ಪುತ್ತೂರು: ಮುಂದಿನ ಕೆಲವು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವ ಇರುವ ಬಗ್ಗೆ ಹವಾಮಾನ ಇಲಾಖೆ ಸೂಚನೆಯನ್ನು ನೀಡಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟೆಚ್ಚರದಿಂದ ಇರುವಂತೆ ಶಾಸಕರಾದ ಅಶೋಕ್ ರೈ ಸೂಚನೆಯನ್ನು ನೀಡಿದ್ದಾರೆ.
ಮಳೆ ಈ ಬಾರಿ ತಡವಾಗಿ ಆರಂಭಗೊಂಡಿದ್ದರೂ ಜುಲೈ ಪ್ರಾರಂಭದಲ್ಲೇ ಹೆಚ್ಚಿನ ಮಳೆಯಾಗುತ್ತಿದೆ. ಮುಂದಿನ ಒಂದು ವಾರಗಳ ಕಾಲ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಯಾವುದೇ ಅನಾಹುತಗಳು ಸಂಭವಿಸುವ ಸಾಧ್ಯತೆ ಇದ್ದು ಅಧಿಕಾರಿಗಳು ದಿನದ 24 ಗಂಟೆಯೂ ಸದಾ ಎಚ್ಚರದಿಂದ ಇರಬೇಕು ಎಂದು ಶಾಸಕರು ಸೂಚನೆಯನ್ನು ನೀಡಿದ್ದಾರೆ. ಮರಗಳು ಬಿದ್ದು ಹಾನಿಯಾಗುವುದು, ವಿದ್ಯುತ್ ಅವಘಡ ಸೇರಿದಂತೆ ಯಾವುದೇ ಅನಾಹುತ ನಡೆದರೂ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಅನಾಹುತದಿಂದ ಯಾರೇ ಆಗಲಿ ಗಾಯಗೊಂಡರೆ ಅಂಥವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಯ ಚಿಕಿತ್ಸೆ ಕೊಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಮರ ಬಿದ್ದು ಅಥವ ಧರೆ ಜರಿದು ಮನೆಗಳಿಗೆ ಹಾನಿಯಾದರೆ ಆ ಮನೆಗಳಲ್ಲಿ ಕುಟುಂಬಗಳಿಗೆ ವಾಸ್ತವ್ಯ ಮಾಡಲು ಸಾಧ್ಯವಿಲ್ಲದೇ ಹೋದಲ್ಲಿ ಅಥವಾ ವಾಸ್ತವ್ಯವಾಗಲು ಅಪಾಯಕಾರಿ ಸ್ಥಳ ಎಂದು ಗೊತ್ತಾದಲ್ಲಿ ತಕ್ಷಣ ಅವರಿಗೆ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಬೇಕು. ಕುಡಿಯುವ ನೀರು, ವಿದ್ಯುತ್ ಸಮರ್ಪಕವಾಗಿರಬೇಕು. ನಗರಸಭಾ ವ್ಯಾಪ್ತಿಯಲ್ಲಿ ಎಚ್ಚರದಿಂದ ಕಾರ್ಯನಿರ್ವಹಿಸುವಂತೆಯೂ ನಗರಸಭಾ ಅದಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಪುತ್ತೂರು ಸಹಾಯಕ ಆಯುಕ್ತರು, ತಹಶೀಲ್ದಾರ್, ಕಂದಾಯ ನಿರೀಕ್ಷಕರು , ಅಗ್ನಿ ಶಾಮಕದಳ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸದಾ ಕಟ್ಟೆಚ್ಚರದಿಂದ ಇರುವಂತೆ ಶಾಸಕರು ಸೂಚನೆಯನ್ನು ನೀಡಿದ್ದಾರೆ.
ವಿಧಾನಸಭಾ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ನಾನು ಅಧಿವೇಶನದಲ್ಲಿ ಭಾಗವಹಿಸುತ್ತಿದ್ದು, ಕ್ಷೇತ್ರದ ಆಗುಹೋಗುಗಳ ಬಗ್ಗೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ಶಾಸಕರು ತಿಳಿಸಿದ್ದಾರೆ.
ತಡರಾತ್ರಿ ಕರೆ ಮಾಡಿದ ಶಾಸಕರು
ನಗರದ ಹೊರವಲಯದ ಸಿಂಹವನದಲ್ಲಿ ಭಾರೀ ಗಾತ್ರದ ಮರವೊಂದು ಗಾಳಿಗೆ ಉರುಳಿ ಬಿದ್ದಿದ್ದು ಮನೆಯೊಂದಕ್ಕೆ ಭಾಗಶಃ ಹಾನಿಯಾಗಿದೆ. ವಿಷಯ ತಿಳಿದ ಶಾಸಕರು ತಡರಾತ್ರಿ ಸಹಾಯಕ ಆಯುಕ್ತರಿಂದ ಮಾಹಿತಿ ಪಡೆದುಕೊಂಡಿದ್ದು ,ತಕ್ಷಣವೇ ಮರವನ್ನು ತೆರವುಗೊಳಿಸಿ ಮನೆಗೆ ಹಾನಿಯಾಗಿದ್ದಲ್ಲಿ ತಕ್ಷಣ ದುರಸ್ಥಿಗೆ ನೆರವು ನೀಡುವಂತೆಯೂ ಸೂಚನೆಯನ್ನು ನೀಡಿದ್ದಾರೆ. ಶಾಸಕರ ಸೂಚನೆಯ ಬಳಿಕ ತಡರಾತ್ರಿಯೇ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಮನೆಗೆ ಬಿದ್ದಿದ್ದ ಮರದ ಗೆಲ್ಲುಗಳನ್ನು ತೆರವು ಮಾಡಲಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಮರವನ್ನು ಬೆಳಿಗ್ಗೆ ಅರಣ್ಯ ಇಲಾಖಾ ಅಧಿಕಾರಿಗಳ ಜೊತೆಗೆ ಶಾಸಕ ಅಶೋಕ್ ರೈ ಅಭಿಮಾನಿ ಬಳಗದ ತಂಡದ ಸಹಕಾರದೊಂದಿಗೆ ಮರ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ.