ನರೇಂದ್ರ ಪ.ಪೂ. ಕಾಲೇಜಿನಲ್ಲಿ ಗೀತಾ ಜ್ಞಾನ ಯಜ್ಞ ಪ್ರಾರಂಭೋತ್ಸವ

0

ಪುತ್ತೂರು: ಭಗವದ್ಗೀತೆಯಲ್ಲಿ ಭಕ್ತಿ, ಕರ್ಮ, ಜ್ಞಾನ, ಯೋಗ ಸಿದ್ಧಾಂತ ಅಡಕವಾಗಿದೆ. ಜಗತ್ತಿನಲ್ಲಿ ಜೀವನ ವೌಲ್ಯ ತೋರಿಸಿದ ಗ್ರಂಥ ಇದಾಗಿದ್ದು, ಇದರ ಅಧ್ಯಯನ ಮಾಡುವುದರಿಂದ ಜ್ಞಾನವು ಹೆಚ್ಚಾಗುತ್ತದೆ. ಬ್ರಹ್ಮಾಂಡದ ರಹಸ್ಯವನ್ನು ನಾವು ಕಾಣಲಾಗಲಿಲ್ಲ. ಆದರೂ ಅಗೋಚರವಾದ ಯಾವುದೋ ಶಕ್ತಿ ಇದೆ ಎಂಬ ಅರಿವು ನಮಗಿದೆ. ಸತ್ಯದ ಹುಡುಕಾಟ, ಶೋಧನೆ ಭಗವದ್ಗೀತೆಯಲ್ಲಿದೆ. ಜ್ಞಾನಕ್ಕಿಂತ ಮಿಗಿಲಾದ ಪರಿಶುದ್ಧವಾದ ವಸ್ತು ಈ ಪ್ರಪಂಚದಲ್ಲಿ ಬೇರೆ ಇಲ್ಲ. ಅಂತರಂಗ ಬಹಿರಂಗ ಶುದ್ಧಗೊಳಿಸುವ ಭಗವದ್ಗೀತೆಯನ್ನು ಓದುವ ಪರಿಪಾಠವನ್ನು ಬೆಳೆಸಿಕೊಳ್ಳಿ. ಅದು ಅರ್ಥವನ್ನು ತನ್ನಿಂದ ತಾನೇ ಕಲಿಸುತ್ತದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತದ ಕುಟುಂಬ ಪ್ರಬೋಧನ್ ಸಹಸಂಯೋಜಕರಾದ ಮತ್ತು ಗೀತಾ ಜ್ಞಾನ ಯಜ್ಞ ಇದರ ಸಂಪನ್ಮೂಲ ವ್ಯಕ್ತಿಗಳಾದ ಸುಬ್ರಾಯ ನಂದೋಡಿ ಹೇಳಿದರು.

ನರೇಂದ್ರ ಪ.ಪೂ. ಕಾಲೇಜಿನಲ್ಲಿ ಸಂಸ್ಕಾರ ಭಾರತಿಯ ವತಿಯಿಂದ ನಡೆದ ಭಗವದ್ಗೀತೆಯ ಮಹತ್ವ – ಗೀತಾ ಜ್ಞಾನ ಯಜ್ಞ ಪ್ರಾರಂಭೋತ್ಸವ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಕೆಲವು ಶ್ಲೋಕಗಳ ಅರ್ಥವನ್ನು ವಿವರಿಸಿದರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ‍್ಯದರ್ಶಿ ರೂಪಲೇಖ ಮಾತನಾಡುತ್ತಾ, ಜೀವನದ ಏರಿಳಿತಗಳ ನಡುವೆ ಸಮಚಿತ್ತವನ್ನು ಹೊಂದಿರುವುದು ಮತ್ತು ವೈಫಲ್ಯದಿಂದ ಮುಳುಗದೆ ಅಥವಾ ಯಶಸ್ಸಿನಿಂದ ಒಯ್ಯಲ್ಪಡದೆ ಧೈರ್ಯ, ಪರಿಶ್ರಮ, ಘನತೆ ಮತ್ತು ನಮ್ರತೆಯಿಂದ ಜೀವನವನ್ನು ಎದುರಿಸುವ ಮಾರ್ಗವನ್ನು ಈ ಭಗವದ್ಗೀತೆ ನೀಡುತ್ತದೆ ಎಂದು ಹೇಳಿದರು. ವೇದಿಕೆಯಲ್ಲಿ ಗೀತಾ ಜ್ಞಾನ ಯಜ್ಞದ ಕಾರ‍್ಯಕರ್ತ ಸುಧಾ ಹೆಬ್ಬಾರ್ ಉಪಸ್ಥಿತರಿದ್ದರು.

ಸಂಸ್ಕಾರ ಭಾರತಿಯ ಸದಸ್ಯ ಪ್ರೀತಿಕಲಾ ಸಂಸ್ಕಾರ ಭಾರತಿಯ ಆಶಯ ಗೀತೆಯನ್ನು ಹಾಡಿದರು. ಸಂಸ್ಕಾರ ಭಾರತಿಯ ಪದಾಧಿಕಾರಿಗಳು, ಗೀತಾ ಜ್ಞಾನ ಯಜ್ಞ ದ ಕಾರ‍್ಯಕರ್ತರು ಈ ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ‍್ಯಕ್ರಮದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಭೂಮಿಕಾ ಸ್ವಾಗತಿಸಿ , ವಂದಿಸಿದರು.

LEAVE A REPLY

Please enter your comment!
Please enter your name here