ಪುತ್ತಿಲರಿಗೆ ಠಕ್ಕರ್ ನಳಿನ್‌ರಿಗೆ ಕೊಕ್‌ ಅರುಣ್ ಶ್ಯಾಮ್ ಕಣಕ್ಕೆ`ಸಂಘ’ ಸಿದ್ಧತೆ-ರಾಷ್ಟ್ರ ರಾಜ ಕಾರಣದಲ್ಲಿ ಸ್ಫೋಟಕ ಸುದ್ದಿ

0

ಸಂತೋಷ್ ಕುಮಾರ್ ಶಾಂತಿನಗರ

ಪುತ್ತೂರು: ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿ ಸ್ಫೋಟಕ ಸುದ್ದಿಯೊಂದು ದ.ಕ.ಜಿಲ್ಲೆಯಲ್ಲಿ ಹರಿದಾಡುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಿ ಹೊಸಮುಖವನ್ನು ಕ್ಷೇತ್ರಕ್ಕೆ ಪರಿಚಯಿಸಲು ಸಂಘ ಪರಿವಾರ ಚಿಂತನೆ ನಡೆಸಿದೆ ಎಂಬುದು ಈ ಸುದ್ದಿಯ ಮೂಲವಾಗಿದೆ. ಮೂರನೇ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೊಕ್ ನೀಡಿ ಹೈಕೋರ್ಟಿನಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿರುವ ಪುತ್ತೂರು ಮೂಲದ ಅರುಣ್ ಶ್ಯಾಮ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ ಎಂಬುದು ಚರ್ಚೆಯ ವಿಷಯವಾಗಿದೆ. ಇದರ ಹಿಂದೆ ಬಹುದೊಡ್ಡ ಲಾಜಿಕ್ ಕೆಲಸ ಮಾಡುತ್ತಿದೆ. ಮೊನ್ನೆಯ ವಿಧಾನಸಭಾ ಚುನಾವಣೆಯ ವೇಳೆ ಪುತ್ತೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತರೂ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಪಾಠ ಕಲಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಮತ್ತು ರಾಜಕೀಯವಾಗಿ ಸದ್ದು ಮಾಡುತ್ತಿರುವ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಲೋಕಸಭಾ ಚುನಾವಣೆಯಲ್ಲಿಯೂ ತನ್ನ ಖದರು ತೋರಿಸಲು ಸಿದ್ಧರಾಗಿರುವುದಕ್ಕೆ ಠಕ್ಕರ್ ಕೊಡಲು ಸಂಘ ಪರಿವಾರದ ನಾಯಕರು ಚಿಂತನೆ ನಡೆಸಿದ್ದು ಅರುಣ್ ಕುಮಾರ್ ಪುತ್ತಿಲ ಬದಲು ಅರುಣ್ ಶ್ಯಾಮ್ ಹೆಸರು ಚಾಲ್ತಿಗೆ ಬರುವಂತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರುಣ್ ಶ್ಯಾಮ್ ಹೆಸರು ಜಿಲ್ಲೆಯಾದ್ಯಂತ ಪ್ರಚಲಿತಲ್ಲಿದೆ.


ಪ್ರಭಾವಿ ವಕೀಲರೂ ಆಗಿದ್ದು ಪ್ರಮುಖ ಮಠಗಳು ಸೇರಿದಂತೆ ಹಲವು ಪ್ರಭಾವಿ ನಾಯಕರ ವ್ಯಾಜ್ಯಗಳಲ್ಲಿ ವಾದಿಸಿರುವವರೂ ಆಗಿರುವ ಅರುಣ್ ಶ್ಯಾಮ್ ಅವರಿಗೆ ಆರ್.ಎಸ್.ಎಸ್. ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಂತಹ ಘಟಾನುಘಟಿ ನಾಯಕರ ಆಶೀರ್ವಾದ ಇದೆ. ಮಾಜಿ ಮುಖ್ಯಮಂತ್ರಿ ಬಿ.ಯಸ್.ಯಡಿಯೂರಪ್ಪ, ಪೇಜಾವರ ಮಠಾಧೀಶರು ಸಹಿತ ಹಲವರ ಕೃಪಾಶೀರ್ವಾದ ಇದೆ. ಅರುಣ್ ಕುಮಾರ್ ಪುತ್ತಿಲ ಅವರು ಹಿಂದುತ್ವ, ಕಾರ್ಯಕರ್ತರ ಬೆಂಬಲದ ಮೂಲಕ ಜನನಾಯಕರಾಗಿದ್ದಾರೆ. ಅದೇ ರೀತಿ ಅರುಣ್ ಶ್ಯಾಮ್ ಅವರು ಹಿಂದು ಸಂಘಟನೆಗಳ ಪರವಾಗಿ ಕಾನೂನಾತ್ಮಕ ಹೋರಾಟ ನಡೆಸುವವರು. ಹವ್ಯಕ ಸಮುದಾಯದ ಯುವ ನಾಯಕರೂ ಹೌದು. ಹಾಗಾಗಿ ಅರುಣ್ ಪುತ್ತಿಲ ಬದಲು ಅರುಣ್‌ಶ್ಯಾಮ್ ಅವರಿಗೆ ಅವಕಾಶ ನೀಡಿದರೆ ಹೇಗೆ ಎಂದು ಸಂಘದ ಮಾಸ್ಟರ್ ಮೈಂಡ್‌ಗಳು ಲೆಕ್ಕಾಚಾರ ಹಾಕಿದ್ದಾರೆ.

ಬುದ್ಧಿವಂತರ ಜಿಲ್ಲೆಯಿಂದ ಲೋಕಸಭೆ ಪ್ರವೇಶಿಸುವವರಿಗೆ ಭಾಷಾ ಜ್ಞಾನ ಅಗತ್ಯ. ಕಾನೂನಿನ ತಿಳುವಳಿಕೆಯೂ ಅವಶ್ಯಕ ಎಂದು ಬಲವಾದ ಮಾತುಗಳು ಹಲವು ಸಮಯಗಳಿಂದ ಕೇಳಿ ಬರುತ್ತಿದೆ. ಹಾಗಾಗಿ ತರ್ಕಬದ್ಧ ಮಾತು, ಕಾನೂನು ಜ್ಞಾನದ ಮೂಲಕ ಗಮನ ಸೆಳೆದಿರುವ ಅರುಣ್ ಶ್ಯಾಮ್ ಅವರಿಗೆ ಮಣೆ ಹಾಕಿದರೆ ಗೆಲುವು ಸುಲಭ ಆಗಬಹುದು ಎಂಬುದು ಹೊಸ ಲೆಕ್ಕಾಚಾರವಾಗಿದೆ. ಸುಪ್ರೀಂಕೋರ್ಟಿನಲ್ಲಿ ಕೇಂದ್ರ ಸರಕಾರದ ಪರವಾಗಿನ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಈಶ್ವರಮಂಗಲದ ಕೆ.ಯಂ.ನಟರಾಜ್ ಅವರ ಶಿಷ್ಯರಾಗಿರುವ ಅರುಣ್ ಶ್ಯಾಮ್ ಅವರನ್ನು ಕಣಕ್ಕಿಳಿಸಿದರೆ ನಿರಾಯಾಸವಾಗಿ ಗೆಲುವು ಸಾಧಿಸಬಹುದು, ಅರುಣ್ ಪುತ್ತಿಲರ ಓಟಕ್ಕೆ ಕಡಿವಾಣ ಹಾಕಬಹುದು ಎಂಬ ಲೆಕ್ಕಾಚಾರದ ಆಧಾರದಲ್ಲಿ ಅರುಣ್ ಶ್ಯಾಮ್ ಹೆಸರು ರೇಸ್ ಗೆ ಬಂದಿದೆ. ಲೋಕಸಭಾ ಚುನಾವಣೆಗೆ ದ.ಕ.ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ವಿಚಾರಕ್ಕೆ ಸಂಬಂಧಿಸಿ ವಕೀಲ ಅರುಣ್ ಶ್ಯಾಮ್ ಅವರನ್ನು ಸಂಪರ್ಕಿಸಿದಾಗ ಈ ವಿಚಾರದ ಬಗ್ಗೆ ಏನೂ ನನಗೆ ಗೊತ್ತಿಲ್ಲ. ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಇದುವರೆಗೆ ಯಾವುದನ್ನೂ ನಾನು ಕೇಳಿಲ್ಲ. ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವುದಷ್ಟೇ ನನ್ನ ಕೆಲಸ ಎಂದು ತಿಳಿಸಿದ್ದಾರೆ. ಅರುಣ್ ಶ್ಯಾಮ್ ಅವರಿಗೆ ಬೆಂಗಳೂರಿನ ಅಲಯನ್ಸ್ ಯೂನಿವರ್ಸಿಟಿಯ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿತ್ತು.


ಕಾನೂನಿನ ವಿಷಯದಲ್ಲಿ ಅಧ್ಯಯನ ಮಾಡಿ ಸಲ್ಲಿಸಿದ್ದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಅರುಣ್‌ಶ್ಯಾಮ್‌ರವರನ್ನು ಪುರಸ್ಕರಿಸಲಾಗಿತ್ತು. ಕರ್ನಾಟಕ ಕಾನೂನು ಆಯೋಗದ ಮುಖ್ಯಸ್ಥರಾದ ಕೇರಳ ಉಚ್ಛ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಸ್. ಆರ್. ಬನ್ನೂರಮಠ, ಸಚಿವ ಸಿ. ಎನ್. ಅಶ್ವತ್ ನಾರಾಯಣ್ ಅವರಂತಹ ಪ್ರಮುಖರ ಉಪಸ್ಥಿತಿಯಲ್ಲಿ ಅರುಣ್ ಶ್ಯಾಮ್ ಅವರಿಗೆ ಗೌರವ ಸಲ್ಲಿಸಲಾಗಿತ್ತು. ಮೂಲತ: ಕೊಳ್ನಾಡು ಗ್ರಾಮದ ಪಂಜಿಗದ್ದೆ ನಿವಾಸಿ ಆಗಿರುವ ಅರುಣ್ ಶ್ಯಾಮ್ ಅವರು 2006ರಲ್ಲಿ ಪುತ್ತೂರಿನ ಈಶ್ವರಮಂಗಲ ನಿವಾಸಿ ಕೆ.ಎಂ. ನಟರಾಜ್ ಅವರ ಜೊತೆ ಬೆಂಗಳೂರು ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. ಮುಂದೆ ಸ್ವಂತ ಕಚೇರಿ ಆರಂಭಿಸಿ ವಕೀಲಿ ವೃತ್ತಿ ಮುಂದುವರಿಸಿದ್ದರು. ವಿಟ್ಲ ಮಾದಕಟ್ಟೆ ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡ ಅರುಣ್‌ಶ್ಯಾಮ್ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಬಳಿಕ ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜಿನಲ್ಲಿ ಎಲ್‌ಎಲ್‌ಎಂ ಪದವಿ ಪಡೆದಿದ್ದರು. ಇದರ ಜೊತೆಗೆ ಶಿವಮೊಗ್ಗದಲ್ಲಿ ಎಂ.ಆರ್. ಸತ್ಯನಾರಾಯಣ ಅವರ ಜೊತೆ ವಕೀಲಿ ವೃತ್ತಿ ಮಾಡಿದ್ದರು. ಬಳಿಕ 2006ರಲ್ಲಿ ಬೆಂಗಳೂರಿನತ್ತ ಚಿತ್ತ ಹರಿಸಿದರು. ಬೆಂಗಳೂರಿನ ಅಲಯನ್ಸ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅರುಣ್‌ಶ್ಯಾಮ್ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂ. ಈಶ್ವರ ಭಟ್ ಮತ್ತು ಕುಸುಮ ಈಶ್ವರ ಭಟ್‌ರವರ ಪುತ್ರರಾದ ಅರುಣ್‌ಶ್ಯಾಮ್ ಪತ್ನಿ ಸುಷ್ಮಾ ಅರುಣ್ ಶ್ಯಾಮ್, ಮಕ್ಕಳು ಆದ್ಯಶ್ರೀ, ಅಮೃತಶ್ರೀ ಹಾಗೂ ಅದ್ವಿತಾಶ್ರೀಯವರೊಂದಿಗೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ.

LEAVE A REPLY

Please enter your comment!
Please enter your name here