*ಯತೀಶ್ ಉಪ್ಪಳಿಗೆ
ಪುತ್ತೂರು: ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ `ಶಕ್ತಿ ಯೋಜನೆ’ ಜಾರಿಯಾಗಿ ಒಂದು ತಿಂಗಳು ಪೂರೈಸಿದೆ.ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಲ್ಲಿಯೂ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಒಂದು ತಿಂಗಳಲ್ಲಿ ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 25.55 ಲಕ್ಷ ಮಹಿಳೆಯರು ಪ್ರಯಾಣಿಸುವ ಮೂಲಕ ಉಚಿತ ಪ್ರಯಾಣ ಯೋಜನೆಯ ಸದುಪಯೋಗ ಪಡೆದುಕೊಂಡಿರುವುದಾಗಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಥಮವಾಗಿ ಶಕ್ತಿ ಯೋಜನೆಗೆ ಜೂ.11ರಂದು ಅಧಿಕೃತ ಚಾಲನೆ ನೀಡಲಾಗಿತ್ತು.ಅಂದಿನಿಂದ ಜು.11ರ ತನಕದ ಒಂದು ತಿಂಗಳ ಅವಧಿಯ ಅಂಕಿ ಅಂಶಗಳ ಪ್ರಕಾರ, ನಿಗಮದ ಪುತ್ತೂರು ವಿಭಾಗದ ವ್ಯಾಪ್ತಿಯ ಐದು ಘಟಕಗಳ ವ್ಯಾಪ್ತಿಯಲ್ಲಿ ಶಕ್ತಿ ಯೋಜನೆಯ ಉಚಿತ ಟಿಕೆಟ್‌ನಲ್ಲಿ 25.55ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಪುತ್ತೂರು ವಿಭಾಗದ ಪುತ್ತೂರು ಘಟಕದಲ್ಲಿ 7.17 ಲಕ್ಷ, ಧರ್ಮಸ್ಥಳ ಘಟಕದಲ್ಲಿ 5.68 ಲಕ್ಷ, ಮಡಿಕೇರಿ ಘಟಕದಲ್ಲಿ 4.12 ಲಕ್ಷ, ಬಿ.ಸಿ ರೋಡ್ ಘಟಕದಲ್ಲಿ 5.17 ಲಕ್ಷ ಹಾಗೂ ಸುಳ್ಯ ಘಟಕದಲ್ಲಿ 3.41 ಲಕ್ಷ ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.
ಟಿಕೆಟ್ ಮೊತ್ತ ರೂ.8.61 ಕೋಟಿ: ಪುತ್ತೂರು ವಿಭಾಗದ ಐದು ಘಟಕಗಳ ವ್ಯಾಪ್ತಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೊತ್ತ ರೂ.8.61,15,000 ಆಗಿದೆ.ಪುತ್ತೂರು ಘಟಕದಲ್ಲಿ ರೂ.1.72 ಕೋಟಿ, ಧರ್ಮಸ್ಥಳ ಘಟಕದಲ್ಲಿ ರೂ.2.84 ಕೋಟಿ, ಮಡಿಕೇರಿ ಘಟಕದಲ್ಲಿ ರೂ.1.57 ಕೋಟಿ, ಬಿ.ಸಿ ರೋಡ್ ಘಟಕದಲ್ಲಿ ರೂ.1.44 ಕೋಟಿ ಹಾಗೂ ಸುಳ್ಯ ಘಟಕದಲ್ಲಿ ರೂ.1.02 ಕೋಟಿಯಾಗಿದೆ.
ಪ್ರತಿದಿನ 3೦,೦೦೦ ಪ್ರಯಾಣಿಕರ ಏರಿಕೆ: ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೆ ಮೊದಲು ಪ್ರತಿದಿನ ಸರಾಸರಿಯಾಗಿ 1.62 ಲಕ್ಷ ಮಂದಿ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದರು.ಯೋಜನೆ ಜಾರಿಯ ಬಳಿಕ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು ಪ್ರತಿದಿನ 1.92 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ.ವಾರಾಂತ್ಯದಲ್ಲಿ ಪ್ರತಿದಿನ ೨ ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಪ್ರತಿದಿನ ಸರಾಸರಿಯಾಗಿ 3೦,೦೦೦ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ.
ಯೋಜನೆ ಜಾರಿಯಾದ ಮೂರು ವಾರಗಳ ವಾರಾಂತ್ಯದಲ್ಲಿ ತೀರ್ಥ ಕ್ಷೇತ್ರಗಳಾದ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಗಳಿಗೆ ಆಗಮಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ.ಹೀಗಾಗಿ ಸುಬ್ರಹ್ಮಣ್ಯ ರೂಟ್‌ನಲ್ಲಿ 25 ಹೆಚ್ಚುವರಿ ಬಸ್ ಬಳಸಿಕೊಳ್ಳಲಾಗಿದೆ.ಧರ್ಮಸ್ಥಳ-ಸುಬ್ರಹ್ಮಣ್ಯ ಮಧ್ಯೆ ದಿನವೊಂದಕ್ಕೆ ೩ ಹೆಚ್ಚುವರಿ ಟ್ರಿಪ್ ಬಳಸಲಾಗಿದೆ. ಉಚಿತ ಬಸ್ ಯೋಜನೆಯ ಬಳಿಕ,ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದು ಸುಬ್ರಹ್ಮಣ್ಯದಲ್ಲಿ ಬಸ್‌ನ ಬೇಡಿಕೆ ಅಧಿಕವಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.
ಯಶಸ್ವಿಯಾಗಿ ಅನುಷ್ಠಾನ
ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಮಹಿಳಾ ಪ್ರಯಾಣಿಕರು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.ಯೋಜನೆ ಜಾರಿಯ ಬಳಿಕ ಪ್ರತಿದಿನ ಪ್ರಯಾಣಿಕರ ಸಂಖ್ಯೆ 3೦,೦೦೦ ಏರಿಕೆ ಕಂಡಿದೆ.ವಾರಾಂತ್ಯದ ದಿನಗಳಲ್ಲಿ 2 ಲಕ್ಷ ಮಂದಿ ಪ್ರಯಾಣಿಸಿದ್ದು ಈ ಪೈಕಿ ಸುಮಾರು 1 ಲಕ್ಷ ಮಹಿಳಾ ಪ್ರಯಾಣಿಕರಾಗಿರುತ್ತಾರೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕವಿರುವುದರಿಂದ ಬಸ್‌ಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ವಾರಾಂತ್ಯ ಹಾಗೂ ಶಾಲಾ ಸಮಯ ಹೊರತು ಪಡಿಸಿ ಉಳಿದ ಸಮಯಗಳಲ್ಲಿ ಪ್ರಯಾಣಿಸಿ, ಸಹಕರಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ವಿನಂತಿಸಿದ್ದಾರೆ.