ಸಂಸಾರದಲ್ಲಿ ಪರಸ್ಪರ ಸೋಲುವುದು ಅದು ಸೋಲಲ್ಲ, ಗೆಲುವು – ಭಾಸ್ಕರ ಕೋಡಿಂಬಾಳ
ಪುತ್ತೂರು: ಸಂಸಾರ ಎನ್ನುವುದು ಅದು ತಂತಿಯ ಮೇಲೆ ನಡೆದಂತೆ. ಸ್ವಲ್ಪ ತಪ್ಪಿದರೂ ಕೆಳಗೆ ಬಿದ್ದು ಏಟಾಗುವುದು ಖಂಡಿತಾ. ಹಾಗೆಯೇ ಸಂಸಾರದಲ್ಲಿ ಗಂಡ-ಹೆಂಡತಿ ಪರಸ್ಪರ ಸೋಲುವುದು ಅದು ಸೋಲು ಎಂದು ತಿಳಿಯದೆ, ಸುಂದರ ದಾಂಪತ್ಯ ಜೀವನದ ಗೆಲುವು ಎಂದು ತಿಳಿಯಬೇಕು ಎಂದು ನ್ಯಾಯವಾದಿ, ವಲಯ ಐದರ ನಿಯೋಜಿತ ವಲಯ ಸೇನಾನಿ ಭಾಸ್ಕರ ಗೌಡ ಕೋಡಿಂಬಾಳರವರು ಹೇಳಿದರು.
ಅಂತರ್ ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ವತಿಯಿಂದ ಜೂ.29 ರಂದು ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಕಾರ್ಯದರ್ಶಿ(2022-23) ಸುರೇಶ್ ಪಿ.ರವರ ಆತಿಥ್ಯದಲ್ಲಿ ಸಂಪ್ಯ-ಆರ್ಯಾಪುವಿನಲ್ಲಿ ಜರುಗಿದ ಕುಟುಂಬ ಸಮ್ಮಿಲನ, ಪಿ.ಎಚ್.ಎಫ್ ಪದವಿ ಪ್ರದಾನ, ಶ್ರೀ ಅಮ್ಮನವರ ದೇವಸ್ಥಾನ ಅರ್ಚಕರಿಗೆ ಸನ್ಮಾನ ಮತ್ತು ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ದಂಪತಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ‘ತುಳುನಾಡಿನಲ್ಲಿ ಕೂಡು ಕುಟುಂಬ’ದ ಬಗ್ಗೆ ಉಪನ್ಯಾಸ ನೀಡುತ್ತಾ ಮಾತನಾಡಿದರು. ಹಿಂದಿನ ಕೂಡು ಕುಟುಂಬದಲ್ಲಿ ಸ್ವಾರ್ಥವಿರಲಿಲ್ಲ. ಆ ಕುಟುಂಬದಲ್ಲಿ ಜ್ಞಾನದ ಆಳವಿತ್ತು. ಕುಟುಂಬವನ್ನು ಆದರಿಸುವ ಸಾಮರ್ಥ್ಯವಿತ್ತು. ಆದರೆ ಜನಸಂಖ್ಯೆ ಹೆಚ್ಚಾದಂತೆ ಕೂಡು ಕುಟುಂಬಗಳು ನಾಶವಾಗತೊಡಗಿತು, ವೃದ್ಧಾಶ್ರಮಗಳು ಹೆಚ್ಚಾಯಿತು, ವಿಚ್ಚೇದನ ಪ್ರಕರಣಗಳು ಹೆಚ್ಚಾದವು ಎಂದರು.
ರೋಟರಿಯಿಂದ ವ್ಯಕ್ತಿತ್ವ ವಿಕಸನ ವಾಗುತ್ತದೆ – ಎ.ಜೆ ರೈ:
ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜಗಜ್ಜೀವನ್ ದಾಸ್ ರೈಯವರು ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಎಂಬುವುದು ಸ್ನೇಹ ಹಾಗೂ ಒಡನಾಟದ ಉದ್ಧೇಶ ಹೊಂದಿದೆ. ರೋಟರಿ ಸಂಸ್ಥೆಯಲ್ಲಿ ಸೇರಿದವರಿಗೆ ವ್ಯಕ್ತಿತ್ವ ವಿಕಸನ ದ್ವಿಗುಣಗೊಳ್ಳುತ್ತದೆ ಮಾತ್ರವಲ್ಲ, ಸಮಾಜ ಸೇವೆಗೆ ಕೊಡುಗೆಯನ್ನು ನೀಡಬೇಕು ಎನ್ನುವ ಸಂಕಲ್ಪ ಮೂಡುತ್ತದೆ ಎಂದರು.
ಹೃದಯಾಂತರಾಳದಿಂದ ಏನನ್ನೂ ಕೊಟ್ಟರೂ ಅದು ಪ್ರೀತಿಗೆ ಸಮನಾಗುತ್ತದೆ-ವೆಂಕಟ್ರಮಣ ಗೌಡ:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಮಾತನಾಡಿ, ಕುಟುಂಬ ಎನ್ನುವುದು ತಾಯಿಯ ಆಶ್ರಯದಲ್ಲಿ ಬೆಳೆಯುವುದು. ವಜ್ರ, ವೈಡೂರ್ಯ ಕೊಟ್ಟರೆ ಮಾತ್ರ ಪ್ರೀತಿ ಅನ್ನುವುದು ತಪ್ಪು. ನಾವು ಹೃದಯಾಂತರಾಳದಿಂದ ಏನನ್ನೂ ಕೊಟ್ಟರೂ ಅದು ಪ್ರೀತಿಗೆ ಸಮನಾಗುತ್ತದೆ. ನನ್ನ ಅಧ್ಯಕ್ಷಾವಧಿಯಲ್ಲಿ ನಾವು ನಿರ್ವಹಿಸಿದಂತಹ ಕಾರ್ಯಕ್ರಮಗಳಿಗೆ ಪ್ಲಾಟಿನಂ ಪ್ರಶಸ್ತಿ ಬಂದದ್ದು ನನ್ನ ಕ್ಲಬ್ಬಿನ ಪ್ರತಿಯೋರ್ವರ ಶ್ರಮ ಕಾರಣವಾಗಿದೆ ಎಂದು ಹೇಳಿ ತನ್ನ ಅವಧಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಕಾರ್ಯದರ್ಶಿ ಸುರೇಶ್ ಪಿ.ರವರಿಗೆ ಕಿರು ಕಾಣಿಕೆ ನೀಡಿ ಕೃತಜ್ಞತೆ ಅರ್ಪಿಸಿದರು.
ರೋಟರಿಯಿಂದ ಪರಸ್ಪರ ಸಂಬಂಧ ಗಟ್ಟಿಗೊಳ್ಳುತ್ತದೆ-ಬೂಡಿಯಾರು ರಾಧಾಕೃಷ್ಣ ರೈ:
ರೋಟರಿ ಕ್ಲಬ್ ಪುತ್ತೂರು ಈಸ್ಟ್ ನಿಯೋಜಿತ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಎಂಬುದು ಸಮಾಜ ಸೇವೆ ಮಾತ್ರವಲ್ಲದೆ ಇದರ ಮುಖೇನ ನಮ್ಮಲ್ಲಿ ಸಂಬಂಧ ಗಟ್ಟಿಗೊಳ್ಳುತ್ತದೆ. ರೋಟರಿ ಸಂಸ್ಥೆಯು ತನ್ನ ಕಾರ್ಯವ್ಯಾಪ್ತಿಯನ್ನು ಹಳ್ಳಿ ಅಭಿವೃದ್ಧಿಯತ್ತ ವ್ಯಾಪಿಸಿದೆ. ಪ್ರತೀ ವರ್ಗದ ಜನರಿಗೆ ರೋಟರಿ ಸಹಾಯಹಸ್ತ ನೀಡುತ್ತಾ ಬಂದಿದೆ ಎಂದರು.
ರೋಟರಿ, ಲಯನ್ಸ್ ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿವೆ-ಅನಿತಾ ಹೇಮನಾಥ ಶೆಟ್ಟಿ:
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ರೋಟರಿ, ಲಯನ್ಸ್ ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿವೆ. ಬಡವರಿಗೆ, ಅಶಕ್ತರಿಗೆ, ನೊಂದವರಿಗೆ ಸಹೋದರ-ಸಹೋದರಿಯರಂತೆ ಭಾವಿಸಿಕೊಂಡು ನೆರವಿನ ಹಸ್ತ ಚಾಚುತ್ತಾ ಬಂದಿದೆ ಎಂದರು. ರೋಟರಿ ವಲಯ ಐದರ ವಲಯ ಸೇನಾನಿ ಸೆನೋರಿಟಾ ಆನಂದ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ನಿಯೋಜಿತ ಅಧ್ಯಕ್ಷ ಸುಂದರ ರೈ ಬಲ್ಕಾಡಿರವರು ಸಂದರ್ಭೋಚಿತವಾಗಿ ಮಾತನಾಡಿದರು.
ಮೌನ ಪ್ರಾರ್ಥನೆ:
ಇತ್ತೀಚೆಗೆ ನಿಧನರಾದ ರೋಟರಿ ಸದಸ್ಯರಾದ ಚಂದ್ರಶೇಖರ ಗೌಡ ಮುಂಗ್ಲಿಮನೆರವರ ಆತ್ಮಕ್ಕೆ ಭಗವಂತನಲ್ಲಿ ಚಿರಶಾಂತಿ ಕೋರುತ್ತಾ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸದಸ್ಯ ರಾಮಣ್ಣ ರೈ ಕೈಕಾರ ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷ ಜಯಂತ್ ಶೆಟ್ಟಿ ಕಂಬಳದಡ್ಡ ಸ್ವಾಗತಿಸಿದರು. ಆರ್ಯಾಪು ಗ್ರಾ.ಪಂ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್, ರೋಟರಿ ಸ್ವರ್ಣದ ಸುಭಾಶ್ ರೈ ಬೆಳ್ಳಿಪ್ಪಾಡಿ, ಮಹಾಬಲ ಗೌಡ, ಶಾಲಿನಿ ಸುರೇಶ್ ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಆರ್ಯಾಪು ಗ್ರಾ.ಪಂ ಸದಸ್ಯ ನೇಮಾಕ್ಷ ಸುವರ್ಣ ಅಮ್ಮುಂಜ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್, ಕೃಷ್ಣಪ್ಪ ಕೆ, ಎ ಎಸ್ ಐ ಚಂದ್ರ, ನಗರಸಭಾ ಮಾಜಿ ಸದಸ್ಯ ರಮೇಶ್ ರೈ, ಅಮ್ಮನವರ ದೇವಸ್ಥಾನದ ಅಧ್ಯಕ್ಷ ರವಿಚಂದ್ರ ಆಚಾರ್ಯ, ಲೋಕೇಶ್ ರೈ ಮೇರ್ಲ, ರಾಘವೇಂದ್ರ ರೈ ಮೇರ್ಲ, ಆರ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪೂರ್ಣಿಮಾ ರೈ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪುಷ್ಪಾವತಿ ಕಳವಾಜೆ, ಎವಿಜಿ ಇಂಗ್ಲೀಷ್ ಮಾಧ್ಯಮ ಶಾಲೆಯ ಸಂಚಾಲಕ ನಾರಾಯಣ ಎವಿಜಿ, ಕಂಬಳಕೋಣದ ಯಜಮಾನ ಪರಮೇಶ್ವರ ಸಾಲಿಯಾನ್ ನಡುಮನೆ, ದೇವದಾಸ್ ಕೃಷ್ಣಾಪುರ, ಲಯನ್ಸ್ ಕ್ಲಬ್ ಪುತ್ತೂರು ಮುತ್ತು ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಹಾಗೂ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಎಲ್ಲಾ ಪದಾಧಿಕಾರಿಗಳು, ಸೀತಾರಾಮ್ ಶೆಟ್ಟಿ ಕಂಬಳತಡ್ಡ, ನಾಗೇಶ್ ಸಂಪ್ಯ, ಆನಂದ ಅಮೀನ್ ಹೊಸಮನೆ, ಧನುಷ್ ಹೊಸಮನೆ , ಶ್ರೀನಿವಾಸ ಪುಚ್ಚೇರಿ, ತಮ್ಮಣ್ಣ ಶೆಟ್ಟಿ ಮೊಟ್ಟೆತ್ತಡ್ಕ, ಹರೀಶ ಮೊಟ್ಟೆತ್ತಡ್ಕ ಸಹಿತ ಹಲವಾರು ಗಣ್ಯರು ಹಾಜರಿದ್ದರು.
ಪಿ.ಎಚ್.ಎಫ್ ಪದವಿ ಗೌರವ
ರೋಟರಿ ಫೌಂಡೇಶನ್ ಗೆ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿಗೆ ಭಾಜನರಾದ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಹಾಗೂ ಕಾರ್ಯದರ್ಶಿ ಸುರೇಶ್ ಪಿ.ರವರಿಗೆ ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈಯವರು ಪ್ರಮಾಣಪತ್ರ ನೀಡಿ ಗೌರವಿಸಿದರು.
ನಾಲ್ವರಿಗೆ ಸನ್ಮಾನ
ಕಾರ್ಯಕ್ರಮದ ಆತಿಥ್ಯ ವಹಿಸಿದ ರೋಟರಿ ಸ್ವರ್ಣದ ಕಾರ್ಯದರ್ಶಿ ಸುರೇಶ್ ಪಿ.ರವರ ತಾಯಿ ಮುದರು, ಆರ್ಯಾಪು-ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಪ್ರಧಾನ ಅರ್ಚಕ ಸುನಿಲ್, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದ ಪೊಲೀಸ್ ಇಲಾಖೆಯ ಪ್ರವೀಣ್ ರೈ ಪಾಲ್ತಾಡಿ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸೇರ್ಪಡೆ/ನೂತನ ದಂಪತಿಗಳಿಗೆ ಅಭಿನಂದನೆ
ಈ ಸಂದರ್ಭದಲ್ಲಿ ಕ್ಲಬ್ ಗೆ ನೂತನ ಸದಸ್ಯರಾಗಿ ಗಣೇಶ್ ರವರಿಗೆ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈಯವರು ರೋಟರಿ ಪಿನ್ ತೊಡಿಸಿ ಸ್ವರ್ಣ ಕ್ಲಬ್ ಗೆ ಬರಮಾಡಿಕೊಂಡರು. ಅಲ್ಲದೆ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಹತ್ತು ಮಂದಿ ದಂಪತಿಯರನ್ನು ಗೌರವಿಸಲಾಯಿತು.