ಕೊಲ್ಲಪದವು ಕೊಡಂಚಡ್ಕದಲ್ಲಿ ಗೋಫಾರ್ಮ್ ಕಟ್ಟಡ ತೆರವುಗೊಳಿಸುವಂತೆ ಪುಣಚ ಗ್ರಾ.ಪಂ. ಬಳಿ ಹಿಂದೂ ಹೋರಾಟ ಸಮಿತಿಯಿಂದ ಪ್ರತಿಭಟನೆ

0

ಪುಣಚ : ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಲಪದವು ಕೊಡಂಚಡ್ಕ ಎಂಬಲ್ಲಿ ನಿರ್ಮಾಣವಾಗುತ್ತಿರುವ ಗೋಫಾರ್ಮ್ ಕಟ್ಟಡಕ್ಕೆ ನೀಡಿರುವ ಪರವಾನಿಗೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ವಿಟ್ಲ ಹಿಂದೂ ಹೋರಾಟ ಸಮಿತಿ ವತಿಯಿಂದ ಜೂ.19ರಂದು ಪುಣಚ ಗ್ರಾಮ ಪಂಚಾಯತ್ ಹೊರಭಾಗದಲ್ಲಿ ಪ್ರತಿಭಟನೆ ನಡೆಯಿತು.

ಸಮಿತಿ ಸಂಚಾಲಕ ಅಕ್ಷಯ್ ರಜಪೂತ್ ಮಾತನಾಡಿ ಕೊಡಂಚಡ್ಕ ಎಂಬಲ್ಲಿ ನಿರ್ಮಾಣವಾಗುತ್ತಿರುವ ಗೋಫಾರ್ಮ್ ಕಟ್ಟಡಕ್ಕೆ ಬಹುತೇಕ ಕಾಮಗಾರಿ ಮುಗಿದ ಬಳಿಕ ಗ್ರಾಮ ಪಂಚಾಯತ್ ಪರವಾನಿಗೆಯನ್ನು ನೀಡಲಾಗಿದ್ದು, ಈ ಕ್ರಮ ಕಾನೂನುಬಾಹಿರ ಕ್ರಮವಾಗಿರುತ್ತದೆ. ಕಟ್ಟಡದ ಅಡಿಸ್ಥಳವು ಸರಕಾರಿ ಎಂಬ ಸಂಶಯವಿದೆ. ಕೇರಳ ಗಡಿ ಪ್ರದೇಶವಾಗಿರುವುದರಿಂದ ಅಕ್ರಮ ಗೋಸಾಗಾಟವಾಗುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು.

ಪ್ರತಿಭಟನೆ ಬಳಿಕ ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಕೂಡಲೇ ಪರವಾನಿಗೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಮನವಿಗೆ ಸ್ಪಷ್ಟನೆ ನೀಡಿ ಕಾನೂನು ಬಾಹಿರವಾಗಿ ಪರವಾನಿಗೆಯನ್ನು ನೀಡಿಲ್ಲ. ಈ ಬಗ್ಗೆ ಜೂ.27 ರಂದು ನಡೆಯುವ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಅದರ ನಿರ್ಣಯದಂತೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂದೆಗೆದುಕೊಳ್ಳಲಾಯಿತು. ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ ಸಾಯ, ಪ್ರಧಾನ ಕಾರ್ಯದರ್ಶಿ ಅಜಯ್ ನೀರ್ಕಜೆ ಹಾಗೂ ಕಾರ್ಯಕರ್ತರು, ಪ್ರಮುಖರು ಭಾಗವಹಿಸಿದ್ದರು. ವಿಟ್ಲ ಪೊಲೀಸರು ಬಂದೋಬಸ್ತ್ ನಡೆಸಿದ್ದರು.

LEAVE A REPLY

Please enter your comment!
Please enter your name here