ಪುತ್ತೂರು:ಪುತ್ತೂರು ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಮಹಾಸಭೆಯು ಮಾಯ್ ದೆ ದೇವುಸ್ ಸಭಾಂಗಣದಲ್ಲಿ ಜು.4ರಂದು ನಡೆಯಿತು.
ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಚಾಲಕ ಲಾರೆನ್ಸ್ ಮಸ್ಕರೇನ್ಹಸ್ ಮಕ್ಕಳು ನಮಗೆ ದೇವರು ನೀಡಿದ ವರಗಳು. ಈ ಮಕ್ಕಳನ್ನು ನಾವು ದೇವರ ಮಕ್ಕಳಂತೆ ಬೆಳೆಸಬೇಕಾದ್ದರಿಂದ ನಾವು ಜವಾಬ್ದಾರಿಯುತ ಪೋಷಕರಾಗಬೇಕು. ತಂತ್ರಜ್ಞಾನ ಮುಂದುವರಿದಂತೆ ಮಕ್ಕಳಲ್ಲಿ ಕೆಡುಕುಗಳು ಹೆಚ್ಚಾಗುತ್ತದೆ. ಆ ಕೆಡುಕುಗಳಿಂದ ನಮ್ಮ ಮಕ್ಕಳನ್ನು ಕಾಯಬೇಕು. ಬೆಲೆಬಾಳುವ ಸಂಪತ್ತನ್ನು ನಾವು ಹೇಗೆ ಜೋಪಾನ ಮಾಡುತ್ತೇವೆಯೋ, ಅತೀ ಕಾಳಜಿಯಿಂದ ಮಕ್ಕಳನ್ನು ಜೋಪಾನ ಮಾಡಬೇಕು. ನಮ್ಮ ಮನೆಗಳು ಪ್ರೀತಿಯನ್ನು ಉಣಿಸಬೇಕು. ಆಹಾರವನ್ನು ಕೊಟ್ಟು ಮಕ್ಕಳ ಹೊಟ್ಟೆ ತುಂಬಿಸಿದರೆ ಸಾಲದು ಅವರ ಹೃದಯವನ್ನು ಪ್ರೀತಿಯಿಂದ ತುಂಬಬೇಕು. ಮಕ್ಕಳಲ್ಲಿ ಭಯಭಕ್ತಿ ಬೆಳೆಸಬೇಕು. ಮಕ್ಕಳಿಗೆ ಕೇವಲ ಪಾಠಗಳನ್ನು ಕಲಿಸಿದರೆ ಸಾಕಾಗುವುದಿಲ್ಲ. ಜೀವನದ ಪಾಠಗಳನ್ನು, ಮಾನವೀಯತೆಯನ್ನು, ಸಮಾಜದಲ್ಲಿ ಬದುಕುವ ವಿಧಾನಗಳನ್ನು ಕಲಿಸಬೇಕು. ಮಕ್ಕಳ ಮನಸ್ಸಿನಲ್ಲಿ ದ್ವೇಷ ಬಿತ್ತದೆ, ಪ್ರೀತಿಯ ಭಾವನೆಯನ್ನು ಬಿತ್ತಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೊ ಮಾತನಾಡಿ ಹೆಣ್ಣು ಮಕ್ಕಳು ನಮ್ಮ ಕೈಯಲ್ಲಿರುವ ಕನ್ನಡಿಯ ಹಾಗೆ. ಕನ್ನಡಿಯು ಕೈಜಾರಿ ಹೋದರೆ ಹೇಗೆ ಒಡೆದು ಚೂರಾಗುವುದೋ, ಅದೇ ರೀತಿ ಮಕ್ಕಳನ್ನು ಕೂಡಾ ಅತ್ಯಂತ ಜೋಪಾನವಾಗಿ ನೋಡಿಕೊಳ್ಳಬೇಕು. ಅವರ ಬಗ್ಗೆ ಸ್ವಲ್ಪ ಕಡೆಗಣಿಸಿದರೂ ಅವರು ತಪ್ಪುದಾರಿ ಹಿಡಿಯುವ ಸಾಧ್ಯತೆಗಳಿವೆ. ಹೆತ್ತವರು ತಮ್ಮ ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಬೇಕು ಎಂದು ತಿಳಿಸಿ ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನದ ಹಾಗೂ ಹಾಜರಾತಿಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ, ಪೋಷಕರು ಗಮನದಲ್ಲಿಡಬೇಕಾದ ಕೆಲವು ಶಾಲಾ ನಿಯಮಗಳ ಬಗ್ಗೆ ಅವರಿಗೆ ತಿಳಿ ಹೇಳಿದರು.
2022-23ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಸಹ ಕಾರ್ಯದರ್ಶಿ ಅಪರ್ಣಾ ಮಾತನಾಡಿ ಮಕ್ಕಳು ಪರಿಮಳ ಬೀರುವ ಪುಷ್ಪಗಳು, ಈ ಪುಷ್ಪಗಳನ್ನು ಕಾಳಜಿಯಿಂದ ಕಾಪಾಡುವ ಕಾರ್ಯವನ್ನುಈ ಶಾಲೆಯು ಮಾಡುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು ಎಂದರು.
ಅಕಾಲಿಕ ಮರಣಕ್ಕೆ ತುತ್ತಾದ 2022-23ನೇ ಶೈಕ್ಷಣಿಕ ಸಾಲಿನ ಉಪಾಧ್ಯಕ್ಷರಾಗಿದ್ದ ದಿವಂಗತ ರಮೇಶ್ ಕೆ ವಿ ರಿಗೆ ಶ್ರದ್ಧಾಂಜಲಿಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.
ಪ್ರಸ್ತುತ ವರ್ಷದ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಮತ್ತು ಹೆಣ್ಮಕ್ಕಳ ಸುರಕ್ಷಾ ಸಮಿತಿ ಹಾಗೂ ತಾಯಂದಿರ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಶಾಲಾ ಶಿಕ್ಷಕಿ ಅನೀಶ ಡಿಸಿಲ್ವ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯ ಶೈಕ್ಷಣಿಕ ಚಟುವಟಿಕೆಗಳ ವರದಿಯನ್ನು ವಾಚಿಸಿದರು.
ಶಿಕ್ಷಕಿ ರೂಪ ಡಿಕೋಸ್ಟಾರ ಜಮೆ ಮತ್ತು ಖರ್ಚಿನ ವಿವರಗಳನ್ನು ಮಂಡಿಸಿದರು. ಶಾಲಾ ಶಿಕ್ಷಕಿ ಸುಷ್ಮಾ ಕ್ರಾಸ್ತಾರವರು ಸ್ವಾಗತಿಸಿ, ಶಿಕ್ಷಕಿ ಡೋರಿನ್ ವಿಲ್ಮಾ ಲೋಬೊ ವಂದಿಸಿದರು, ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಲೆನಿಟಾ ಪ್ರಿಯ ಮೊರಾಸ್ ಕಾರ್‍ಯಕ್ರಮವನ್ನು ನಿರೂಪಿಸಿದರು.