ಕೊಯಿಲಾ ಫಾರಂ: ಪಾಳುಬಿದ್ದ ಭೂಮಿಯಲ್ಲಿ ಖಾಸಗಿಯವರಿಗೆ ಉದ್ಯಮಕ್ಕೆ ಅವಕಾಶ-ಪಶುಸಂಗೋಪನಾ ಸಚಿವರನ್ನು ಭೇಟಿಯಾದ ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು: ಪ್ರತ್ತೂರು ತಾಲ್ಲೂಕಿನ ಕೊಯಿಲಾ ಗ್ರಾಮದಲ್ಲಿ ಪಾಳು ಬಿದ್ದಿರುವ 680 ಎಕರೆ ಪಶು ಸಂಗೋಪನೆ ಇಲಾಖೆಗೆ ಸೇರಿದ ಜಾಗದಲ್ಲಿ ಪಿ.ಪಿ.ಪಿ. ಆಧಾರದ ಮೇಲೆ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ಆಧಾರದ ಮೇಲೆ ಪೌಲ್ಟ್ರಿಫಾರಂ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮತ್ತು ಹಸು ಸಾಕಾಣಿಕೆ ಮಾಡಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಕಳೆದ ಎರಡು ವಾರದ ಹಿಂದೆ ಪಶುಸಂಗೋಪನಾ ಸಚಿವರಿಗೆ ಶಾಸಕ ಅಶೋಕ್ ಕುಮಾರ್ ರೈ ಮನವಿ ನೀಡಿದ್ದು ಜು.3 ರಂದು ಅವರನ್ನು ಎರಡನೇ ಬಾರಿಗೆ ಖುದ್ದಾಗಿ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.

ಕೊಯಿಲಾ ಗ್ರಾಮದ 260 ಎಕರೆ ಜಾಗವನ್ನು ಈಗಾಗಲೇ ಪಶು ವೈದ್ಯಕೀಯ ಕಾಲೇಜಿಗೆ ಮೀಸಲಿಟ್ಟಿದ್ದು, ಇದೇ ಪರಿಸರದಲ್ಲಿ ಸುಮಾರು 680 ಎಕರೆ ಜಾಗವು ಪಶು ಸಂಗೋಪನೆ ಇಲಾಖೆಗೆ ಸೇರಿದ್ದು, ಯಾವುದೇ ಉಪಯೋಗಕ್ಕೆ ಬಾರದೇ ಪಾಳು ಬಿದ್ದಿರುತ್ತದೆ, ಈ 680 ಎಕರೆ ಜಾಗದಲ್ಲಿ ಪಿ.ಪಿ.ಪಿ, ಮಾದರಿಯಲ್ಲಿ ಪೌಲ್ಟ್ರಿ ಫಾರಂ, ಕುರಿ ಸಾಕಾಣಿಕೆ,ಹಂದಿ ಸಾಕಾಣಿಕೆ, ಮತ್ತು ಹಸು ಸಾಕಾಣಿಕೆ ಮಾಡಲು ಅನುಕೂಲವಾಗುವಂತೆ ತಾವುಗಳು ನೋಡಲ್ ಅಧಿಕಾರಿಯನ್ನು ನೇಮಿಸಿ, ಕೂಡಲೇ ಪ್ರಕ್ರಿಯೆ ಪ್ರಾರಂಭಿಸಿದಲ್ಲಿ ಗುತ್ತಿಗೆ ಆಧಾರದ ಮೇಲೆ ಪಡೆಯಲು ಹೆಚ್ಚಿನ ಖಾಸಗಿ ಸಂಸ್ಥೆಗಳು ಆಸಕ್ತರಾಗಿರುತ್ತಾರೆ. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಹಾಗೂ ಪಿ.ಪಿ.ಪಿ. ಮಾದರಿಯಿಂದ ಸರ್ಕಾರಕ್ಕೆ ಕಂದಾಯವು ಸಹ ಸಂಗ್ರಹಣೆಯಾಗುತ್ತದೆ. ಅಲ್ಲದೇ ಪಾಳು ಬಿದ್ದಿರುವ ಜಾಗವು ಸಹ ಉಪಯೋಗವಾಗುತ್ತದೆ ಎಂದು ಪಶುಸಂಗೋಪನೆ ಸಚಿವ ಕೆ ವೆಂಕಟೇಶ್ ಅವರಲ್ಲಿ ವಿವರಿಸಿದ್ದಾರೆ.
ಮಾತುಕತೆ ವೇಳೆ ಶಾಸಕರಿಗೆ ಸಚಿವರು ಸ್ಪಂದಿಸುವ ಭರವಸೆಯನ್ನು ನೀಡಿದ್ದಾರೆ.

ನೂರಾರು ಮಂದಿಗೆ ಉದ್ಯೋಗ
ಕೊಯಿಲಾ ಫಾರಂನಲ್ಲಿ ಪಾಳುಬಿದ್ದಿರುವ 680 ಎಕ್ರೆ ಜಾಗದಲ್ಲಿ ಖಾಸಗಿ ಸಂಸ್ಥೆಯವರು ಗುತ್ತಿಗೆ ಆಧಾರದಲ್ಲಿ ಉದ್ಯಮವನ್ನು ಆರಂಭ ಮಾಡಿದ್ದಲ್ಲಿ ನೂರಾರು ಮಂದಿಗೆ ಉದ್ಯೋಗವೂ ದೊರೆಯಲಿದೆ. ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಮಾಡಲಾಗುತ್ತಿದೆ. ಉದ್ಯಮದಿಂದ ಸರಕಾರಕ್ಕೆ ಆರ್ಥಿಕವಾಗಿ ಲಾಭವಾಗಲಿದ್ದು ಕೊಯಿಲಾ ಗ್ರಾಮವೂ ಇನ್ನೂ ಹೆಚ್ಚಿನ ಅಭಿವೃದ್ದಿ ಕಾಣಲಿದೆ ಎಂದು ಶಾಸಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here