11ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಆರ್ಯಾಪು-5, ನಿಡ್ಪಳ್ಳಿ-6 ನಾಮಪತ್ರ
ಇಂದು ನಾಮಪತ್ರಗಳ ಪರಿಶೀಲನೆ
ಜು.15:ನಾಮಪತ್ರ ಹಿಂಪಡೆಯಲು ಕೊನೆಯ ದಿನ
ಪುತ್ತೂರು:ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಸದಸ್ಯರೀರ್ವರ ನಿಧನದಿಂದಾಗಿ ತೆರವಾಗಿರುವ ಎರಡು ಸ್ಥಾನಗಳಿಗೆ ಜು.23ರಂದು ನಡೆಯಲಿರುವ ಉಪ ಚುನಾವಣೆಗೆ ಆರ್ಯಾಪು ಗ್ರಾ.ಪಂ.ನಲ್ಲಿ 5 ಹಾಗೂ ನಿಡ್ಪಳ್ಳಿ ಗ್ರಾ.ಪಂ.ನಲ್ಲಿ 6 ನಾಮಪತ್ರ ಸಲ್ಲಿಕೆಯಾಗಿದೆ.ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ಅಂತಿಮ ದಿನವಾದ ಜು.12ರಂದು ಆರ್ಯಾಪು ಗ್ರಾ.ಪಂನಲ್ಲಿ 3 ಹಾಗೂ ನಿಡ್ಪಳ್ಳಿ ಗ್ರಾ.ಪಂನಲ್ಲಿ 2 ನಾಮಪತ್ರ ಸಲ್ಲಿಕೆಯಾಗಿದೆ.
ನಿಡ್ಪಳ್ಳಿ ಗ್ರಾ.ಪಂನ ನಿಡ್ಪಳ್ಳಿ ವಾರ್ಡ್ 2ರ ಸಾಮಾನ್ಯ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದ ಮುರಳಿ ಭಟ್‌ರವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಗೆ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಜಗನ್ನಾಥ್ ರೈ ಕೊಳೆಂಬೆತ್ತಿಮಾರು, ಕೆ.ನಾರಾಯಣ ಪಾಟಾಳಿ, ಕುಮಾರ ನರಸಿಂಹ ಭಟ್ ಬುಲೇನಡ್ಕ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಂದ್ರಶೇಖರ ಪ್ರಭು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸತೀಶ್ ಶೆಟ್ಟಿ ಹಾಗೂ ಹರೀಶ್‌ರವರು ನಾಮಪತ್ರ ಸಲ್ಲಿಸಿದ್ದಾರೆ.
ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್ 2 ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದ ನಿವೃತ್ತ
ಎಸ್.ಐ.ರುಕ್ಮಯ್ಯ ಮೂಲ್ಯ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಮತ್ತು ನವೀನ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಜಗದೀಶ್ ಭಂಡಾರಿ, ಹಾಲಿ ಸದಸ್ಯ ವಸಂತ ಶ್ರೀದುರ್ಗಾ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಿ.ಪುರುಷೋತ್ತಮ ಪ್ರಭು ನಾಮಪತ್ರ ಸಲ್ಲಿಸಿದ್ದಾರೆ.
ಇಂದು ನಾಮಪತ್ರ ಪರಿಶೀಲನೆ:
ಉಪ ಚುನಾವಣೆಗೆ ಸಂಬಂಧಿಸಿದಂತೆ ಜು.13ರಂದು ಪಂಚಾಯತ್‌ನಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ನಾಮಪತ್ರ ಹಿಂತೆಗೆದುಕೊಳ್ಳಲು ಜು.15 ಅಂತಿಮ ದಿನವಾಗಿದೆ.ಜು.23ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ಗಂಟೆಯ ತನಕ ಮತದಾನ ಪ್ರಕ್ರಿಯೆಗಳು ನಡೆಯಲಿದೆ.ಅವಶ್ಯವಿದ್ದರೆ ಜ.25ರಂದು ಮರುಮತದಾನ ನಡೆದು ಜು.26ರಂದು ಮತ ಎಣಿಕೆ ನಡೆಯಲಿದೆ.