ಬೆಟ್ಟಂಪಾಡಿ ಕಾಲೇಜಿನಲ್ಲಿ ನಾಲ್ಕನೇ ವರ್ಷದ ವನಪರ್ವ ಅಭಿಯಾನ

0


ವನಪರ್ವ ಅಭಿಯಾನ ಸಮಾಜಕ್ಕೆ ಮಾದರಿ: ಪ್ರಕಾಶ್ ರೈ ಬಿ ಟಿ

ವನಪರ್ವ ಅಭಿಯಾನ ಸಮಾಜಕ್ಕೆ ಮಾದರಿ. ಎನ್ಎಸ್ಎಸ್ ಸ್ವಯಂಸೇವಕರು ಗಿಡ ನೆಟ್ಟು ಸಂರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸುವುದು ಶ್ಲಾಘನೀಯ ಎಂದು ಪಾಣಾಜೆ ಶಾಖೆಯ ಅರಣ್ಯಾಧಿಕಾರಿ ಪ್ರಕಾಶ್ ರೈ ಬಿ ಟಿ ಇವರು ಹೇಳಿದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವಿಭಾಗ, ಪುತ್ತೂರು ಉಪವಿಭಾಗ, ಪುತ್ತೂರು ವಲಯ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಹಿಂದಿನ ದಿನಗಳಲ್ಲಿ ಭತ್ತ ಈ ಪ್ರದೇಶದ ಪ್ರಮುಖ ಬೆಳೆಯಾಗಿದ್ದರಿಂದ ನೀರಿನ ಇಂಗುವಿಕೆಯ ಮಟ್ಟವು ಅಧಿಕವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತದ ಬೆಳೆಯ ಬಗ್ಗೆ ಆಸಕ್ತಿ ತೋರದ ಕಾರಣ ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮರ-ಗಿಡಗಳು ನೀರು ಇಂಗಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಕಾರಣ, ನಾವು ಗಿಡ ನೆಡುವಿಕೆಯಲ್ಲಿ ಆಸಕ್ತಿಯನ್ನು ತೋರಬೇಕಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹರಿಪ್ರಸಾದ್ ಎಸ್ ಇವರು ವನಪರ್ವ ಅಭಿಯಾನ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ ಎಂದರು. ಕಾಲೇಜಿನಲ್ಲಿರುವ ‘ಜೀವಾಮೃತ’ ಔಷಧಿಸಸ್ಯಗಳ ತೋಟವು ಹಲವು ಗಿಡ ಮೂಲಿಕೆಗಳ ತಾಣವಾಗಿದ್ದು, ವಿದ್ಯಾರ್ಥಿಗಳಿಗೆ ಔಷಧಿ ಸಸ್ಯಗಳ ಪರಿಚಯವನ್ನು ಮಾಡಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಇವರು , ಭಾರತೀಯರು ಪರಂಪರಾಗತವಾಗಿ ಪ್ರಕೃತಿಯೊಂದಿಗೆ ಜೀವಿಸುತ್ತಾ ಬಂದಿರುವವರು. ವನಪರ್ವ ಅಭಿಯಾನದ ಹಿಂದಿನ ಆಶಯ ಬಹಳಷ್ಟು ಅರ್ಥಗರ್ಭಿತವಾಗಿದೆ. ಮಾನವನಿಗೆ ಬದುಕುವುದಕ್ಕಾಗಿ ಬೇಕಾದುದನ್ನೆಲ್ಲ ಪ್ರಕೃತಿಯೇ ನೀಡುತ್ತಿದೆ. ಪ್ರಕೃತಿ ನಮಗೆ ಬಹಳಷ್ಟು ಕೊಟ್ಟಿದೆ ಆದರೆ ನಾವೆಷ್ಟು ಪ್ರಕೃತಿಗೆ ಹಿಂತಿರುಗಿಸಿದ್ದೇವೆ ಎಂಬುದು ನಿಜವಾಗಿಯೂ ಪ್ರಶ್ನಾರ್ಥಕ. ಆದರಿಂದ ನಾವು ಕೂಡ ಪರಿಸರದತ್ತ ಕಾಳಜಿ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಟ್ಟಂಪಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಪವಿತ್ರ ಇವರು ಮಾತನಾಡಿ, ಇಂದಿನ ವಿದ್ಯಾರ್ಥಿ ಸಮುದಾಯ ಮುಂದಿನ ನಾಗರಿಕರಾಗಿರುವುದರಿಂದ ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಿರಬೇಕು. ಪ್ರಸ್ತುತ ದಿನಗಳಲ್ಲಿ ಅರಣ್ಯ ನಾಶವು ದೊಡ್ಡಮಟ್ಟದಲ್ಲಿ ನಡೆಯುತ್ತಿದ್ದು, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಂಡು ಅರಣ್ಯಗಳ ಪೋಷಣೆಯತ್ತ ಗಮನಹರಿಸಬೇಕಾಗಿದೆ ಎಂದರು.

ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕಾಲೇಜಿನ ಹೊರಾಂಗಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ನಾಲ್ಕನೇ ವರ್ಷದ ವನಪರ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅರಣ್ಯಾಧಿಕಾರಿಗಳು ಗಿಡಗಳನ್ನು ಹಸ್ತಾಂತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಘಟಕ ನಾಯಕಿ ಅನನ್ಯ ಎಸ್ ಇವರು ವನಪರ್ವ ಅಭಿಯಾನದ ಬಗ್ಗೆ ಸಂಕ್ಷಿಪ್ತ ವರದಿಯನ್ನು ವಾಚಿಸಿದರು.
ವನಪರ್ವ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅಂತಿಮ ಬಿಕಾಂ ವಿದ್ಯಾರ್ಥಿ ಸಾರ್ಥಕ್ ಟಿ ಇವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾಣಾಜೆ ಗಸ್ತು ಅರಣ್ಯಪಾಲಕ ಲಿಂಗರಾಜು ಹಾಗೂ ಉಮೇಶ್ ಆರ್ ಜೆ ,ಅರಣ್ಯ ಸಂರಕ್ಷಕ ದೇವಪ್ಪ, ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ.ಕಾಂತೇಶ್ ಎಸ್. ಗ್ರಂಥ ಪಾಲಕರಾದ ರಾಮ ಕೆ, ಇತಿಹಾಸ ಉಪನ್ಯಾಕ ಅಬ್ದುಲ್ ರಹೀಂ ಹಾಗೂ ನೂರಕ್ಕೂ ಅಧಿಕ ಸ್ವಯಂಸೇವಕರು ಪಾಲ್ಗೊಂಡಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಹರಿಪ್ರಸಾದ್ ಎಸ್ ಇವರು ಸ್ವಾಗತಿಸಿದರು. ಸ್ವಯಂಸೇವಕಿ ವಿದ್ಯಾಶ್ರೀ ಡಿ ವಂದನಾರ್ಪಣೆಗೈದರು. ಆದರ್ಶ್ ಎನ್ ಇವರು ನಿರೂಪಿಸಿದರು.

LEAVE A REPLY

Please enter your comment!
Please enter your name here