ಸಬೂಬು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು-ಕಡಬದಲ್ಲಿ ಪ್ರಾಕೃತಿಕ ವಿಕೋಪ ತಡೆ ಮುಂಜಾಗ್ರತಾ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರ ತಾಕೀತು

0

ಕಡಬ: ಪ್ರಾಕೃತಿಕ ವಿಕೋಪಗಳ ತುರ್ತು ಸಂದರ್ಭಗಳಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಪರಿಹಾರ ಕಾರ್ಯಗಳಿಗೆ ಕೈಜೋಡಿಸಿ ಪರಿಸ್ಥಿತಿಯನ್ನು ನಿಭಾಯಿಸಿದರೆ ಮಾತ್ರ ಪ್ರಾಕೃತಿಕ ವಿಕೋಪಗಳಿಗೆ ಪರಿಹಾರ ಸಾಧ್ಯ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಹೇಳಿದರು.


ಅವರು ಪ್ರಾಕೃತಿಕ ವಿಕೋಪದ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಲು ಕಾರ್ಯತಂತ್ರ ರೂಪಿಸುವ ಬಗ್ಗೆ ಕಡಬದ ಮಿನಿ ವಿಧಾನಸೌಧದಲ್ಲಿ ಸೋಮವಾರ ಜರಗಿದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾರದ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ನೆರೆ, ಭೂ ಕುಸಿತ ಮುಂತಾದ ಪ್ರಾಕೃತಿಕ ವಿಪತ್ತುಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಸಾಧ್ಯ. ಪ್ರಾಕೃತಿಕ ವಿಕೋಪದ ಹೆಚ್ಚಿನ ಸಂದರ್ಭಗಳಲ್ಲಿ ಅರಣ್ಯ, ಕಂದಾಯ, ಆರೋಗ್ಯ, ಲೋಕೋಪಯೋಗಿ ಮುಂತಾದ ಇಲಾಖೆಗಳು ಜತೆಯಾಗಿ ಕೆಲಸ ಮಾಡಬೇಕಾಗುತ್ತದೆ. ಆ ಇಲಾಖೆಯವರು ಬಂದಿಲ್ಲ, ಈ ಇಲಾಖೆಯವರು ಬಂದಿಲ್ಲ ಎಂದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಕೆಲಸವನ್ನು ಯಾರೂ ಮಾಡಬಾರದು. ದುರಂತಗಳು ಸಂಭವಿಸಿದಾಗ ಗ್ರಾಮಮಟ್ಟದ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ತತ್‌ಕ್ಷಣ ಸ್ಥಳಕ್ಕೆ ಧಾವಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು. ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳು ಸಬೂಬು ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಆರ್ಥಿಕವಾಗಿ ಹಿಂದುಳಿದ ಬಡ ಸಂತ್ರಸ್ತರಿಗೆ ಪರಿಹಾರ ನೀಡುವ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ನೋಡಿಕೊಂಡು ನಿಜವಾಗಿಯೂ ಅರ್ಹರಾಗಿದ್ದರೆ ಕಾನೂನನ್ನು ಸಡಿಲಿಸಿಕೊಂಡು ಮಾನವೀಯ ನೆಲೆಯಲ್ಲಿ ನೆರವು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು. ಕಡಬ ತಹಶೀಲ್ದಾರ್ ರಮೇಶ್‌ಬಾಬು ಪೂರಕ ಮಾಹಿತಿ ನೀಡಿದರು. ಬೆಳಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿನ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಅಧಿಕಾರಿಗಳ ನೆರವು ಪಡೆದುಕೊಳ್ಳುವಂತೆ ಅಲ್ಲಿನ ಪಿಡಿಒ ನಾರಾಯಣ ನಾಕ್ ಅವರಿಗೆ ಶಾಸಕಿ ಸೂಚಿಸಿದರು.

ಕುಟ್ರುಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಬ್ಬರ್ ಮರಗಳನ್ನು ಸಾಗಿಸುವ ಬೃಹತ್ ಲಾರಿಗಳಿಂದಾಗಿ ಗ್ರಾಮೀಣ ರಸ್ತೆಗಳು ಹಾನಿಗೊಳ್ಳುತ್ತಿರುವ ಕುರಿತು ಪಿಡಿಒ ಆನಂದ ಗೌಡ ಗಮನ ಸೆಳೆದರು. ಅಂತಹವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕಿ ಸೂಚಿಸಿದರು. ಲೊಕೋಪಯೋಗಿ ಇಲಾಖೆ ಎಇಇ ರಾಜಾರಾಮ್, ಇಂಜಿನಿಯರ್ ಕನಿಷ್ಕಚಂದ್ರ, ಜಿ.ಪಂ.ಎಇಇ ಭರತ್ ಬಿ.ಎಂ., ಇಂಜಿನಿಯರ್ ಸಂಗಪ್ಪ ಹುಕ್ಕೇರಿ, ತಾಲೂಕು ಆರೋಗ್ಯಾಧಿಕಾರಿ ಡಾ|ದೀಪಕ್ ರೈ, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಸುಚಿತ್ರಾ ರಾವ್, ಕಡಬ ಮೆಸ್ಕಾಂ ಎಇಇ ಸಜಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಕಡಬ ಪಶು ವೈದ್ಯಾಧಿಕಾರಿ ಡಾ|ಅಜಿತ್, ಕಡಬ ಉಪ ತಹಶೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ, ಕಂದಾಯ ನಿರೀಕ್ಷಕ ಪೃಥ್ವಿರಾಜ್, ತಾ.ಪಂ. ವ್ಯವಸ್ಥಾಪಕ ಭುವನೇಂದ್ರಕುಮಾರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಕರಣಿಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ಕುಮಾರ್ ಭಂಡಾರಿ ಸ್ವಾಗತಿಸಿ, ಉಪ ತಹಶೀಲ್ದಾರ್ ಕೆ.ಟಿ.ಮನೋಹರ್ ವಂದಿಸಿದರು.

ಸಭೆಯ ಬಗ್ಗೆ ನಮಗೆ ಮಾಹಿತಿಯೇ ಇಲ್ಲ -ಅಸಮಾಧಾನ ವ್ಯಕ್ತಪಡಿಸಿದ ಪತ್ರಕರ್ತರು
ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪ ಸಭೆ ನಡೆಯುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡದೇ ಇದ್ದುದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಮಾತನಾಡಿ, ಇಂದಿನ ಸಭೆಯ ಬಗ್ಗೆ ಮಾಧ್ಯಮದವರಿಗೆ ಯಾವುದೇ ಮಾಹಿತಿ ನೀಡಿಲ್ಲ ಯಾಕೆ, ಪತ್ರಿಕೆಯಲ್ಲಿ ಬಂದರೆ ಸಮಸ್ಯೆಯಾಗುತ್ತದೆಯೇ? ಎಂದು ಪ್ರಶ್ನಿಸಿದರು. ಈ ಹಿಂದೆ ಸಣ್ಣ ಕಾರ್ಯಕ್ರಮ ಇದ್ದರೂ ಮಾಧ್ಯಮ ಮತ್ತು ಇಲಾಖೆಯ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಾಕುತ್ತಿದ್ದಿರಿ ಎಂದು ಅವರು ಹೇಳಿದಾಗ ಶಾಸಕಿಯವರು ಉತ್ತರಿಸಿ ಇದು ತುರ್ತು ಸಭೆ ಎಂದು ಹೇಳಿದರು. ಇದನ್ನು ಪ್ರಶ್ನಿಸಿದ ನಾಗರಾಜ್ ಎನ್.ಕೆಯವರು. ತುರ್ತು ಸಭೆ ಆಗಿರಬಹುದು ಆದರೆ ಇಷ್ಟು ಅಧಿಕಾರಿಗಳಿಗೆ ಮಾಹಿತಿ ನೀಡುವಾಗ ನಮಗೂ ಮೆಸೇಜ್ ಆದ್ರು ಹಾಕಬಹುದಿತ್ತಲ್ವ ಎಂದು ಹೇಳಿದರು. ಈ ಬಗ್ಗೆ ಉಪ ತಹಸೀಲ್ದಾರ್ ಮನೋಹರ್ ಕೆ.ಟಿ. ಮಾತನಾಡಿ, ನಮ್ಮಿಂದ ತಪ್ಪಾಗಿದೆ ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿದರು. ಶಾಸಕರು ಮತ್ತು ತಹಶೀಲ್ದಾರ್ ಮಾಧ್ಯಮ ಪ್ರತಿನಿಧಿಗಳನ್ನು ಸಮಾಧಾನಪಡಿಸಿದರು.

LEAVE A REPLY

Please enter your comment!
Please enter your name here