ಕೊಲೆಯಾದ ಮಸೂದ್,ಫಾಝಿಲ್, ಜಲೀಲ್, ದೀಪಕ್ ರಾವ್‌ರವರ ಕುಟುಂಬಕ್ಕೂ ಸರಕಾರದಿಂದ ತಲಾ 25 ಲಕ್ಷ ರೂ.ಪರಿಹಾರ ಮಂಜೂರು

0

ಮಂಗಳೂರು:ದುಷ್ಕರ್ಮಿಗಳಿಂದ ಕೊಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಯುವಕರ ಕುಟುಂಬದವರಿಗೆ ತಲಾ ರೂ.25 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. 2022ರ ಜುಲೈ 19ರಂದು ಬೆಳ್ಳಾರೆಯಲ್ಲಿ ಕೊಲೆಯಾಗಿದ್ದ ಮಸೂದ್, 2022ರ ಜುಲೈ 28ರಂದು ಕೊಲೆಯಾಗಿದ್ದ ಸುರತ್ಕಲ್‌ನ ಕಾಟಿಪಳ್ಳದ ಮೊಹಮ್ಮದ್ ಫಾಝಿಲ್, 2022ರ ಡಿಸೆಂಬರ್ 24ರಂದು ಕೊಲೆಯಾಗಿದ್ದ ಕಾಟಿಪಳ್ಳದ ಅಬ್ದುಲ್ ಜಲೀಲ್ ಹಾಗೂ 2018ರ ಜನವರಿ 3ರಂದು ಕೊಲೆಯಾಗಿದ್ದ ಕಾಟಿಪಳ್ಳದ ದೀಪಕ್ ರಾವ್ ಅವರ ಕುಟುಂಬದವರಿಗೂ ಸರಕಾರದಿಂದ ಪರಿಹಾರ ಘೋಷಣೆ ಆಗಿದೆ.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಈ ಹಣ ಮಂಜೂರು ಮಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆದೇಶಿಸಿದ್ದಾರೆ.

2022ರ ಜುಲೈ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಕೊಲೆಗಳು ನಡೆದಿದ್ದವು.ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬದವರಿಗೆ ಮಾತ್ರ ಹಿಂದಿನ ಬಿಜೆಪಿ ಸರ್ಕಾರ ರೂ.25 ಲಕ್ಷ ಪರಿಹಾರ ನೀಡಿತ್ತು.ಕೊಲೆಯಾದ ಉಳಿದವರ ಕುಟುಂಬದವರಿಗೂ ಸರಕಾರ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು.ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಸರಕಾರದ ವತಿಯಿಂದ ಪರಿಹಾರ ಧನ ಮಂಜೂರು ಮಾಡುವಂತೆ ಒಳಾಡಳಿತ ಇಲಾಖೆಯನ್ನು ಕೋರಿದ್ದರು.ಇದೀಗ ಸರಕಾರ ನಾಲ್ವರ ಕುಟುಂಬಗಳಿಗೂ ಪರಿಹಾರ ಘೋಷಿಸಿದೆ.

ಜೂ.19ರಂದು ಚೆಕ್ ವಿತರಣೆ
ಮೃತರ ಕುಟುಂಬ ವರ್ಗದವರಿಗೆ ಜೂ.19ರಂದು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನಲ್ಲಿರುವ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪರಿಹಾರದ ಚೆಕ್ ವಿತರಿಸಲಿದ್ದಾರೆ.ಮೃತರ ಕುಟುಂಬದವರೊಂದಿಗೆ ಹಾಜರಿರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಽಕಾರಿಯವರು ಸಂಬಂಧಿಸಿದ ತಹಶೀಲ್ದಾರರಿಗೆ ಪತ್ರ ಬರೆದು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here