ಉಪ್ಪಿನಂಗಡಿ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಕಾಲ ಘಟ್ಟದಲ್ಲಿ ಪರಿಸರ ರಕ್ಷಣೆಯ ಕಾರ್ಯದಲ್ಲಿ ಪ್ರತಿಯೋರ್ವ ವ್ಯಕ್ತಿಯೂ ತೊಡಗಿಸಿಕೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ ಕರೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಕೆಎನ್‌ಆರ್ ಸಂಸ್ಥೆಯ ವತಿಯಿಂದ ನೀರಕಟ್ಟೆಯ ಸಮೀಪ ಆಯೋಜಿಸಲಾದ ಹೆದ್ದಾರಿಯಲ್ಲಿ ಹಸಿರೀಕರಣ (ವನ ಮಹೋತ್ಸವ) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಚತುಷ್ಪಥಗೊಳ್ಳುವ ಹೆದ್ದಾರಿಯ ನಡುವೆ ಗಿಡ ಮರಗಳನ್ನು ನೆಡುವ ಮತ್ತು ಪೋಷಿಸುವ ಮೂಲಕ ಹಸಿರು ತನ್ಮೂಲಕ ಉಸಿರು ಮತ್ತು ನೆರಳು ಲಭಿಸುವಂತೆ ಯೋಜನೆ ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧಿಕಾರಿಗಳಾದ ಜೆ.ಎಂ. ಪಟ್ನಾಯಕ್, ರಘುನಾಥ್ ರೆಡ್ಡಿ, ಆಶಿಕಾ, ವಿವೇಕಾನಂದ ಮತ್ತಿತರರು ಭಾಗವಹಿಸಿದ್ದರು. ಈ ಸಂದರ್ಭ ಹೆದ್ದಾರಿ ವಿಭಜಕದ ನಡುವೆ ವಿವಿಧ ಗಿಡಗಳನ್ನು ನೆಡಲಾಯಿತು.
ಸಂಸ್ಥೆಯ ಸಿಬ್ಬಂದಿ ಶ್ರೀನಿವಾಸ್ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ನಂದಕುಮಾರ್ ವಂದಿಸಿದರು.