ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಸ್ವಿ ಹಸಿರು ದಿಬ್ಬಣದ ವತಿಯಿಂದ ಶಿಶು ಪೋಷಣಾ ಕೊಠಡಿ

0

ತಾಯಿಗೆ ಮಗುವಿನ ಆರೈಕೆ ಮಾಡಲು ಸಹಕಾರಿ-ಶಾಸಕಿ ಭಾಗೀರಥಿ ಮುರುಳ್ಯ

ಕಡಬ: ಕೇಶವ ರಾಮಕುಂಜ ಅವರು ತನ್ನ ಮಗಳು ಕಸ್ವಿಯ 2ನೇ ವರುಷದ ಹುಟ್ಟುಹಬ್ಬದ ಅಂಗವಾಗಿ ಕಸ್ವಿ ಹಸಿರು ದಿಬ್ಬಣ ಇದರ ವತಿಯಿಂದ ಸುಬ್ರಹ್ಮಣ್ಯದಲ್ಲಿ ದಾನಿಗಳ ನೆರವಿನಿಂದ ವಿಶೇಷ ಶಿಶು ಪೋಷಣಾ ಕೊಠಡಿ ತೆರೆದಿದ್ದು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು.


ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕಸ್ವಿ ಹಸಿರು ದಿಬ್ಬಣ ಇದರ ವತಿಯಿಂದ ಮಂಡೋವಿ ಮೋಟಾರ್ಸ್, ಪ್ರೊ ಬಾಲಕೃಷ್ಣ ಪೈ ಹಾಗೂ ಶರತ್ ಕುಮಾರ್ (ಎಸ್‌ಕೆ ಗ್ರೂಪ್ ಆಫ್ ಮಾರ್ಕೆಟಿಂಗ್ ) ಇವರ ನೆರವಿನಿಂದ ದೇವಸ್ಥಾನದಲ್ಲಿ ಈ ಶಿಶು ಪೋಷಣಾ ಕೊಠಡಿಯನ್ನು ತೆರೆಯಲಾಗಿದೆ. ಉದ್ಘಾಟಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು, ತಾಯಿ ತನ್ನ ಮಗುವನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾಳೆ. ಮಗು ಕೂಗುವಾಗ ತಾಯಿಗೆ ಮಗುವನ್ನು ಜನ ಸಂದಣಿಯಲ್ಲಿ ಆರೈಕೆ ಮಾಡಲು ಕಷ್ಟವಾಗಬಹುದು. ಅದಕ್ಕಾಗಿ ಇಲ್ಲಿ ತೆರೆಯಲಾದ ಶಿಶು ಪೋಷಣ ಕೊಠಡಿಯಲ್ಲಿ ತಾಯಿ ಮಗುವಿನೊಂದಿಗೆ ಅನ್ಯೋನ್ಯತೆಯಿಂದ ಮಗುವಿನ ಆರೈಕೆಗೆ ಸಹಕಾರಿಯಾಗಲಿದೆ ಹಾಗೂ ಇದು ಕೇವಲ ಕೊಠಡಿಯಾಗಿರದೆ ತಾಯಿ, ಮಗುವಿನ ಆರೈಕೆಯ ಮಾಹಿತಿ, ಪೌಷ್ಟಿಕ ಆಹಾರ ಹಾಗೂ ವಿವಿಧ ಲಸಿಕೆಯ ಮಾಹಿತಿಯನ್ನು ಒಳಗೊಂಡ ವಿನೂತನ ಕೊಠಡಿ ಇದಾಗಿದೆ ಎಂದರು.


ಕಸ್ವಿ ಹಸಿರು ದಿಬ್ಬಣದ ವತಿಯಿಂದ ನಿರಂತರ 22 ವಾರಗಳಿಂದ ನಡೆದು ಬರುತ್ತಿರುವ “ಉಚಿತ ಭಕ್ತಿ ಗೀತೆ” ತರಬೇತಿಯ ತರಬೇತುದಾರರಾದ ಲತಾ ಸರ್ವೇಶ್ವರ್, ಸುಬ್ರಹ್ಮಣ್ಯ ಅವರನ್ನು ಅವರ ನಿಸ್ವಾರ್ಥ ಸೇವೆಗೆ ಗೌರವಿಸಲಾಯಿತು.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ| ತ್ರಿಮೂರ್ತಿ, ಮಾಂಡೋವಿ ಮೋಟರ್ಸ್‌ನ ಡಿಜಿಎಂ ಸೇಲ್ಸ್ ಶಶಿಧರ್ ಕಾರಂತ್, ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೋ. ಬಾಲಕೃಷ್ಣ ಪೈ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೋಭಾ ಗಿರಿಧರ್, ವನಜಾ ವಿ. ಭಟ್, ಕಸ್ವಿ ಹಸಿರು ದಿಬ್ಬಣದ ಕಾರ್ಯದರ್ಶಿ ಬಾಬು ಗೌಡ ಪದ್ಮುಂಜ ಮತ್ತಿತರರು ಉಪಸ್ಥಿತರಿದ್ದರು. ಕಸ್ವಿ ಹಸಿರು ದಿಬ್ಬಣದ ಕೇಶವ ರಾಮಕುಂಜ ಸ್ವಾಗತಿಸಿ, ಹರ್ಷ ಆರ್ ಒಡ್ಯಮೆ ವಂದಿಸಿದರು. ಸಂತೋಷ್ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here