟಿನಲ್ಲಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಫೈನಲ್ ಹಂತಕ್ಕೆ ತೇರ್ಗಡೆ ಹೊಂದಿದೆ.
ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ಈ ಟೂರ್ನಮೆಂಟಿನ ಲೀಗ್ ಹಂತದಲ್ಲಿ ಫಿಲೋಮಿನಾ ಕಾಲೇಜು ತಂಡವು ಪೂಂಜಾಲಕಟ್ಟೆ ಪ್ರಥಮ ದರ್ಜೆ ಕಾಲೇಜು ತಂಡವನ್ನು ಬಳಿಕ ವಾಮದಪದವು ಪ್ರಥಮ ದರ್ಜೆ ಕಾಲೇಜು ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲಿಗೆ ಅರ್ಹತೆ ಪಡೆದಿತ್ತು. ಕ್ವಾರ್ಟರ್ ಫೈನಲಿನಲ್ಲಿ ಫಿಲೋಮಿನಾ ಕಾಲೇಜು ತಂಡವು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ತಂಡವನ್ನು ಸೋಲಿಸಿ ಸೆಮಿಫೈನಲಿಗೆ ನೆಗೆದಿತ್ತು. ಸೆಮಿಫೈನಲಿನಲ್ಲಿ ಮಂಗಳೂರು ವಿ.ವಿ ಕ್ಯಾಂಪಸ್ ಕಾಲೇಜು ತಂಡವನ್ನು ಸಮರ್ಥವಾಗಿ ಎದುರಿಸಿ ಫೈನಲಿಗೆ ಪ್ರವೇಶ ಪಡೆದಿದೆ. ಟೂರ್ನಿಯುದ್ದಕ್ಕೂ ಫಿಲೋಮಿನಾ ಕಾಲೇಜಿನ ಆಟಗಾರರಾದ ನಾಸಿರ್ ಹಾಗೂ ಸುಹಾನ್ ರವರು ಗಮನಾರ್ಹ ಪ್ರದರ್ಶನ ನೀಡಿರುತ್ತಾರೆ ಎಂದು ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಕೋಚ್ ಹಬೀಬ್ ಮಾಣಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

10 ವರ್ಷಗಳ ಬಳಿಕ ಫೈನಲಿಗೆ..
ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಿರುವ ಫಿಲೋಮಿನಾ ಕಾಲೇಜು ಒಂದೊಮ್ಮೆ ಕಬಡ್ಡಿಯಲ್ಲಿ ಅಪ್ರತಿಮ ಪಾರಮ್ಯವನ್ನೇ ಮೆರೆದಿತ್ತು. ಏಕಲವ್ಯ ಪ್ರಶಸ್ತಿ ವಿಜೇತ ದಿ.ಉದಯ ಚೌಟ, ಪ್ರೊ.ಕಬಡ್ಡಿ ಆಟಗಾರ ಪ್ರಶಾಂತ್ ರೈ ಸೇರಿದಂತೆ ಅನೇಕ ಘಟಾನುಘಟಿ ಆಟಗಾರರು ಇದ್ದಂತಹ ಸಮಯದಲ್ಲಿ ಫಿಲೋಮಿನಾ ಕಾಲೇಜು ಸತತವಾಗಿ ಟ್ರೋಫಿಯನ್ನು ಎತ್ತಿ ಹಿಡಿದಿರುವ ಕಾಲಘಟ್ಟವಾಗಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ಫಿಲೋಮಿನಾ ಕಾಲೇಜು ಕಬಡ್ಡಿಯಲ್ಲಿ ಪಾರಮ್ಯ ಹೊಂದಲು ಅಸಾಧ್ಯವಾಗಿತ್ತು. ಇದೀಗ ಹತ್ತು ವರ್ಷಗಳ ಬಳಿಕ ಫಿಲೋಮಿನಾ ಕಾಲೇಜು ಫೈನಲ್ ಹಂತಕ್ಕೆ ನೆಗೆದಿರುವುದು ಅಸಾಮಾನ್ಯ ಸಾಧನೆಯಾಗಿದೆ.

LEAVE A REPLY

Please enter your comment!
Please enter your name here