ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಅನ್ನಪೂರ್ಣ ಯೋಜನೆಯ ನೂತನ ಪಾಕಶಾಲೆ ʼಸಾನ್ನಿಧ್ಯʼ ಲೋಕಾರ್ಪಣೆ

0

ಪುತ್ತೂರು: ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ನೀಡುವ ಅನ್ನಪೂರ್ಣ ಯೋಜನೆಯ ನೂತನ ಪಾಕಶಾಲೆ ʼಸಾನ್ನಿಧ್ಯʼ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜು.6ರಂದು ನೆರವೇರಿತು.
ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ ವಿ.ಎಸ್ ಭಟ್ ನೇತೃತ್ವದಲ್ಲಿ ಗಣಪತಿ ಹೋಮ ನಡೆದು ʼಸಾನ್ನಿಧ್ಯʼ ಅನ್ನಪೂರ್ಣ ಪಾಕಶಾಲೆಯು ಪ್ರವೇಶೋತ್ಸವ ನೆರವೇರಿತು.


ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ.ಗೌರಿ ಪೈ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ವಿವೇಕಾನಂದಕ್ಕೆ ತನ್ನದೇ ಆದ ಸ್ಥಾನವಿದೆ. ವಿವೇಕಾನಂದ ಸಂಸ್ಥೆ ಎನ್ನುವ ಹೆಸರಿಗೇ ಒಂದು ಹೆಮ್ಮೆಯಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳಿಗೂ ಹೆಮ್ಮೆಯಿದೆ. ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸಿ, ಸನ್ಮಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಸುಧಾ ಎಸ್.ರಾವ್ ಮಾತನಾಡಿ, ಹಸಿವಿನಿಂದ ಕೂಡಿದ ಮಕ್ಕಳು ವಿದ್ಯಾದಾನ ಪಡೆಯಲು ಶಕ್ತರಿರುವುದಿಲ್ಲ. ವಿದ್ಯಾದಾನದಷ್ಟೇ ಮಹತ್ವ ಅನ್ನದಾನಕ್ಕೂ ಇದೆ. ಕನ್ನಡ ಮಾಧ್ಯಮ ಶಾಲೆಯು ವಿವೇಕಾನಂದ ವಿದ್ಯಾವರ್ಧಕ ಸಂಘದಲ್ಲಿ ಹೆಮ್ಮೆಯ ಗರಿ. ಇಲ್ಲಿನ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣದಿಂದಾಗಿ ಪಟ್ಟಣದಲ್ಲಿ ಕನ್ನಡ ಮಾಧ್ಯಮ ಶಾಲೆ ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಂಸ್ಥೆಯ ರಾಯಭಾರಿಗಳಾಗಿ ಹೊರ ಹೊಮ್ಮುತ್ತಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ ಕೃಷ್ಣ ಭಟ್ ಮಾತನಾಡಿ, ಸುಮಾರು 22 ಗ್ರಾಮಗಳಿಂದ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಠಿಯಿಂದ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಆಡಳಿತ ಮಂಡಳಿ, ಶಿಕ್ಷಕರಲ್ಲಿದ್ದು ಅದು ಈಗ ಈಡೇರಿದೆ. ಹಲವು ಮಂದಿ ದಾನಿಗಳು ನಮ್ಮ ಯೋಜನೆಗೆ ನಿರೀಕ್ಷೆಗಿಂತ ಹೆಚ್ಚು ಸಹಕಾರ ನೀಡಿದ್ದಾರೆ. ʼಸಾನ್ನಿಧ್ಯʼದಲ್ಲಿ ವಿದ್ಯೆ, ಅನ್ನದ ಜೊತೆಗೆ ವಿದ್ಯಾರ್ಥಿಗಳ ಬೌಧಿಕ ಹೊಟ್ಟೆಯ ಹಸಿವು ನೀಗಿಸಲಾಗುತ್ತಿದ್ದು, ಇಲ್ಲಿಂದ ಹೊರ ಹೊಮ್ಮುವ ವಿದ್ಯಾರ್ಥಿಗಳು ಸಮಾಜದ ಹಸಿವು ತಣಿಸುವಂತೆ ಬೆಳವಣಿಗೆಯಾಗಲಿ ಎಂದರು.
ಸನ್ಮಾನ:
ಅನ್ನಪೂರ್ಣ ಯೋಜನೆಯ ಪಾಕಶಾಲೆ ʼಸಾನ್ನಿಧ್ಯʼಕ್ಕೆ ಸುಮಾರು ರೂ.5 ಲಕ್ಷ ವೆಚ್ಚದಲ್ಲಿ ಸ್ಟೀಮ್‌ನ್ನು ಕೊಡುಗೆಯಾಗಿ ನೀಡಿದ ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್ ನ ಅಧ್ಯಕ್ಷೆ ಡಾ.ಗೌರಿ ಪೈಯವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಆಡಳಿತ ಮಂಡಳಿ ಸದಸ್ಯೆ ಡಾ.ಆಶಾ ಗೌರಿ ಪೈಯವರ ಪರಿಚಯ ಮಾಡಿದರು.
ಅನ್ನಪೂರ್ಣ ಯೋಜನೆಯ ಅಧ್ಯಕ್ಷ ಸುಹಾಸ್ ಮಜಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ನಾಯಕ್, ಶಾಲಾ ಸಂಚಾಲಕ ವಸಂತ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುನೀತ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಖಜಾಂಚಿ ಅಶೋಕ್ ಕುಂಬ್ಳೆ ವಂದಿಸಿದರು. ಶಿಕ್ಷಕಿ ವೀಣಾ ಸರಸ್ವತಿ ಪ್ರಾರ್ಥಿಸಿದರು. ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ನಾಳೆ(ಜು.7) ಸಭಾ ಸಮಾರಂಭ:
ಅನ್ನಪೂರ್ಣ ಯೋಜನೆಯ ನೂತನ ಪಾಕಶಾಲೆ ʼಸಾನ್ನಿಧ್ಯʼ ಲೋಕಾರ್ಪಣೆಯ ಅಂಗವಾಗಿ ಜು.7ರಂದು ಬೆಳಿಗ್ಗೆ ಸಭಾ ಕಾರ್ಯಕ್ರಮ ನಡೆಯಲಿದೆ. ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ದ್ವಾರಕಾ ಕನ್‌ಸ್ಟ್ರಕ್ಷನ್ ಮ್ಹಾಲಕ ಗೋಪಾಲಕೃಷ್ಣ ಭಟ್, ಪ್ರಗತಿಪರ ಕೃಷಿ ವಾಸು ಪೂಜಾರಿ ಗುಂಡ್ಯಡ್ಕ, ಮಹಾವೀರ ಮೆಡಿಕಲ್ ಸೆಂಟರ್‌ನ ವೈದ್ಯೆ ಡಾ.ಅರ್ಚನಾ ಕೆ. ನಾಯಕ್, ಶಾಲಾ ಹಿರಿಯ ವಿದ್ಯಾರ್ಥಿಯಾಗಿರುವ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಕಾಸ್ ಕಡಮಣ್ಣಾಯ ಹಾಗೂ ವಿವೇಕಾನಂದ ವಿದ್ಯಾ ವರ್ಧಕ ಸಂಘದ ನಿರ್ದೇಶಕಿ ವಸಂತ ಮಾಧವ ಟಿ ಅಭ್ಯಾಗತರಾಗಿ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here