ನೆಲ್ಯಾಡಿ: ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು ಇದನ್ನು ತೆರವುಗೊಳಿಸುವಂತೆ ಇಚ್ಲಂಪಾಡಿ ಗ್ರಾಮದ ನಿಡ್ಯಡ್ಕ, ಕುಂಞಿಮಾರು ಗ್ರಾಮಸ್ಥರು ಜು.5ರಂದು ಕಡಬ ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ.
ಇಚ್ಲಂಪಾಡಿ ಗ್ರಾಮದ ಸರ್ವೆ ನಂ.98 1ಎ(ಪಿ1) ಸರ್ಕಾರಿ ಸ್ಥಳವಾಗಿದ್ದು ಈ ಜಮಿನು ಅಕ್ರಮ ಸಕ್ರಮದಡಿಯಲ್ಲಿ ಮೋಳಿಕುಟ್ಟಿ ತೋಮಸ್‌ರವರಿಗೆ ಮಂಜೂರಾಗಿದೆ. ಆರ್‌ಟಿಸಿ ನೀಡುವಾಗ ಹಕ್ಕುಗಳ ಅನುಬಂಧದ ಅಡಿಯಲ್ಲಿ 0.15 ಲಿಂಕ್ಸ್ ಅಗಲದ ರಸ್ತೆಯನ್ನು ಊರ್ಜಿತದಲ್ಲಿ ಇಟ್ಟಿರುತ್ತಾರೆ. ಇಲ್ಲಿ ಸುಮಾರು 60 ಕುಟುಂಬಗಳು ವಾಸಿಸುತ್ತಿದ್ದು ಇದು ಶಾಲಾ ಮಕ್ಕಳಿಗೆ ಹೋಗಿ ಬರುವಂತಹ ಏಕೈಕ ಕಾಲುದಾರಿಯಾಗಿದೆ. ಈ ರಸ್ತೆಯನ್ನು ಮುಚ್ಚಿದ ಬಗ್ಗೆ ಗ್ರಾಮ ಪಂಚಾಯಿತಿಗೂ ಮನವಿ ಸಲ್ಲಿಸಿದ್ದು ಪಂಚಾಯತಿಯವರು ಹಾಗೂ ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ತಡೆಗೋಡೆಯನ್ನು ತೆಗೆದಿದ್ದರು. ಆದರೆ ಮೋಳಿಕುಟ್ಟಿ ತೋಮಸ್ ಹಾಗೂ ಅವರ ಪತಿ ಎಮ್.ಎಮ್.ತೋಮಸ್‌ರವರು ರಸ್ತೆಯನ್ನು ಮತ್ತೆ ಮುಚ್ಚಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗಿದ್ದು ರಸ್ತೆ ಬಂದ್ ಮಾಡಿರುವುದನ್ನು ತೆರವುಗೊಳಿಸುವಂತೆ ಮನವಿಯಲ್ಲಿ ಕೋರಿದ್ದಾರೆ. ಅಲ್ಲದೇ ಈ ಬಗ್ಗೆ ಮೋಳಿಕುಟ್ಟಿಯವರು ಪೊಲೀಸ್ ಇಲಾಖೆಗೆ ಸುಳ್ಳು ಅರ್ಜಿ ನೀಡಿದ್ದು ಅದನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಕೋರಿದ್ದಾರೆ.