ನಾಳೆ(ಜೂ.21):ʼಯೋಗ ಸರ್ವ ವ್ಯಾಪ್ತಿ ಸರ್ವ ಸ್ಪರ್ಶʼ ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಪುತ್ತೂರು: ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್ 21 ರಂದು ವಿಶ್ವದಾದ್ಯಂತ ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚಿನ ಕಲೆಯಾಗಿದೆ. ಭಾರತವು ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆ ಯೋಗವಾಗಿದೆ. ಯೋಗವು 6,000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರತಿವರ್ಷ ಯೋಗದ ದಿನಾಚರಣೆಯು ಯೋಗ, ಧ್ಯಾನ, ಸಭೆಗಳು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ.

ಎಸ್‌ಪಿವೈಎಸ್‌ಎಸ್ ಜಿಲ್ಲಾ ಸಮಿತಿಯ ಮಾರ್ಗದರ್ಶನ
ಸಂಸ್ಕಾರ, ಸಂಘಟನೆ ಮತ್ತು ಸೇವೆ ಎಂಬ ಧ್ಯೇಯೋದ್ಧೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಮಂಗಳೂರು ಇದರ ನೇತ್ರಾವತಿ ವಲಯ ಪುತ್ತೂರು ತಾಲೂಕು ದ.ಕ ಜಿಲ್ಲೆ, ಶ್ರೀ ಮಹಿಷಮರ್ಧಿನಿ ದೇವಸ್ಥಾನ ಮಠಂತಬೆಟ್ಟು, ಆಯುಷ್ ಇಲಾಕೆ ದ.ಕ ಜಿಲ್ಲೆ ಇವರುಗಳ ಸಹಯೋಗದೊಂದಿಗೆ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂ.21 ರಂದು ಬೆಳಿಗ್ಗೆ 5 ರಿಂದ 7ಗಂಟೆಯ ತನಕ ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಡೆಯಲಿದೆ. ಎಸ್‌ಪಿವೈಎಸ್‌ಎಸ್ ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ ನಡೆಯುವ ಈ ಯೋಗ ದಿನಾಚರಣೆಯಲ್ಲಿ ಬಿಸಿರೋಡ್, ಕಲ್ಲಡ್ಕ, ಉಪ್ಪಿನಂಗಡಿ, ಆಲಂಕಾರ್,ಸುಬ್ರಹ್ಮಣ್ಯ, ಪಂಜ ಮತ್ತು ಪುತ್ತೂರು ತಾಲೂಕಿನ ಎಲ್ಲಾ ಯೋಗಬಂಧುಗಳು, ಇತರೇ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 750ಕ್ಕೂ ಮಿಕ್ಕಿ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಮಂಗಳೂರು
ಸಂಸ್ಕಾರ, ಸೇವೆ ಮತ್ತು ಸಂಘಟನೆ ಧ್ಯೇಯೋದ್ದೇಶದೊಂದಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಮಂಗಳೂರು (ಎಸ್‌ಪಿವೈಎಸ್‌ಎಸ್ ಕರ್ನಾಟಕ) ಕಳೆದ 43 ವರ್ಷಗಳಿಂದ ಸಮಿತಿಯ ಪ್ರಧಾನ ಸಂಚಾಲಕರಾದ ಅ.ರಾ.ರಾಮಸ್ವಾಮಿ ಅಣ್ಣನವರ ಮಾರ್ಗದರ್ಶನದಲ್ಲಿ ನುರಿತ ಯೋಗಶಿಕ್ಷಕರಿಂದ ಸಂಪೂರ್ಣ ಉಚಿತವಾಗಿ ಕರ್ನಾಟಕ ಕೇಂದ್ರವಾಗಿರಿಸಿಕೊಂಡು ವಿವಿಧ ರಾಜ್ಯ, ಹೊರರಾಷ್ಟ್ರಗಳಲ್ಲಿ ನಿತ್ಯ ಸಾವಿರಾರು ಶಾಖೆಗಳ ಮೂಲಕ ಲಕ್ಷಾಂತರ ಜನರಿಗೆ ಯೋಗದ ಮೂಲಕ ಸಂಸ್ಕಾರಯುತ ಜೀವನ ಶೈಲಿಯನ್ನು ನೀಡುತ್ತಿದೆ. ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್‌ಗೆ ಮಂಗಳೂರಿನಲ್ಲಿ 200ಕ್ಕೂ ಹೆಚ್ಚು ಶಾಖೆ ಹಾಗೂ ಪುತ್ತೂರಿನಲ್ಲಿ 13 ಶಾಖೆಗಳನ್ನು ಹೊಂದಿದ್ದು, ಸಾವಿರಾರು ಜನರಿಗೆ ಯೋಗ ಶಿಕ್ಷಣದ ಜೊತೆಗೆ ಆರೋಗ್ಯ, ಧನಾತ್ಮಕ ಚಿಂತನೆ, ಕ್ರಿಯಾಶೀಲ ವ್ಯಕ್ತಿತ್ವ, ಆದರ್ಶ ಕುಟುಂಬದ ತರಬೇತಿ ನೀಡಿ ಸಮಾಜದಲ್ಲಿ ಉತ್ತಮವಾದ ಪರಿವರ್ತನೆಗೆ ಕಾರಣವಾಗಿದೆ.

ನೀವೂ ಭಾಗವಹಿಸಿ
9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಬೆಳಿಗ್ಗೆ 5 ರಿಂದ 7 ಗಂಟೆಯ ತನಕ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯೋಗದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9845403734 ಅಥವಾ 9449639889 ಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here