ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಾಡಪ್ರಭು ಕೆಂಪೇ ಗೌಡರ 514ನೇ ಜಯಂತಿ ಆಚರಣೆಯು ಜೂ.27ರಂದು ತಾಲೂಕು ಆಡಳಿತ ಸೌಧದಲ್ಲಿರುವ ತಹಶಿಲ್ದಾರ್ ಸಭಾಂಗಣದಲ್ಲಿ ನಡೆಯಿತು.
ಸಂಸ್ಮರಣಾ ಜ್ಯೋತಿ ಬೆಳಗಿಸಿ, ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ರಾಜದಾನಿ ಬೆಂಗಳೂರನ್ನು ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಂಪೇ ಗೌಡರವರು 14ನೇ ಶತಮಾನದಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಅವರ ದೂರ ದೃಷ್ಠಿಯ ಕಲ್ಪಣೆಗಳು ಮಹತ್ವವಾಗಿದ್ದು 21ನೇ ಶತಮಾನದಲ್ಲಿಯೂ ನೆನಪಿಸಿಕೊಳ್ಳಲಾಗುತ್ತಿದೆ. ಸುಂದರ ನಗರ ನಿರ್ಮಾಣ, ವ್ಯಾವಹಾರಿಕ ಕೇಂದ್ರಗಳ ನಿರ್ಮಾಣ, ವಿವಿಧ ಕಸುಬುಗಳಿಗೆ ಪೂರಕವಾಗಿ ಮಾರುಕಟ್ಟೆ ನಿರ್ಮಾಣ, ಕೃಷಿಕರಿಗೆ ಆವಶ್ಯಕವಾದ ಸೌಲಭ್ಯಗಳು, ಕೆರೆ ಉದ್ಯಾನವನ, ದೇವಸ್ಥಾನಗಳ ನಿರ್ಮಾಣ ಸುಮದರವಾಗಿ ನಿರ್ಮಿಸಿಕೊಟ್ಟು ಬೆಂಗಳೂರನ್ನು ವಿಶ್ವಕ್ಕೇ ಮಾದರಿ ನಗರವಾಗಿ ನಿರ್ಮಿಸಿಕೊಟ್ಟಿದ್ದರು. ಅಭಿವೃದ್ಧಿಯ ಹೆಸರಿನಲ್ಲಿ ಕೆರೆಗಳು ಮುಚ್ಚಿಹೋಗಿದೆ. ಉಳಿದ ಕೆರೆಗಳನ್ನು ಸಂರಕ್ಷಣೆ ಮಾಡಬೇಕು. ದೂರದೃಷ್ಠಿಯಲ್ಲಿ ನಗರದ ಅಭಿವೃದ್ಧಿಗೆ ನಾವೂ ಕೈಜೋಡಿಸಬೇಕು. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗ ಕೊಂಡಯ್ಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸಂಸ್ಕರಣಾ ಉಪನ್ಯಾಸ ನೀಡಿದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಶ್ರೀಧರ ಗೌಡ ಪಾಣತ್ತಿಲ ಮಾತನಾಡಿ, ಹಿಂದಿನ ಬೇರುಗಳ ಸಾಧನೆಗಳು ಇತಿಹಾಸಲ್ಲಿ ಅಡಗಿದೆ. ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆಯ ಮೂಲಕ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸುವ ಮೂಲಕ ಗೌರವ ನೀಡಬೇಕು. ಮಹಾನ್ ವ್ಯಕ್ತಿಗಳ ಮರಣಾ ನಂತರ ಅವರನ್ನು ಕೆಲವೇ ಸಮುದಾಯಕ್ಕೆ ನಿರ್ದಿಷ್ಟಗೊಳಿಸಿರುವುದು ಸಂಕುಚಿತ ಸಾಮಾಜಿಕ ಬದುಕಿಗೆ ಕಾರಣವಾಗಿದೆ. ಕೆಂಪೇ ಗೌಡರವರು ಬೆಂಗಳೂರಿನಲ್ಲಿ ಸುಸಜ್ಜಿತ ನಗರ, ಉತ್ತಮ ರಸ್ತೆ, ಸಾಲು ಮರಗಳು, ವ್ಯಾಪಾರಕ್ಕೆ ಆವಶ್ಯಕವಾಗಿ ವೈಜ್ಞಾನಿಕ ರೀತಿಯಲ್ಲಿ ನಗರ ನಿರ್ಮಾಣ, ಕುಡಿಯುವ ನೀರಿಗೆ ಕೆರೆಗಳ ನಿರ್ಮಾಣ ಮಾಡಿದ್ದರು. ಅವುಗಳು ಇಂದು ಜೀರ್ಣಾವಸ್ಥೆಯಲ್ಲಿದೆ. ಅವುಗಳ ರಕ್ಷಣೆಯಾಗಬೇಕು. ಕೆರೆಗಳನ್ನು ಮುಚ್ಚಿ ಬಸ್ ನಿಲ್ದಾಣ, ಕ್ರೀಡಾಂಗಣ ನಿರ್ಮಾಣಗೊಂಡಿದೆ. ಸ್ವಾರ್ಥಕ್ಕಾಗಿ ಬಲಿಕೊಡಲಾಗಿದೆ. ಅವರ ದೂರದೃಷ್ಠಿಯನ್ನು ನಿರ್ಲಕ್ಷಿಸಿರುವುದರಿಂದ ಬೆಂಗಳೂರಿನಲ್ಲಿ ನೆರೆ ಬರುವಂತಾಗಿದೆ ಎಂದ ಅವರು ಕೆಂಪೇ ಗೌಡರ ಚಿಂತನೆಗಳು ಇಂದಿಗೂ ಪ್ರಸ್ತುತ. ಅದು ಸಾರ್ವಕಾಲಿಕವಾದುದು. ನಮ್ಮ ಬದುಕಿಗೆ ಆದರ್ಶಪ್ರಾಯವಾದುದು. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೆಂಪೇ ಗೌಡರ ಜಯಂತಿ ಆಚರಣೆಯ ಮೂಲಕ ಅವರ ಆದರ್ಶವನ್ನು ತಿಳಿಸಿಕೊಡುವ ಕಾರ್ಯವಾಗುತ್ತಿದೆ. ಅವರ ಕಲ್ಪಣೆಯ ನಗರ, ಅವರ ದೂರದೃಷ್ಟಿ ಯ ಚಿಂತನೆಗಳನ್ನು ಇಂದಿನ ಜನತೆ ಮನಗಾಣುವಂತಾಗಿದೆ. ಬೆಂಗಳೂರಿನ ನಿರ್ಮಾತೃವಾಗಿರುವ ಕೆಂಪೇ ಗೌಡರ 108 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ, ನಾಡಿನ ಮೂಲೆ ಮೂಲೆಗಳಿಂದ ಮೃತ್ತಿಕೆ ಸಂಗ್ರಹಿಸಿ ಥೀಮ್ ಪಾರ್ಕ್ ನಿರ್ಮಿಸಲಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅವರ ಹೆಸರನ್ನು ಶಾಶ್ವತವಾಗಿಡುವ ಕಾರ್ಯಗಳು ಕಳೆದ ಸರಕಾರದ ಆವಧಿಯಲ್ಲಿ ನಡೆದಿದೆ. ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಪರಿವರ್ತನೆಗೆ ಅನುಗಣವಾಗಿ ನಾವು ಕಾರಣರಾಗಬೇಕು ಎಂದರು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಮಾತನಾಡಿ, ಕೆಂಪೇ ಗೌಡರವರು ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಎಲ್ಲಾ ಸಮುದಾಯದ ಏಳಿಗೆ ಬಯಸಿದವರು. ಎಲ್ಲಾ ಕುಲ ಕಸುಬಿನವರಿಗೆ ಪೂರಕವಾಗಿ ಮಾರುಕಟ್ಟೆ ಒದಗಿಸಿದವರು. ಅವರ ಕನಸುಗಳು ಇಂದಿಗೂ ಪ್ರಸ್ತುತ. ಇಂದಿನ ಸಿಲಿಕಾನ್ ಸಿಟಿಯ ಕನಸನ್ನು ಕೇಂಪೇ ಗೌಡರವರು ಅಂದೇ ಕಂಡಿದ್ದರು. ಅವರ ಜನ್ಮ ದಿನಾಚರಣೆಯನ್ನು ಎಲ್ಲಾ ಸಮುದಾಯದವರೂ ಆಚರಿಸುವಂತಾಗಲಿ ಎಂದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶಿಲ್ದಾರ್ ಶಿವಶಂಕರ್, ಕಾರ್ಯದರ್ಶಿಯಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಇ., ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಗೌಡ ಕಣಜಾಲು, ಒಕ್ಕಲಿಗ ಗೌಡ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಎ.ವಿ ನಾರಾಯಣ, ದಯಾನಂದ, ರವಿ ಮುಂಗ್ಲಿಮನೆ, ಗೌರಿ ಬನ್ನೂರು, ಪದ್ಮಯ್ಯ ಗೌಡ, ಸೇರಿದಂತೆ ಒಕ್ಕಲಿಗ ಗೌಡ ಸೇವಾ ಸಮಾಜದ ಪದಾಧಿಕಾರಿಗಳು, ಸದಸ್ಯರು ಹಾಗೂ ಇಲಾಖಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಲೂಕು ಕಚೇರಿಯ ದಯಾನಂದ ಸ್ವಾಗತಿಸಿದರು. ಸುಂದರ ಗೌಡ, ಮಹೇಶ್ ಕುಮಾರ್, ಚೆನ್ನಪ್ಪ ಗೌಡ, ಲೋಕೇಶ್, ಕೃಷ್ಣ, ಚಂದ್ರಶೇಖರ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಉಪತಹಶೀಲ್ದಾರ್ ಸುಲೋಚನಾ ಪಿ.ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.