ನೆಲ್ಯಾಡಿ ಸುತ್ತಮುತ್ತಲಿನ ವಿದ್ಯಾರ್ಥಿಗಳ ಜ್ಞಾನ ದಾಹವನ್ನು ತಣಿಸಲು ನಿರ್ಮಿತವಾಗಿರುವ ಸುಸಜ್ಜಿತವಾದ ವಿದ್ಯಾ ದೇಗುಲವೇ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ. ಬೆಳವಣಿಗೆಯ ಸ್ವರ್ಣ ಮೆಟ್ಟಿಲು ತುಳಿಯುತ್ತಿದ್ದ ನೆಲ್ಯಾಡಿ ಗ್ರಾಮೀಣ ಪ್ರದೇಶದಲ್ಲಿ 1987ರಲ್ಲಿ ಉದಯಿಸಿದ ವಿದ್ಯಾ ಸಂಸ್ಥೆ ಜ್ಞಾನೋದಯ ಬೆಥನಿ ಹಲವು ಮಕ್ಕಳ ಜ್ಞಾನ ದಾಹವನ್ನು ತೀರಿಸುತ್ತಾ ಹಲವು ಗ್ರಾಮೀಣ ಪ್ರತಿಭೆಗಳನ್ನು ಅರಳಿಸುತ್ತಾ ಇವತ್ತು ನೆಲ್ಯಾಡಿ ಪರಿಸರದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದೆ.
1987ರಲ್ಲಿ ಆಗಿನ ಧರ್ಮ ಗುರುಗಳಾಗಿದ್ದ ರೆ.ಫಾ. ಝಕರಿಯಾಸ್ ನಂದಿಯಾಟ್ ಓಐಸಿಯವರ ಅವಿರತವಾದ ಪ್ರಯತ್ನದಿಂದ ಮಲಂಕರ ಕಥೋಲಿಕ್ ಧಾರ್ಮಿಕ ಸಂಸ್ಥೆಯಿಂದ ಬೆಥನಿ ಧರ್ಮ ಸೇವಾ ಸಂಗಮ ಎಂಬ ಸಂಸ್ಥೆಯ ಮೂಲಕ ನೋಂದಾಯಿತವಾದ ಈ ವಿದ್ಯಾ ಸಂಸ್ಥೆ 1988ರಲ್ಲಿ ಕರ್ನಾಟಕ ಸರಕಾರದ ಮಾನ್ಯತೆಯನ್ನು ಪಡೆಯಿತು. ಅಲ್ಲಿಂದ ಸಂಸ್ಥೆಯು ಹಿಂತಿರುಗಿ ನೋಡದೆ ನಾಗ ಲೋಟದಲ್ಲಿ ಮುನ್ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ 1999ರಲ್ಲಿ ಮೊದಲ ಎಸ್‌ಎಸ್‌ಎಲ್‌ಸಿ ಬ್ಯಾಚ್ ಉತ್ತಮ ಫಲಿತಾಂಶದೊಂದಿಗೆ ಹೊರ ಹೊಮ್ಮುವುದರ ಮೂಲಕ ಶಾಲೆಯ ಮುಕುಟಕ್ಕೆ ಕೀರ್ತಿಯ ಗರಿಯನ್ನು ಸೇರಿಸಿತು. ಅಲ್ಲಿಂದ ಮುಂದೆ ಸಂಸ್ಥೆ ಶೈಕ್ಷಣಿಕ ಪ್ರಗತಿಯಲ್ಲಿ ಮುನ್ನಡೆಯನ್ನು ಸಾಧಿಸುತ್ತಾ ಹತ್ತು ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿತು. 37 ವರ್ಷದ ಶೈಕ್ಷಣಿಕ ಯಾತ್ರೆಯನ್ನು ಪೂರೈಸುತ್ತ ತನ್ನ ಯಶಸ್ಸಿನ ಚೈತ್ರ ಯಾತ್ರೆಯನ್ನು ಮುಂದುವರಿಸುತ್ತಿದೆ. ಶಾಲೆಯ 37 ವರ್ಷದ ಇತಿಹಾಸದಲ್ಲಿ ಈ ಸಂಸ್ಥೆ ಪದವಿಪೂರ್ವ ಕಾಲೇಜ್ ಆಗಿ ಬೆಳೆಯಿತು. ಇದೀಗ ಸಂಸ್ಥೆಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಶಾಲೆಯ ಅಭಿವೃದ್ಧಿಯ ಸಂಕೇತವಾಗಿ ಕಲಿಕೆಗೆ ಸಂಪೂರ್ಣ ಹೊತ್ತನ್ನು ನೀಡುವ ಉದ್ದೇಶದಿಂದ ವಿಜ್ಞಾನ ಪ್ರಯೋಗಾಲಯವನ್ನು ನವೀಕರಿಸಿ ಸುಸಜ್ಜಿತವಾಗಿ ಆಧುನಿಕರಿಸಲಾಗಿದ್ದು ಇದು ಜೂ.24ರಂದು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾಗುತ್ತಿದೆ.
ಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಕಂಗೊಳಿಸುವ ಈ ಸಂಸ್ಥೆಯು ಹಚ್ಚ ಹಸಿರಿನ ಸ್ವಚ್ಛ ಪರಿಸರದಿಂದ ಕಂಗೊಳಿಸುತ್ತಿದೆ. ಮಕ್ಕಳ ಕಲಿಕೆಗೆ ಮುಕ್ತವಾದ ವಾತಾವರಣವನ್ನು ಕಲ್ಪಿಸಿದೆ, ಸಹಪಠ್ಯ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ, ಸಾಹಿತಿಕ ಹಾಗೂ ಇನ್ನಿತರ ಚಟುವಟಿಕೆಗಳಿಗೂ ಸಮಾನ ಪ್ರಾಮುಖ್ಯತೆಯನ್ನು ನೀಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಾನವೀಯ ಮೌಲ್ಯಗಳನ್ನು ಬೆಳೆಸಲು ಶಿಕ್ಷಕರು ಶ್ರಮಿಸುತ್ತಿದ್ದಾರೆ, ಶಿಸ್ತು ಬದ್ಧ ಜೀವನಕ್ಕೆ ಪ್ರಮುಖ ಆದ್ಯತೆಯನ್ನು ನೀಡಲಾಗುತ್ತಿದೆ. ಆಧುನಿಕ ಕಂಪ್ಯೂಟರ್ ಯುಗಕ್ಕೆ ಪೂರಕ ಎಂಬಂತೆ ಶಾಲೆಯಲ್ಲಿ ಈ ಆರ್ ಪಿ ತಂತ್ರಜ್ಞಾನವನ್ನು ಅಳವಡಿಸಿ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ಪೋಷಕರಿಗೆ ಶಾಲೆಯಿಂದ ಒದಗಿಸುವುದರ ಜೊತೆಗೆ ಬಡ ವಿದ್ಯಾರ್ಥಿಗಳಿಗೆ ಸಹಾಯವನ್ನು ನೀಡುತ್ತಾ ಸಂಸ್ಥೆಯು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ.