ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಾಣ ವಿಚಾರ-ವಿಧಾನಸಭೆಯಲ್ಲಿ ಶಾಸಕ ಅಶೋಕ್‌ ಕುಮಾರ್ ರೈ ಪ್ರಸ್ತಾಪ

0

ಹೊಸ ರೀತಿಯಲ್ಲಿ ಡ್ರೈನೇಜ್ ಫೆಸಿಲಿಟಿ ಕಲ್ಪಿಸುವಂತೆ ಆಗ್ರಹ

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈಯವರು ಜು.5 ರಂದು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. 15 ವರ್ಷದ ಹಿಂದಿನ ಸರ್ವೆ ಬಿಟ್ಟು ಹೊಸ ಕನ್ಸಲ್ಟೆನ್ಸಿಯನ್ನು ನೇಮಿಸಿ ಪುನಃ ಜಿಯೋಗ್ರಾಪಿಕಲ್ ಸರ್ವೆ ಮಾಡಿಸುವಂತೆ ಅಶೋಕ್ ಕುಮಾರ್ ರೈಯವರು ಪೌರಾಡಳಿತ ಸಚಿವರಿಗೆ ಅಧಿವೇಶನದಲ್ಲಿ ಮನವಿ ಮಾಡಿದ್ದಾರೆ.

ಗಮನ ಸೆಳೆಯುವ ಸೂಚನೆ ವೇಳೆ ವಿಚಾರ ಪ್ರಸ್ತಾಪಿಸಿದ ಶಾಸಕ ಅಶೋಕ್ ಕುಮಾರ್ ರೈಯವರು, ಪುತ್ತೂರು ನಗರಸಭೆಯು 32.23 ಚದರ ಕಿಲೋಮೀಟರ್ ಭೌಗೋಳಿಕ ವ್ಯಾಪ್ತಿ ಹೊಂದಿದೆ. ಇಲ್ಲಿ 16,074 ವಸತಿಗಳು, 5378 ವಾಣಿಜ್ಯ ಕಟ್ಟಡಗಳು, 32 ಕೈಗಾರಿಕೆ ಕಟ್ಟಡಗಳು, 3057 ಇತರೇ ಕಟ್ಟಡಗಳಿದ್ದು, 12 ಎಂಎಲ್‌ಡಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. 15 ಸಾವಿರ ವಿದ್ಯಾರ್ಥಿಗಳು ಬಂದು ಹೋಗುತ್ತಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಬೋರ್‌ವೆಲ್, ಬಾವಿ ನೀರುಗಳು ಕಲುಷಿತಗೊಳ್ಳುತ್ತಿವೆ. ಪುತ್ತೂರು ಬೆಳೆಯುತ್ತಿರುವ ನಗರವಾಗಿದ್ದು ಹೊಸ ಹೊಸ ಕೈಗಾರಿಕೆಗಳೂ ಬರುತ್ತಿರುವುದರಿಂದ ಒಳಚರಂಡಿ ವ್ಯವಸ್ಥೆ ಅತ್ಯಂತ ಮುಖ್ಯವಾಗಿದೆ ಎಂದು ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಪೌರಾಡಳಿತ ಸಚಿವರು, ಕೆಯುಐಎಫ್‌ಡಿಸಿಯ ಪತ್ರದ ಪ್ರಕಾರ 2018ರ ನ.5 ರಂದು ಪುತ್ತೂರು ನಗರದಲ್ಲಿ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಬೇಕಾದರೆ 5 ಮೀಟರ್ ಅಗಲ ಮತ್ತು ಅಂದಾಜು 34 ಕಿ.ಮೀ ಉದ್ದದ ಜಮೀನು ಸ್ವಾಧೀನ ಪಡಿಸಬೇಕಾಗುತ್ತದೆ. ಆದರೆ ಇದು ಸಾಧ್ಯವಿಲ್ಲ. ಅಷ್ಟು ಭೂ ಸ್ವಾಧೀನ ಮಾಡಲು ಇಲ್ಲಿ ಸಾಧ್ಯವಿಲ್ಲ. ಅದರ ಬದಲಾಗಿ ಕೊಳಚೆ ನೀರಿನ ಶುದ್ದೀಕರಣ ಘಟಕ ಸ್ಥಾಪನೆ ಮಾಡುವ ಕುರಿತು ಯೋಜನೆ ಹಾಕಲಾಗಿದೆ. ಈ ಯೋಜನೆಯಲ್ಲಿ ಮನೆ ಮನೆಗೆ ವಾಹನಗಳು ತೆರೆಳಿ ಅಲ್ಲಿಂದ ಸಂಗ್ರಹವಾದ ಕೊಳಚೆ ತ್ಯಾಜ್ಯವನ್ನು ಪ್ರತ್ಯೇಕ ದೊಡ್ಡ ಘಟಕದಲ್ಲಿ ಶುದ್ದೀಕರಣ ಮಾಡಿ ಅಲ್ಲಿ ಘನ ತ್ಯಾಜ್ಯ ಪ್ರತ್ಯೇಕಿಸಿ ಅದನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಕೆಲಸ ಆಗಲಿದೆ. 2011ರ ಜನಗಣತಿ ಪ್ರಕಾರ ಇದನ್ನು ಸರ್ವೆ ಮಾಡಿದ್ದಾರೆ.

ಸಮುದಾಯ ಶೌಚಾಲಯ ಸಂಖ್ಯೆ ಆಧಾರಿಸಿ 15 ಕೆ.ಜಿ ಸಾಮರ್ಥ್ಯದ ಸಂಸ್ಕರಣಾ ಶುದ್ದೀಕರಣ ಘಟಕವನ್ನು ಪುತ್ತೂರಿನ ಚಿಕ್ಕಮುಡ್ನೂರು ಸರ್ವೆ ನಂ. 102 ರಲ್ಲಿ ಸುಮಾರು 5.5 ಎಕ್ರೆ ಜಾಗದಲ್ಲಿ ಮಾಡಬೇಕಾಗಿದೆ. ಇದಕ್ಕೆ ರೂ.4.19 ಕೋಟಿ ವೆಚ್ಚ ಆಗಲಿದೆ ಎಂದರು. ಎಸ್‌ಟಿಪಿ ಘಟಕ ತಕ್ಷಣಕ್ಕೆ ಆಗುವುದಿಲ್ಲ. ಅಲ್ಲಿನ ತನಕ ತಾತ್ಕಾಲಿಕ ಘಟಕ ಮಾಡಬೇಕೆಂದರು. ಆದರೆ ಒಳಚರಂಡಿಯೇ ಪುತ್ತೂರಿಗೆ ಬೇಕೆಂದು ಪಟ್ಟು ಹಿಡಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಂಗಳೂರು ಕೂಡಾ ಎತ್ತರ ತಗ್ಗು ಇರುವ ಪ್ರದೇಶ. ಪುತ್ತೂರು ಕೂಡಾ ಅದೇ ರೀತಿ ಇರುವ ಪ್ರದೇಶ. ಜನಸಂಖ್ಯೆ ಹೆಚ್ಚು ಇದೆ. ಮನೆ ವಸತಿ ಸಮುಚ್ಛಾಯಗಳಿವೆ. ಇಂತಹ ಸಂದರ್ಭದಲ್ಲಿ ಕೊಳಚೆ ಸಂಗ್ರಹಿಸಿ ಮಾಡುವ ಶುದ್ಧೀಕರಣ ಘಟಕ ಸೂಕ್ತವಲ್ಲ. ಪುತ್ತೂರಿಗೆ ಒಳಚರಂಡಿಯೇ ಬೇಕು. ಹಾಗಾಗಿ ಹೊಸ ಕನ್ಸಲ್ಟೆನ್ಸಿಯನ್ನು ನೇಮಿಸಿ ಪುನಃ ಜಿಯೋಗ್ರಾಪಿಕಲ್ ಸರ್ವೇ ಮಾಡಿಸಿ. ಇವತ್ತು ಸಮುದ್ರದ ಅಡಿಯಲ್ಲೂ ಕೂಡಾ ರೈಲು ಹೋಗುತ್ತದೆ. ಹಾಗಿದ್ದಾಗ ಇಲ್ಲಿ ಒಳಚರಂಡಿ ಮಾಡಲು ದೊಡ್ಡ ಕಷ್ಟಕರ ಕೆಲಸವಲ್ಲ. ಹೊಸ ರೀತಿಯಲ್ಲಿ ಡ್ರೈನೇಜ್ ಪೆಸಿಲಿಟಿ ತರುವಂತೆ ಅವರು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ನಿಮ್ಮ ಸಲಹೆಯನ್ನು ಪಡೆದು ಮುಂದೇನು ಮಾಡಬೇಕೆಂದು ನೋಡುತ್ತೇನೆ ಎಂದು ಉತ್ತರಿಸಿದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here