ಪುತ್ತೂರು: ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಲ್ಲಿ ಪರಾಜಿತರಾದ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಪುತ್ತಿಲ ಪರಿವಾರದ ಮೂಲಕ ಹೊಸ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲೇ ಬಿಜೆಪಿಯ ಪ್ರಮುಖರಿಂದ ಬಂದ ಕರೆಯಂತೆ 15 ದಿನಗಳ ಹಿಂದೆ ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು ಇದೀಗ ಅವರು ಜೊತೆಗಿದ್ದ ಪೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರುಣ್ ಕುಮಾರ್ ಪುತ್ತಿಲ ಅವರು ಪುತ್ತಿಲ ಪರಿವಾರದ ಮೂಲಕ ಕಾರ್ಯಕರ್ತರೊಂದಿಗೆ ಸಭೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೇ ಹಿಂದುತ್ವಕ್ಕಾಗಿ ಹೋರಾಟ ಮಾಡಿದವರನ್ನು ಭೇಟಿ ಮಾಡುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪುತ್ತಿಲ ಅವರ ಈ ನಡೆ ಬಿಜೆಪಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ತೊಂದರೆ ಆಗಬಹುದೆಂದು ಸಂಘಪರಿವಾರದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಪ್ರಮುಖರ ಕರೆಯಂತೆ ದೆಹಲಿಗೆ ತೆರಳಿ ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಈ ಸಂದರ್ಭ ಭಾಸ್ಕರ್ ಆಚಾರ್ ಇಂದಾರು, ಡಾ. ಸುರೇಶ್ ಪುತ್ತೂರಾಯ ಸಹಿತ ಇತರರು ಜೊತೆಗಿದ್ದರು.
15 ದಿನಗಳ ಹಿಂದಿನ ಪೊಟೋ:
ಸಂಘ ಪರಿವಾರದ ಪ್ರಮುಖರ ಕರೆಯಂತೆ ದೆಹಲಿಗೆ ತೆರಳಿದ್ದೆವು. ಅಲ್ಲಿ ಬಿ.ಎಲ್.ಸಂತೋಷ್ ಅವರು ನಮ್ಮೊಂದಿಗೆ ಮಾತನಾಡಿದ್ದಾರೆ. ಈ ಸಂದರ್ಭದ ಪೊಟೋ ಈಗ ವೈರಲ್ ಆಗಿರುವುದು. ಅದು ಸುಮಾರು 15 ದಿನಗಳ ಹಿಂದಿನ ಪೊಟೋ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. ಮಾತುಕತೆಗೆ ಸಂಬಂಧಿಸಿ ವಿಚಾರಿಸಿದಾಗ ದೇವರು ಇದ್ದಾರೆ ಎಂದಷ್ಟೇ ಪುತ್ತಿಲ ಹೇಳಿದ್ದಾರೆ.