ಪುತ್ತೂರು: ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಧರ್ಮಸ್ಥಳ ಪಾಂಗಾಳ ನಿವಾಸಿ ಸೌಜನ್ಯರವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಕಾರ್ಕಳ ಕುಕ್ಕುಂದೂರು ನಿವಾಸಿ ಸಂತೋಷ್ ರಾವ್ ನಿರ್ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಸಿ. ಸಂತೋಷ್ ತೀರ್ಪು ನೀಡಿದ್ದಾರೆ. ಪೈಶಾಚಿಕ ಕೃತ್ಯ ನಡೆದ 11 ವರ್ಷಗಳ ಬಳಿಕ ಈ ತೀರ್ಪು ಪ್ರಕಟಗೊಂಡಿದೆ. ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಈ ಪ್ರಕರಣದ ತೀರ್ಪು ಪ್ರಕಟಗೊಂಡ ಬೆನ್ನಲ್ಲಿಯೇ ಮತ್ತೆ ಪರ ವಿರೋಧ ಚರ್ಚೆ ಆರಂಭಗೊಂಡಿದೆ.
ಸೌಜನ್ಯ ರೇಪ್ ಮರ್ಡರ್ ಕೇಸ್‌ನ ತೀರ್ಪು: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿಗಳಾದ ಚಂದಪ್ಪ ಗೌಡ-ಕುಸುಮಾವತಿ ದಂಪತಿಯ ಪುತ್ರಿ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಕು. ಸೌಜನ್ಯಾರವರು 2012ರ ಅಕ್ಟೋಬರ್ 9ರಂದು ಕಾಲೇಜಿನಿಂದ ಮನೆಗೆ ಹೋಗುವಾಗ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ಸೌಜನ್ಯರವರನ್ನು ಪತ್ತೆ ಹಚ್ಚಲು ಅಂದು ಸಾವಿರಾರು ಮಂದಿ ವಿವಿದೆಡೆ ಹುಡುಕಾಟ ನಡೆಸಿದ್ದರು. ಆದರೂ ಅವರ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ತಂದೆ ಚಂದಪ್ಪ ಗೌಡ ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 9ರಂದು ನಾಪತ್ತೆ ಕೇಸು ದಾಖಲಾಗಿತ್ತು. ನಾಪತ್ತೆಯಾದ ಮಾರನೇ ದಿನ ಸೌಜನ್ಯ ಅವರ ಮೃತದೇಹ ಅತ್ಯಾಚಾರವೆಸಗಿ ಕೊಲೆ ಮಾಡಿದ ರೀತಿಯಲ್ಲಿ ಧರ್ಮಸ್ಥಳ ಗ್ರಾಮದ ಮಣ್ಣಸಂಕದ ಪಕ್ಕದಲ್ಲಿರುವ ತೋಡಿನ ಸಮೀಪದಲ್ಲಿರುವ ಕಾಡಿನಲ್ಲಿ ಪತ್ತೆಯಾಗಿತ್ತು. ಬಳಿಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಕೇಸನ್ನು ರೇಪ್ ಆಂಡ್ ಮರ್ಡರ್ ಕೇಸ್ ಆಗಿ ಪರಿವರ್ತಿಸಲಾಗಿತ್ತು. ಎರಡು ದಿನದ ಬಳಿಕ ಕಾರ್ಕಳ ಕುಕ್ಕುಂದೂರು ನಿವಾಸಿ ಸಂತೋಷ್ ರಾವ್ ಎಂಬಾತನನ್ನು ಕೆಲವು ಯುವಕರು ಹಿಡಿದು ತಂದು ಈತನೇ ಸೌಜನ್ಯರವರ ಅತ್ಯಾಚಾರ ಮತ್ತು ಕೊಲೆ ಮಾಡಿದವನು ಎಂದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆರಂಭದಲ್ಲಿ ಬೆಳ್ತಂಗಡಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆಗೊಳಿಸಲಾಗಿತ್ತು. ಪ್ರಕರಣದ ಹಿಂದೆ ಹಲವು ಪ್ರಭಾವಿಗಳು ಇರುವುದರಿಂದ ಸಿಐಡಿಯವರೂ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪ ವ್ಯಕ್ತವಾಗಿ ರಾಜ್ಯಾದ್ಯಂತ ಹಲವು ಸಂಘಟನೆಗಳ ನೇತೃತ್ವದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದ್ದರಿಂದ ಬೆಳ್ತಂಗಡಿಯಲ್ಲಿ ಅಂದು ಶಾಸಕರಾಗಿದ್ದ ಕೆ. ವಸಂತ ಬಂಗೇರ ಅವರ ಒತ್ತಾಯದ ಹಿನ್ನೆಲೆಯಲ್ಲಿ ಆ ಸಂದರ್ಭ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ನಂತರ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಆರೋಪಿ ಸಂತೋಷ್ ರಾವ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಬಳಿಕ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸುಧೀರ್ಘ ವಿಚಾರಣೆ ನಡೆದು ಜೂನ್ 16ರಂದು ತೀರ್ಪು ಪ್ರಕಟವಾಗಿದೆ. ಅತ್ಯಾಚಾರ ಮತ್ತು ಕೊಲೆಯ ಆಪಾದನೆಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾದ ಹಿನ್ನೆಲೆಯಲ್ಲಿ ಆರೋಪಿ ಸಂತೋಷ್ ರಾವ್‌ನನ್ನು ಖುಲಾಸೆಗೊಳಿಸಿ ತೀರ್ಪು ನೀಡಲಾಗಿದೆ.
ಸೌಜನ್ಯರವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯಾಗಿ ಬಂಧಿಸಲ್ಪಟ್ಟು ಇದೀಗ ದೋಷಮುಕ್ತವಾಗಿರುವ ಸಂತೋಷ್ ರಾವ್‌ರವರ ಪರ ವಾದ ಮಂಡಿಸಿದ ಈರ್ವರು ಯುವ ವಕೀಲರು ಯಾವುದೇ ಶುಲ್ಕ ಪಡೆದಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಸೌಜನ್ಯರವರ ರೇಪ್ ಆಂಡ್ ಮರ್ಡರ್ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳಿದ್ದಾರೆ. ಅವರನ್ನು ರಕ್ಷಿಸುವುದಕ್ಕಾಗಿ ಅಮಾಯಕ ಸಂತೋಷ್ ರಾವ್‌ರವರನ್ನು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಲಾಗಿದೆ ಎಂದು ವ್ಯಾಪಕ ಸುದ್ದಿಯಾಗಿತ್ತು. ಅಲ್ಲದೆ ಸಂತೋಷ್ ರಾವ್ ಮಾನಸಿಕ ಅಸ್ವಸ್ಥರಾಗಿದ್ದು ಆಗಾಗ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ಧರ್ಮಸ್ಥಳಕ್ಕೆ ಬಂದಾಗಲೆಲ್ಲಾ ಆಸುಪಾಸಿನ ಪರಿಸರದಲ್ಲಿ ಸುತ್ತಾಡುತ್ತಿದ್ದರು. ಸೌಜನ್ಯರವರನ್ನು ಅಮಾನುಷವಾಗಿ ಅತ್ಯಾಚಾರಗೈದು ಬರ್ಬರವಾಗಿ ಕೊಲೆ ಮಾಡಿರುವ ಪ್ರಭಾವಿ ಪಾತಕಿಗಳು ಪ್ರಕರಣದಲ್ಲಿ ಸಿಲುಕದಂತೆ ಮಾಡಲು ಘಟನೆಯ ವೇಳೆ ಧರ್ಮಸ್ಥಳದಲ್ಲಿ ಅಲೆದಾಡುತ್ತಿದ್ದ ನಿರಪರಾಧಿ ಸಂತೋಷ್ ರಾವ್‌ರವರನ್ನು ಬಂಧಿಸುವ ನಾಟಕ ಮಾಡಲಾಗಿತ್ತು ಎಂಬ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ಸಂತೋಷ್ ರಾವ್ ಪರ ಟೊಂಕ ಕಟ್ಟಿ ನಿಂತು ಸಿಬಿಐ ಸ್ಪೆಷಲ್ ಕೋರ್ಟ್‌ನಲ್ಲಿ ವಾದ ಮಂಡಿಸಿದವರು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರು ನಿವಾಸಿ ಮೋಹಿತ್ ಕುಮಾರ್ ಹಾಗೂ ವಿಟ್ಲ ಪದ್ಯಾಣದ ನವೀನ್ ಕುಮಾರ್ ಅವರು. ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿರುವ ಬೆಳ್ತಂಗಡಿಯ ಕರುಣಾಕರ್ ಅವರ ಮೂಲಕ ಈ ಕೇಸ್ ಮೋಹಿತ್ ಕುಮಾರ್ ಅವರಿಗೆ ಸಿಕ್ಕಿತ್ತು. ಬೆಂಗಳೂರಿನಲ್ಲಿ ವಕೀಲರಾಗಿರುವ ಮೋಹಿತ್ ಕುಮಾರ್ ಅವರು ಒಂದು ರೂಪಾಯಿ ಹಣ ಪಡಯದೇ ಸಂತೋಷ್ ರಾವ್ ಪರ ವಾದ ಮಾಡಿದ್ದರು. ಇವರಿಗೆ ವಕೀಲ ನವೀನ್ ಕುಮಾರ್ ಸಹಕಾರ ನೀಡಿದ್ದರು. ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಘಟನೆಯ ವೇಳೆ ಆರೋಪಿ ಸ್ಥಳದಲ್ಲಿ ಇರಲಿಲ್ಲ. ಆತ ರೇಪ್ ಮಾಡಿರುವ ಬಗ್ಗೆ ವೈದ್ಯಕೀಯ ವರದಿಯಲ್ಲಿ ಉಲ್ಲೇಖ ಆಗಿಲ್ಲ. ಸಂತೋಷ್ ರಾವ್ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ. ಘಟನೆ ನಡೆದ ಎರಡು ದಿನದ ಬಳಿಕ ಆತನನ್ನು ಬಂಧಿಸಲಾಗಿತ್ತು. ಅಮಾಯಕನಾಗಿರುವ ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬಿತ್ಯಾದಿ ಅಂಶಗಳನ್ನು ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು. ವಕೀಲರ ವಾದ ಪುರಸ್ಕರಿಸಿದ ನ್ಯಾಯಾಧೀಶ ಬಿ.ಸಿ. ಸಂತೋಷ್ ಅವರು ಆರೋಪಿ ಸಂತೋಷ್ ರಾವ್‌ರವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣದಿಂದ ದೋಷಮುಕ್ತಗೊಳಿಸುವುದಾಗಿ ತೀರ್ಪು ನೀಡಿದ್ದಾರೆ. ಅತ್ಯಾಚಾರ ಮತ್ತು ಕೊಲೆ ನಡೆಸಿದ ಆರೋಪದಡಿ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಸಂತೋಷ್ ರಾವ್ ಬಳಿಕ ಜಾಮೀನು ಪಡೆದು ಹೊರ ಬಂದಿದ್ದ. ತೀರ್ಪು ಪ್ರಕಟವಾಗುವ ವೇಳೆ ಸಂತೋಷ್ ರಾವ್ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದ.
ವಕೀಲ ಮೋಹಿತ್ ಕುಮಾರ್:
ಮೋಹಿತ್ ಕುಮಾರ್‌ರವರ ಮೂಲ ಕಾಸರಗೋಡಿನ ಅಡ್ಕರಮಜಲು ಆಗಿದೆ. ಅಡ್ಕರಮಜಲಿನಿಂದ ಕೊಳ್ತಿಗೆ ಪಾಂಬಾರ್‌ಗೆ ಬಂದು 35 ವರ್ಷ ಕಳೆದಿದೆ. ತಂದೆ ದಿ.ರಾಮಣ್ಣ ಗೌಡ, ತಾಯಿ ಪಾರ್ವತಿ ಕೆ.ಆರ್. ಕೊಳ್ತಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಶ್ರೀ ಷಣ್ಮುಖದೇವ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ, ಪೆರ್ನಾಜೆ ಸೀತಾರಾಘವ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಬಳಿಕ ಸುಳ್ಯದ ಕೆ.ವಿ.ಜೆಯಲ್ಲಿ ಎಲ್‌ಎಲ್‌ಬಿ ವಿದ್ಯಾಭ್ಯಾಸ ಪಡೆದಿದ್ದಾರೆ. ಇದಾದ ಬಳಿಕ ಬೆಂಗಳೂರಿಗೆ ತೆರಳಿದ ಇವರು ಅಲ್ಲಿ ಬೆಳ್ತಂಗಡಿಯ ಕರುಣಾಕರ್ ಪಿ ಎಂಬವರ ಜೊತೆಯಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. ನಂತರ ರುದ್ರೇಶ್ ಎಂಬವರ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದರು. 6 ವರ್ಷಗಳ ಕಾಲ ಸೀನಿಯರ್ ವಕೀಲರ ಜೊತೆಯಲ್ಲಿ ಕೆಲಸ ಕಲಿತು ಬಳಿಕ ಮಲ್ಲೇಶ್ವರಂನಲ್ಲಿ ಸ್ವಂತ ಕಛೇರಿ ಆರಂಭಿಸಿದರು. ಇದೀಗ ಮಲ್ಲೇಶ್ವರಂನಲ್ಲಿ ಸ್ವಂತ ಕಛೇರಿಯನ್ನು ಹೊಂದಿದ್ದಾರೆ. ಮೋಹಿತ್ ಕುಮಾರ್‌ರವರು ಪತ್ನಿ ತೃಪ್ತಿ ಎ.ಕೆ, ಪುತ್ರ ಮೌರ್ಯ ಎಂ.ಗೌಡರವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರಿಗೆ ಅಣ್ಣ ತೀರ್ಥಪ್ರಸಾದ್, ಅಕ್ಕ ಚಿತ್ರಾ, ತಮ್ಮ ಚಿರಣ್‌ರವರಿದ್ದಾರೆ.