ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಪ್ರಥಮ ಮಳೆಗಾಲದ ಅಧಿವೇಶನವು ಜೂನ್ 27ರಂದು ಶ್ರೀ ಗುರು ಸುಧೀಂದ್ರ ಕಲಾಮಂದಿರದಲ್ಲಿ ನಡೆಯಿತು. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೂಡಿಸುವ ನಿಟ್ಟಿನಲ್ಲಿ ಮಹತ್ವವಾದ ಕಾರ್ಯಕ್ರಮ ಇದಾಗಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ಪ್ರಜಾಪ್ರಭುತ್ವ ಮಾದರಿಯಲಿ ನಡೆದ ಅಧಿವೇಶನದಲ್ಲಿ 10ನೇ ತರಗತಿಯ ಭಾಮತಿ ಉಪಾಧ್ಯಾಯ ಸಭಾಧ್ಯಕ್ಷರಾಗಿ ಹಾಗೂ 10ನೇ ತರಗತಿಯ ಪ್ರತೀಕ್ ಪಡಿಯಾರ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ 10ನೇ ತರಗತಿಯ ಮೈನಾಶ್ರೀ ತನ್ನ ಪ್ರಣಾಳಿಕೆಯನ್ನು ಮಂಡಿಸುತ್ತಾ ಶಾಲಾ ವಿದ್ಯಾರ್ಥಿಗಳ ಹುಟ್ಟು ಹಬ್ಬಕ್ಕೆ ಈ ಮೊದಲು ನೀಡುತ್ತಿದ್ದ ಚಾಕಲೇಟಿನ ಬ್ರಾಂಡನ್ನು ಬದಲಾಯಿಸುವ ಪ್ರಸ್ತಾವನೆಯನ್ನು ಮುಂದಿಟ್ಟರು. ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ಈ ವಿಚಾರವಾಗಿ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ರಾಷ್ಟ್ರಪತಿಗಳಿಂದ ಅಂಗೀಕಾರಗೊಂಡಿತು. ವಿರೋಧ ಪಕ್ಷದ ನಾಯಕಿ 10ನೇ ತರಗತಿ ಪೂರ್ವಿ ಪ್ರಭು ಆಡಳಿತ ಪಕ್ಷದ ಕುಂದು ಕೊರತೆಗಳನ್ನು ಪ್ರಶ್ನಿಸುವುದರ ಮೂಲಕ ಆಡಳಿತ ಪಕ್ಷದ ಗಮನ ಸೆಳೆದರು. ಶಾಲಾ ಸರ್ಕಾರದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾದ ವಿವಾದಗಳೊಂದಿಗೆ ಸಂಬಂಧಿತವಾಗಿ ನಡೆದ ಅಧಿವೇಶನವು ಯಶಸ್ವಿಯಾಗಿ ಸಂಪನ್ನಗೊಂಡಿತು. ನಂತರ ಮಾತನಾಡಿದ ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ಸಂಸತ್ತಿನ ಆರೋಗ್ಯಕರ ಚರ್ಚೆಯನ್ನು ಸ್ಥಾಪಿಸಿದರು ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಶಾಲಾ ಸಂಸತ್ತು ಸಹಕಾರಿಯಾಗಲಿದೆ ಎಂದು ತಿಳಿಸುತ್ತಾ ಅಧಿವೇಶನದ ಯಶಸ್ವಿಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು. ಸಂಸ್ಥೆಯ ಸಮಾಜ ವಿಜ್ಞಾನ ಶಿಕ್ಷಕಿ ಶಶಿಕಲಾ ಆಡಳಿತ ಪಕ್ಷದವರಿಗೆ ಹಾಗೂ ವಿರೋಧ ಪಕ್ಷದವರಿಗೆ ಸೂಕ್ತ ಸಲಹೆ ಸೂಚನೆಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.