*ವಾರದಲ್ಲಿ ಮೂರು ದಿನ ದೈಹಿಕ ಶಿಕ್ಷಣ ಶಿಕ್ಷಕರ ನಿಯೋಜನೆ
ಕಡಬ: ದೈಹಿಕ ಶಿಕ್ಷಣ ಶಿಕ್ಷಕರ ವರ್ಗಾವಣೆ ವಿರೋಧಿಸಿ ಮಕ್ಕಳನ್ನು ಶಾಲೆಗೆ ಕಳುಹಿಸದೇ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಬೈಲು ಬಿಳಿನೆಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅವರು ಸೋಮವಾರ ಭೇಟಿ ನೀಡಿ ಶಾಲೆಯಲ್ಲಿ ಸಭೆ ನಡೆಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರರವರನ್ನು ವರ್ಗಾವಣೆ ಮಾಡದಂತೆ ಸಭೆಯಲ್ಲಿದ್ದ ಪೋಷಕರು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಬಿಇಒ ಲೋಕೇಶ್, ವರ್ಗಾವಣೆಗೊಂಡ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಅವರನ್ನು ವಾರದ ಮೂರು ದಿನ ಇಲ್ಲಿಗೆ ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಮುಂದಿನ ವರ್ಷ 100ಕ್ಕಿಂತ ಅಧಿಕ ಮಕ್ಕಳ ದಾಖಲಾತಿ ನಡೆದಲ್ಲಿ ಮತ್ತೆ ಇಲ್ಲಿಗೆ ಖಾಯಂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಿಆರ್‌ಪಿ ಕುಮಾರ್, ಮುಖ್ಯ ಶಿಕ್ಷಕಿ ಶಾರದಾ, ಎಸ್‌ಡಿಎಂಸಿ ಅಧ್ಯಕ್ಷ ಯಶೋಧರ ಮತ್ತಿತರರು ಉಪಸ್ಥಿತರಿದ್ದರು. ಸೋಮವಾರವೂ ಮಕ್ಕಳು ಶಾಲೆಗೆ ಹಾಜರಾಗಿರಲಿಲ್ಲ.
ರಸ್ತೆ ತಡೆ ಹಿಂತೆಗೆತ: ಬಿಇಒ ಭೇಟಿ ಬಳಿಕ ಸಂಜೆ ಶಾಲೆಯಲ್ಲಿ ಪೋಷಕರು, ಊರವರು ಸಭೆ ನಡೆಸಿದರು. ಸಭೆಯಲ್ಲಿ ಬಿಇಒ ಅವರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿ, ಮಕ್ಕಳನ್ನು ಶಾಲೆಗೆ ಮತ್ತೆ ಕಳುಹಿಸುವುದಾಗಿ ಪೋಷಕರು ತೀರ್ಮಾನಿಸಿದರು. ದೈಹಿಕ ಶಿಕ್ಷಣ ಶಿಕ್ಷಕರನ್ನು ಇಲ್ಲಿಗೆ ಖಾಯಂ ಆಗಿ ಉಳಿಸಲು ನಮ್ಮ ಪ್ರಯತ್ನ ಮುಂದುವರಿಸೋಣ ಎಂಬ ನಿರ್ಧಾರಕ್ಕೆ ಬರಲಾಗಿದೆ. ಜೂ.27ರಂದು ನಡೆಸಲುದ್ದೇಶಿಸಿದ್ದ ರಸ್ತೆ ತಡೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ.