ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಪರಿಣಾಮ-ಬಡ ಅಟೋಚಾಲಕರು ಸಂಕಷ್ಟಕ್ಕೆ-ಸೂಕ್ತ ಕ್ರಮಕೈಗೊಳ್ಳಲು ಸ್ಪೀಕರ್ ಖಾದರ್‌ಗೆ ಮನವಿ

0

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿಕೊಟ್ಟ ಪರಿಣಾಮ ಬಡ ಅಟೋಚಾಲಕರು ಸಂಕಷ್ಟಕ್ಕೆ ಒಳಗಾಗಿರುವುದರಿಂದ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಿಕ್ಷಾ ಚಾಲಕರಾಗಿರುವ ಕೋಡಿಂಬಾಡಿಯ ರಿಕ್ಷಾ ಚಾಲಕ ಕೆ.ಎಂ.ಸುಲೈಮಾನ್ ಅವರು ಕರ್ನಾಟಕ ಸರಕಾರದ ಸಭಾಪತಿ ಯು.ಟಿ.ಖಾದರ್‌ರವರಿಗೆ ಪುತ್ತೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.


ನಾನು ಬ್ಯಾಂಕ್ ಸಾಲ ಮಾಡಿ ಅಟೋರಿಕ್ಷಾ ಖರೀದಿಸಿದವನಾಗಿದ್ದು, ಸ್ವತಃ ಚಾಲಕನಾಗಿ ಆಟೋ ಓಡಿಸುತ್ತಾ ಇದರಿಂದ ಬರುವ ಆದಾಯದಲ್ಲಿ ನನ್ನ ಕುಟುಂಬದ ಜೀವನ, ಕುಟುಂಬದ ಪಾಲನೆ, ಪೋಷಣೆ, ಹಿರಿಯರ ವೈದ್ಯಕೀಯ ಖರ್ಚುವೆಚ್ಚ, ಮಕ್ಕಳ ಶಿಕ್ಷಣ ಇತ್ಯಾದಿಗಳನ್ನು ನಿರ್ವಹಿಸುತ್ತಾ, ವಾಹನದ ತೆರಿಗೆ ವಿಮ ಪಾವತಿಸಿ – ಸಾಲದ ಕಂತು ಬಡ್ಡಿ ಸಂದಾಯ ಮಾಡಿ ಬರುತ್ತಿದ್ದೇನೆ. ನನ್ನಂತಹ ಲಕ್ಷಾಂತರ ಅಟೋ ಮಾಲಕ ಚಾಲಕರು ಕರ್ನಾಟಕದಲ್ಲಿ ಅಟೋದಿಂದಲೇ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಹೀಗಿರುವ ಸಂದರ್ಭದಲ್ಲಿ ಇದೀಗ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವ ಶಕ್ತಿ ಯೋಜನೆಯನುಸಾರ, ಮಹಿಳೆಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಅವಕಾಶ ಘೋಷಿಸಿದೆ. ಇದರ ದುಷ್ಪರಿಣಾಮವನ್ನು ನನ್ನಂತೆ ಸಾವಿರಾರು ಬಡ ಅಟೋ ಮಾಲಕ ಚಾಲಕರು ಎದುರಿಸುತ್ತಿದ್ದಾರೆ. ದುಡಿದು ಜೀವನ ಮಾಡುವ ನಮ್ಮ ಹಂಬಲ ನುಚ್ಚುನೂರಾಗಿದ್ದು, ಕುಟುಂಬದ ಪಾಲನೆ ಪೋಷಣೆ, ಮಾಡುವುದು, ಸಾಲ ಮರುಪಾವತಿಸಲಾಗದೆ ನಮ್ಮ ಜೀವನ ದುರ್ದರ ಸ್ಥಿತಿ ತಲಪಿರುತ್ತದೆ. ಆಟೋ ಓಡಿಸುವುದು ಜೀವನ ನಡೆಸುವುದು ಹೊರತುಪಡಿಸಿ, ನನ್ನಂತಹವರಿಗೆ ಬೇರೆ ಕಸುಬು ತಿಳಿಯದು; ಸಾಲದ ಕಂತು ಪಾವತಿಸದೇ ಇದ್ದರೆ, ವಾಹನ ಮುಟ್ಟುಗೋಲುಪಡಿಸಿ, ಬ್ಯಾಂಕ್ ಮುಂದುವರಿಯುವುದು ನಿಚ್ಚಳವಾಗಿದೆ’; ನಮ್ಮಂತಹವರ ಜೀವನದ ಸರ್ವಸ್ವವಾಗಿರುವ ಅಟೋ ಕೈಬಿಟ್ಟರೆ ನಮ್ಮ ಬದುಕು ಇಲ್ಲವಾಗುತ್ತದೆ. ಈ ಸನ್ನಿವೇಶದಲ್ಲಿ ಸರಕಾರ ಕೊಡಮಾಡಿರುವ ಮಹಿಳೆಯರಿಗೆ ಉಚಿತ ಬಸ್ಸು ಪ್ರಯಾಣಕ್ಕೆ, 55 ವರ್ಷದ ಮೇಲಿನವರಿಗೆ ಎಂಬ ಶರ್ತಗಳನ್ನು ವಿಧಿಸಿ, ನಿಯಂತ್ರಿಸುವ ಆವಶ್ಯಕತೆ ಇರುತ್ತದೆ. ಸಮಾಜದಲ್ಲಿ ನನ್ನಂತಹ ಅಟೋ ಮಾಲಕ ಚಾಲಕರೂ ಬದುಕಬೇಕು. ಈ ನಿಟ್ಟಿನಲ್ಲಿ ಜೊತೆಯಲ್ಲೇ ಅಟೋಗಳಿಗೆ ಉಚಿತ ಇಂಧನ / ಗ್ಯಾಸ್ ಒದಗಿಸುವ ಕೃಪೆಯನ್ನು ಸರಕಾರ ಮಾಡಬೇಕು. ಒಂದು ಉಚಿತ ಕೊಡುಗೆಯನ್ನು ಜಾರಿಗೊಳಿಸುವಲ್ಲಿ ಅದರ ಸಾಧಕ ಬಾಧಕಗಳು, ಬಡವರ ಬದುಕು ಬರ್ದಾದ್ ಆಗಬಾರದೆಂಬ ನಿಟ್ಟಿನಲ್ಲಿ ನಿಗಾವಹಿಸುವ ಆವಶ್ಯಕತೆ ಖಂಡಿತ ಇದೆ. ಈಗ ಆಗಿರುವ ಹಾನಿಯಿಂದ ಅಟೋ ಚಾಲಕರ ಬದುಕು ನಾಶದತ್ತ ಜಾರಿದೆ. ವಿನಾಶದಂಚಿನಲ್ಲಿ ತೆರೆದುಕೊಂಡಿದೆ. 700 – 900 ಬಾಡಿಗೆ ದಿನವಹಿ ಬರುತ್ತಿತ್ತು. ಈವಾಗ ಕೇವಲ 200 ಸಂಪಾದನೆಯಾಗುತ್ತಿದ್ದು, ಇದರಿಂದಾಗಿ ಜೀವನ ನಿರ್ವಹಣೆ ಅಸಾಧ್ಯವಾಗಿದೆ. ಆದುದರಿಂದ ಈ ಬಗ್ಗೆ ಸರಕಾರ ಮಂತ್ರಿಮಂಡಲ ಹಾಗೂ ಅಧಿಕಾರಿಗಳು ಒಟ್ಟಾಗಿ ಸಭೆ ನಡೆಸಿ ಯುಕ್ತ ನಿರ್ಣಯವನ್ನು ತೆಗೆದುಕೊಳ್ಳುವಂತೆ ಮನವರಿಕೆ ಮಾಡಿಕೊಡುವಂತೆ ಸ್ಪೀಕರ್ ಖಾದರ್‌ರವರಿಗೆ ಸಲ್ಲಿಸಿರುವ ಮನವಿಯಲ್ಲಿ ಕೆ.ಎಂ.ಸುಲೈಮಾನ್‌ರವರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here