- ಪುತ್ತೂರು: ಮನೆಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 50 ಸಾವಿರ ರೂ.ಮೌಲ್ಯದ 10 ಗ್ರಾಂ. ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಕಡಬ ತಾಲೂಕಿನ ಬಂಟ್ರ ಗ್ರಾಮದಲ್ಲಿ ಜೂ.19ರಂದು ಬೆಳಿಗ್ಗೆ ನಡೆದಿದೆ.
ಬಂಟ್ರ ಗ್ರಾಮದ ಚಾಕೋಟೆಕೆರೆ ನಿವಾಸಿ ಸುಶೀಲ(48ವ.) ಚಿನ್ನದ ಸರ ಕಳೆದುಕೊಂಡ ನತದೃಷ್ಟೆಯಾಗಿದ್ದಾರೆ. ಇವರು ಚಾಕೋಟೆಕೆರೆಯ ತಂದೆ ಮನೆಯಲ್ಲಿ ತಂಗಿ, ಅಂಗನವಾಡಿ ಶಿಕ್ಷಕಿಯಾಗಿರುವ ದಮಯಂತಿ ಹಾಗೂ ಕುಟುಂಬದವರೊಂದಿಗೆ ವಾಸವಾಗಿದ್ದು ಕೃಷಿ ಹಾಗೂ ಮನೆ ಕೆಲಸ ಮಾಡಿಕೊಂಡಿದ್ದರು. ಜೂ.20ರಂದು ಬೆಳಿಗ್ಗೆ 9.10ರ ವೇಳೆಗೆ ಸುಶೀಲ ಹಾಗೂ ದಮಯಂತಿಯವರು ಮಾತ್ರ ಮನೆಯಲ್ಲಿದ್ದ ಸಂದರ್ಭ ಮನೆಗೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ, ನಾವು ಕೆನರಾ ಬ್ಯಾಂಕಿನವರು ಪ್ರಧಾನಮಂತ್ರಿ ಯೋಜನೆಯಲ್ಲಿ ಹೊಸ ಮನೆ ನಿರ್ಮಿಸಿದವರಿಗೆ ಸಹಾಯ ಧನದ ಬಗ್ಗೆ ತಿಳಿಸಲು ಬಂದಿರುತ್ತೇನೆ. ನಿಮ್ಮ ವಿವರವನ್ನು ನೀಡಿ ಎಂದು ತಿಳಿಸಿದ್ದ. ಇದಕ್ಕೆ ಅಂಗನವಾಡಿ ಶಿಕ್ಷಕಿಯಾಗಿರುವ ದಮಯಂತಿಯವರು ನಿಮ್ಮ ಪರಿಚಯ ನಮಗೆ ಇಲ್ಲ, ನಿಮ್ಮ ಗುರುತು ಚೀಟಿ ತೋರಿಸಿ ಎಂದು ಕೇಳಿದಾಗ ಅಪರಿಚಿತನು ನನ್ನಲ್ಲಿ ಈಗ ಇಲ್ಲ, ಅದು ಮನೆಯಲ್ಲಿದೆ ಎಂದು ಹೇಳಿ ಮನೆಗೆ ಹೋಗಿ ಬರುವುದಾಗಿ ಹೋಗಿದ್ದ. ಬಳಿಕ ದಮಯಂತಿಯವರು ಅಂಗನವಾಡಿಗೆ ಹೋಗಿದ್ದು ನಂತರ ಸುಮಾರು 9.30ರ ವೇಳೆಗೆ ಅದೇ ಅಪರಿಚಿತ ವ್ಯಕ್ತಿಯು ಸುಶೀಲ ಅವರ ಮನೆಗೆ ಮತ್ತೆ ಬಂದು, ನಾನು ನಿಮ್ಮ ತಂಗಿ ಕೆಲಸ ಮಾಡುವ ಅಂಗನವಾಡಿ ಬಳಿ ಹೋಗಿ ಬಂದಿದ್ದು ನಿಮ್ಮ ಆಧಾರ್ ಕಾರ್ಡ್ ಕೊಡಿ ಎಂದು ಕೇಳಿ ಮಾತನಾಡುತ್ತಿದ್ದಂತೆ ಏಕಾಏಕಿಯಾಗಿ ಸುಶೀಲ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿರುತ್ತಾನೆ ಎಂದು ವರದಿಯಾಗಿದೆ. ಕಳವಾದ ಚಿನ್ನದ ಸರವು ಸುಮಾರು 10 ಗ್ರಾಂ.ನದ್ದಾಗಿದ್ದು ಇದರ ಮೌಲ್ಯ 50 ಸಾವಿರ ರೂ.,ಆಗಬಹುದು ಎಂದು ಅಂದಾಜಿಸಲಾಗಿದೆ. ಘಟನೆ ಕುರಿತಂತೆ ಸುಶೀಲ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ: 392 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
Home ಇತ್ತೀಚಿನ ಸುದ್ದಿಗಳು ಬಂಟ್ರ: ಮನೆಗೆ ಬಂದ ಅಪರಿಚಿತನ ಕೃತ್ಯ-ಮಹಿಳೆಯ ಕತ್ತಿನಿಂದ ಚಿನ್ನದ ಸರ ಕಿತ್ತುಕೊಂಡು ಪರಾರಿ